Advertisement

ಮಾರಿಕಾಂಬಾ ಕ್ರೀಡಾಂಗಣ ಸಮಸ್ಯೆಗಳ ಅಂಕಣ

04:09 PM Jul 08, 2019 | Suhan S |

ಶಿರಸಿ: ಜಿಲ್ಲೆಯ ಕ್ರೀಡಾಳುಗಳಿಗೆ ಪ್ರೇರಣೆ ನೀಡಬೇಕಿದ್ದ ಹೆಮ್ಮೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಮಳೆಗಾಲ ಬಂದರೆ ಅವ್ಯವಸ್ಥೆ ತಾಂಡವವಾಡುತ್ತದೆ. ಕ್ರೀಡಾಪಟುಗಳಿಗೆ ಕ್ರೀಡಾಚಟುವಟಿಕೆ ನಡೆಸಲು ಇರಲೇ ಬೇಕಿದ್ದ ಅವಶ್ಯ ಮತ್ತು ಪೂರಕವಾದ ವ್ಯವಸ್ಥೆಯನ್ನು ನೀಡುವಲ್ಲಿ ಹಾಗೂ ಕ್ರೀಡಾಂಗಣದ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಯುವಜನಾಸೇವಾ ಇಲಾಖೆ ಅಕ್ಷರಶಃ ನಿರ್ಲಕ್ಷತನ ಮಾಡಿದೆ.

Advertisement

ಮಕ್ಕಳು, ಆಸಕ್ತರು, ಕ್ರೀಡಾಳುಗಳಿಗೆ ನೆರವಾಗಬೇಕಿದ್ದ ಇಲಾಖೆ ತನ್ನ ಕರ್ತವ್ಯದಲ್ಲಿ ವ್ಯೆಫಲ್ಯತನ ತೋರಿಸಿರುವುದಕ್ಕೆ ಇಲ್ಲಿನ ಸ್ಪಂದನ ನ್ಪೋರ್ಟ್ಸ್ ಅಕಾಡೆಮಿಯು ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇನ್ನೇನು ಪ್ರಾಥಮಿಕ, ಪ್ರೌಢ, ಪಿಯು ಮಕ್ಕಳ ಹಾಗೂ ದಸರಾ ಕ್ರೀಡಾಕೂಟಗಳು ಆರಂಭವಾಗುವ ನಿಟ್ಟಿನಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಸುವ್ಯವಸ್ಥೆಯಲ್ಲಿ ಇಡುವಂತೆ ಮತ್ತು ಓಟದ ಪಥವನ್ನು(ಟ್ರಾಕ್‌) ಸರಿಪಡಿಸುವಂತೆ ಅಧ್ಯಕ್ಷ ರವೀಂದ್ರ ನಾಯ್ಕ ಯುವಜನಾಸೇವಾ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕಳೆದ ಒಂದು ದಶಕದಿಂದ ಸ್ಥಳೀಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಓಟದ ಪಥ, ಜಿಗಿತದ ಅಂಕಣದ ದುರವಸ್ಥೆ ಹಾಗೂ ಸ್ವಚ್ಛತೆ ಕುರಿತು ಆಡಳಿತದ ವ್ಯವಸ್ಥೆ ಮೇಲೆ ಒತ್ತಡ ಹೇರಲಾಗಿತ್ತು. ಇದರ ಪರಿಣಾಮವಾಗಿ ಕಳೆದ ವರ್ಷ ಕ್ರೀಡಾಂಗಣದಲ್ಲಿ ಮಹತ್ವಪೂರ್ಣವಾದ ಕಾಮಗಾರಿ ಜರುಗಿತು. ಆದರೆ ಕಳೆದ ವರ್ಷ ಇದ್ದಂತಹ ಕ್ರೀಡಾಂಗಣದ ಸ್ಥಿತಿಗತಿ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂಬುದು ಆರೋಪವಾಗಿದೆ.

ಓಟದ ಪಥದಲ್ಲಿ ನಿಂತಿರುವ ನೀರನ್ನು ಶುಚಿಗೊಳಿಸುವ ಕನಿಷ್ಠ ಕಾಮಗಾರಿಯು ಮಾಡಿಲ್ಲ. ಓಟದ ಪಥದಲ್ಲಿ ಮುಂಜಾಗ್ರತೆ ಕ್ರಮವಾಗಿ ಹುಲ್ಲು ನಿಯಂತ್ರಿಸುವ ಕಾರ್ಯ ಜರುಗಿಸಿಲ್ಲ. ಕ್ರೀಡಾಂಗಣದ ಓಟದ ಪಥದಲ್ಲಿ ನೀರು ನಿಂತು ಕೊಳಚೆ ನೀರಿನಲ್ಲಿ ಕ್ರೀಡಾಪಟುಗಳು ಅಭ್ಯಾಸ ಜರುಗಿಸುತ್ತಿರುವುದು ಅನಿವಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ಕ್ರೀಡಾಕೂಟಗಳನ್ನು ಕಳಪೆಮಟ್ಟದ ಕ್ರೀಡಾಂಗಣದಲ್ಲಿ ನಡೆಸುವುದು ದುರಂತ ಎಂದೂ ರವೀಂದ್ರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷವೂ ಕನಿಷ್ಠ ಮೊತ್ತದ ಹಣವನ್ನು ವಿಶೇಷವಾಗಿ ನಿರ್ವಹಣೆ ಮತ್ತು ತುರ್ತು ಕಾರ್ಯಕ್ಕೆ ಕಾಯ್ದಿರಿಸದೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಕ್ರೀಡಾಂಗಣದ ಸ್ಥಿತಿ-ಗತಿ ಕಳಪೆ ಮಟ್ಟಕ್ಕೆ ಹೋಗುತ್ತಿದೆ. ಈ ಮಧ್ಯೆ ಕಳೆದ ದಶಕದಿಂದ ಕ್ರೀಡಾಂಗಣದ ಬಾಡಿಗೆಯಿಂದ ಬಂದಂತಹ ಹಣವನ್ನೂ ಸಹಿತ ಕ್ರೀಡಾಂಗಣದ ಅಭಿವೃದ್ಧಿ ಸುವ್ಯವಸ್ಥೆಯ ಕಾಮಗಾರಿಗೆ ಉಪಯೋಗಿಸಿಲ್ಲ. ಸಾರ್ವಜನಿಕರಿಂದ ಬಂದ ಬಾಡಿಗೆ ಮತ್ತು ಕ್ರೀಡಾಂಗಣದ ಅಭಿವೃದ್ಧಿಗೆ ವೆಚ್ಚ ಮಾಡಿರುವ ಮಾಹಿತಿ ಕೇಳಿದ್ದರೂ ಇನ್ನೂ ಕೊಟ್ಟಿಲ್ಲ. ಮಾಹಿತಿ ಕೇಳಿ ವರ್ಷ ಸಮಿಪಿಸುತ್ತಿದ್ದರೂ ಇಲಾಖೆಯು ದಾಖಲೆ ನೀಡದಿರುವುದು ಖಂಡನಾರ್ಹ ಎಂದು ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next