ಶಿರಸಿ: ನಾಡಿನ ಹೆಸರಾಂತ ಮಾರಿಕಾಂಬಾ ದೇವಸ್ಥಾನಕ್ಕೂ ಅನ ಧಿಕೃತ ಫೇಸ್‌ಬುಕ್, ವಾಟ್ಸಆ್ಯಪ್, ಟ್ವಿಟ್ಟರ್‌ಗಳ ಕಾಟದಿಂದ ಅನಧಿಕೃತ ಮಾಹಿತಿಗಳು ರವಾನೆಯಾಗಿ ಅನೇಕ ಗೊಂದಲಗಳ ನಿವಾರಣೆ ಆಗುತ್ತಿದ್ದ ಹಿನ್ನೆಲೆಯಲ್ಲಿ ದೇವಲಾಯದಿಂದಲೇ ನವಿಕೃತ ವೆಬ್‌ಸೈಟ್ ಹಾಗೂ ಲೋಗೋ ಹೊಂದಿದ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸರಣ ಮಾಡುವ ಕಾರ್ಯಕ್ಕೆ ಮುಂದಾಗಿದೆ.
ದೇವಸ್ಥಾನದ ಅಧ್ಯಕ್ಷ ವೆಂಕಟೇಶ ನಾಯ್ಕ, ದೇವಸ್ಥಾನದಲ್ಲಿ ನೂತನ ಲೋಗೋ ಹಾಗೂ ವೆಬ್‌ಸೈಟ್ ಬಿಡುಗಡೆಗೊಳಿಸಿ ಇನ್ನು ಮುಂದೆ ದೇವಸ್ಥಾನದ ಪ್ರಕಟನೆಗಳು ಈ ಲೋಗೋ ಹೊಂದಿಯೇ ಪ್ರಸರಣ ಆಗಲಿವೆ ಎಂದೂ ಸ್ಪಷ್ಟಪಡಿಸಿದರು.
ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ದೇವಸ್ಥಾನ ನೀಡಿದ ಮಾಹಿತಿಯಂತೆ ದೇವಿಯ ಫೋಟೋ ಹಾಕಿ ಒಂದಷ್ಟು ಮಾಹಿತಿಗಳು ಬರುತ್ತಿರುವುದರಿಂದ ಸಮಸ್ಯೆಗೆ ಕಾರಣವಾಗಿತ್ತು. ಆದರೆ ಇವುಗಳಾವವೂ ಅಧಿಕೃತವಾಗಿರಲಿಲ್ಲ, ಇದರಿಂದ ಅನೇಕ ದೂರವಾಣಿ ಕರೆಗಳೂ ಬರುತ್ತಿದ್ದವು. ಹೀಗಾಗಿ ದೇವಸ್ಥಾನದಿಂದ ನೀಡುವ ಮಾಹಿತಿಗೆ ಅಧಿಕೃತ ಲೋಗೋ ಹಾಕಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ದೃಷ್ಟಿಯಿಂದ ಲೋಗೋವನ್ನು ಹೊರತಂದಿದ್ದೇವೆ. ಇನ್ನು ದೇವಸ್ಥಾನದ ದಾಖಲೆ, ಪತ್ರ ವ್ಯವಹಾರ, ಮಾಹಿತಿಗಳಲ್ಲಿ ಇದೇ ಲೋಗೋವನ್ನು ಬಳಸಲಾಗುತ್ತದೆ ಎಂದು ತಿಳಿಸಿದರು.
ದೇವಸ್ಥಾನದಲ್ಲಿ ಬಳಕೆಗೆ ಇದ್ದ ವೆಬ್‌ಸೈಟ್‌ನಲ್ಲಿ ಹೆಚ್ಚುವರಿ ಮಾಹಿತಿ ಇರದೇ ಇರುವುದಕ್ಕೆ ವೆಬ್ ಸೈಟ್ ನವಿಕೃತಗೊಳಿಸಿದ್ದೇವೆ. ದೇವಸ್ಥಾನದ ಇತಿಹಾಸ, ಆಡಳಿತ ವ್ಯವಸ್ಥೆ, ಪೂಜಾ ವ್ಯವಸ್ಥೆ ಸೇರಿದಂತೆ ಎಲ್ಲ ವಿವರಣಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತವೆ ಎಂದ ಅವರು, ದೇವಸ್ಥಾನದ
ಅಭಿವೃದ್ಧಿಗೆ ಪೂರಕ ಸಾಧ್ಯತೆಗಳ ಮಾಸ್ಟರ್ ಪ್ಲ್ಯಾನ್ ನ್ನು ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಮಾ.5 ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಸುಮಾರು 200 ಕೋಟಿ ರೂ. ಮೊತ್ತದ 13ಕಾಮಗಾರಿಗಳು ಒಳಗೊಂಡಿದೆ ಎಂದೂ ವಿವರಿಸಿದರು.
ದೇವಸ್ಥಾನ ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ ಭಂಡಿಮನೆ, ಶಶಿಕಲಾ ಚಂದ್ರಾಪಟ್ಟಣ ಉಪಸ್ಥಿತರಿದ್ದರು.