ಮಾರಿಮುತ್ತು…! ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರಿದು. ಈ ಹೆಸರು ಕೇಳಿದಾಕ್ಷಣ, ದಢೂತಿ ದೇಹ, ಗಡಸ್ಸು ಧ್ವನಿ ನೆನಪಾಗದೇ ಇರದು. ಹೌದು, ಮಾರಿಮುತ್ತು ಅಂದರೆ, “ಉಪೇಂದ್ರ’ ಚಿತ್ರದ ಖಡಕ್ ಆಗಿರುವ, ರೌಡಿಸಂ ಮಾಡುವ ಪಾತ್ರಧಾರಿ ಸರೋಜಮ್ಮ ಅವರ ನೆನಪಾಗುತ್ತೆ. ಈಗ ಅವರಿಲ್ಲ. ಆದರೆ, ಅವರ ಕುಟುಂಬದ ಕುಡಿಯೊಂದು ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದೆ.
ಅಷ್ಟೇ ಅಲ್ಲ, ಮೊದಲ ಬಾರಿಗೆ ನಟಿಸಿರುವ ಚಿತ್ರವೊಂದು ಈ ವಾರ ಬಿಡಗುಡೆಯೂ ಆಗುತ್ತಿದೆ. ಆ ಚಿತ್ರದ ಹೆಸರು, “ಪುಟ್ಟರಾಜು ಲವ್ವರ್ ಆಫ್ ಶಶಿಕಲಾ’. ಹೌದು, ಸರೋಜಮ್ಮ ಅಲಿಯಾಸ್ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಈಗ ನಾಯಕಿಯಾಗಿದ್ದಾರೆ. ಸರೋಜಮ್ಮ ಅವರ ಪುತ್ರನ ಮಗಳೇ ಈ ಜಯಶ್ರೀ ಆರಾಧ್ಯ. ಹಾಗೆ ನೋಡಿದರೆ, ಜಯಶ್ರೀ ಆರಾಧ್ಯ ಅವರಿಗೆ ಸಿನಿಮಾ ಇಂಟ್ರೆಸ್ಟ್ ಇರಲಿಲ್ಲವಂತೆ.
ಅವರ ಅಜ್ಜಿ ಬದುಕಿದ್ದಾಗ, ಜಯಶ್ರೀ ಪಿಯುಸಿ ಓದುತ್ತಿದ್ದರು. ಅಜ್ಜಿ ಇಲ್ಲವಾದಾಗ, ಫೇಸ್‌ಬುಕ್‌ನಲ್ಲಿ ಅಜ್ಜಿಯ ಫೋಟೋ ಹಾಕಿ, ಹಾಗೊಂದು ಸ್ಟೇಟಸ್ ಹಾಕುತ್ತಿದ್ದರು. “ಮಾರಿಮುತ್ತು’ ಮೊಮ್ಮಗಳು ಅಂತ ಗೊತ್ತಾದಾಗ, ಚಿತ್ರರಂಗದ ಅನೇಕರು ಸಂಪರ್ಕಿಸಿ, ಸಿನಿಮಾದಲ್ಲಿ ನಟಿಸುವಂತೆ ಆಹ್ವಾನಿಸುತ್ತಿದ್ದರು. ಆದರೆ, ಜಯಶ್ರೀ ಅವರೇಕೋ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೆ ಎಂಜಿನಿಯರ್ ಆಗುವ ಆಸೆ.
ಆದರೆ, ಅದ್ಹೇಗೋ ಆಕಸ್ಮಿಕವಾಗಿ ಅವಕಾಶ ಹುಡುಕಿ ಬಂತು. ಕುಟುಂಬದಲ್ಲಿ ಜಯಶ್ರೀ ಅಜ್ಜಿ ಬಿಟ್ಟರೆ, ಬೇರೆ ಯಾರೂ ಕಲಾವಿದರಲ್ಲ. ಪದೇ ಪದೇ ಹುಡುಕಿ ಬರುವ ಅವಕಾಶ ಬಳಸಿಕೊಳ್ಳುವ ಮನಸ್ಸು ಮಾಡಿದ ಜಯಶ್ರೀಗೆ ಸಿಕ್ಕಿದ್ದು, “ಪುಟ್ಟರಾಜು ಲವ್ವರ್ ಆಫ್ ಶಶಿಕಲಾ’. ಈ ಚಿತ್ರದಲ್ಲಿ ನಟಿಸಿರುವ ಜಯಶ್ರೀಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಅಲ್ಲದೆ, ಒಂದಷ್ಟು ಅವಕಾಶಗಳು ಬಂದಿವೆ. ಈಗ ಅವರ ಕೈಯಲ್ಲಿ ಮೂರು ಕಥೆಗಳಿವೆ.
ಆದರೆ, ಇನ್ನೂ ಅಂತಿಮಗೊಳಿಸಿಲ್ಲ. ಕಾರಣ, ಮೊದಲ ಚಿತ್ರ ಬಿಡುಗಡೆಯಾಗಿ, ಅವರ ನಟನೆ ಬಗ್ಗೆ ಬರುವ ಮಾತುಗಳನ್ನು ಕೇಳಿದ ಬಳಿಕ ಸಿನಿಮಾದಲ್ಲಿ ಮುಂದುವರೆಯೋ ನಿರ್ಧಾರ ಮಾಡಿದ್ದಾರೆ. ಅಂದಹಾಗೆ, ಆ ಚಿತ್ರದಲ್ಲಿ ಜಯಶ್ರೀ ಅವರದು ರಿಯಲ್ ಲೈಫ್ಗೆ ವಿರುದ್ಧವಾದ ಪಾತ್ರವಂತೆ. ಅಂದರೆ, ಚಿತ್ರದಲ್ಲಿ ತುಂಬಾನೇ ಇನ್ನೋಸೆಂಟ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲೇಜ್ ಹುಡುಗಿ ಪಾತ್ರವದು.
ರಿಯಲ್ ಲೈಫ್ನಲ್ಲಿ ಸಿಕ್ಕಾಪಟ್ಟೆ ಮಾತಾಡುವ ಜಯಶ್ರೀ, ಚಿತ್ರದಲ್ಲಿ ಸೈಲೆಂಟ್ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ. ಜಯಶ್ರೀಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಖುಷಿ ಇದೆ. ಅಜ್ಜಿ ರೀತಿ ಪಾಪ್ಯುಲರ್ ಆಗುವ ಬಗ್ಗೆ ಕನಸು ಕಂಡಿಲ್ಲ. ಆದರೆ, ಅಜ್ಜಿಯ ಮೊಮ್ಮಗಳಾಗಿ ಅವರ ಹೆಸರನ್ನು ಉಳಿಸುವ ಕಲಾವಿದೆಯಾಗುವ ಆಸೆಯಂತೂ ಇಟ್ಟುಕೊಂಡಿದ್ದಾರೆ. ಒಳ್ಳೆಯ ಫ್ಲಾಟ್‌ಫಾರಂಗಾಗಿ ಕಾಯುತ್ತಿರುವ ಜಯಶ್ರೀ, ಹೊಸ ರೀತಿಯ ಪಾತ್ರ ಎದುರು ನೋಡುತ್ತಿದ್ದಾರೆ.