ದೊರೆಯ ನಿಷ್ಠಾವಂತ ಸೇನಾ ನಾಯಕರುಗಳಾದ ಮದಕರಿ ನಾಯಕ ಮತ್ತು ಬೀರ ನಾಯಕನ ಮನದಲ್ಲಿ ಸುಪ್ತವಾಗಿರುವ ಅಧಿಕಾರದ ಆಸೆಯೆ ಇಡೀ ನಾಟಕದ ಕಥಾ ವಸ್ತು. ನಾಟಕದ ಉದ್ದಕ್ಕೂ ನಮ್ಮನ್ನೂ ಕಾಡುವ ಈ ಮದಕರಿ ನಾಯಕ ತನ್ನ ಆಸೆಗಳನ್ನು ಕಟ್ಟಿಟ್ಟು ಕೊಳ್ಳಲು ಬಯಸಿದರೂ ಅವುಗಳನ್ನು ಸಾಧ್ಯವಾಗದೆ ಅಸಹಾಯಕನಾಗುತ್ತಾನೆ. ಮಾರಿಯ ಪ್ರಭಾವಕ್ಕೊಳಗಾಗದಿರಲು ಆತ ಪಡುವ ಪ್ರಯತ್ನಗಳೆಲ್ಲವೂ ನಾವು ಬದುಕಿನ ಉದ್ದಕ್ಕೂ ನಡೆಸಿಕೊಂಡು ಬರುವ ತಿಕ್ಕಾಟವೇ ಆಗಿದೆ. ಜೊತೆಗೆ ಈ ನಾಟಕದ ಇನ್ನೊಂದು ಪ್ರಮುಖ ಪಾತ್ರ ಮದಕರಿ ನಾಯಕನ ಮಡದಿ ಮಾರಿಯ ಪ್ರಭಾವಕ್ಕೊಳಗಾಗಿ ಅಧಿಕಾರದ ಆಸೆಯಿಂದ ಮದಕರಿ ನಾಯಕನನ್ನು ಪ್ರಚೋದಿಸುತ್ತಾ, ಇಬ್ಬರೂ ಸೇರಿ ರಾಜನನ್ನು ಸದ್ದೇ ಇಲ್ಲದಂತೆ ಕೊಂದು ಮುಗಿಸಿಬಿಡುತ್ತಾರೆ. ಹಾಗೆಯೇ ತನ್ನ ದಾರಿಯಲ್ಲಿ ಅಡ್ಡವಾಗಿರುವ ಆಪ್ತ ಗೆಳೆಯ ಬೀರ ನಾಯಕನನ್ನೂ ಕೊಂದು ಮದಕರಿ ನಾಯಕ ರಾಜನಾಗುತ್ತಾನೆ. ಅಲ್ಲಿಂದ ನಾಟಕ ಇನ್ನೊಂದು ಅಧ್ಯಾಯದೆಡೆಗೆ ಹೊರಳುತ್ತದೆ. ಮದಕರಿ ನಾಯಕ ತನ್ನನ್ನು ನಂಬಿದ ರಾಜನಿಗೂ ಗೆಳೆಯನಿಗೂ ಮಾಡಿದ ಮೋಸಕ್ಕಾಗಿ ದಿನೇದಿನೇ ಕುಸಿಯುತ್ತಾನೆ. ಪಾಪ ಪ್ರಜ್ಞೆ ನೆರಳಂತೆ ಕಾಡತೊಡಗುತ್ತದೆ. ಇತ್ತ ಗರ್ಬಿಣಿಯಾಗಿದ್ದ ಮದಕರಿ ನಾಯಕನ ಹೆಂಡತಿ ಮಗುವನ್ನು ಕಳೆದುಕೊಂಡು ತನ್ನ ತಪ್ಪಿಗಾಗಿ ಕೊರಗುತ್ತಾ ಮಾನಸಿಕ ಅಸ್ವಸ್ಥಳಾಗಿ ಅಸು ನೀಗುತ್ತಾಳೆ. ವೀರನೂ ಶೂರನೂ ಆಗಿದ್ದ ಮದಕರಿ ನಾಯಕನನ್ನು ಮಾರಿಕಾಡಿನ ಬೃಹತ್ ಮರಗಳೇ ಎದ್ದು ಬಂದು ಕೊಲ್ಲುವ ಮೂಲಕ ನಾಟಕಕ್ಕೆ ತಾರ್ತಿಕ ಅಂತ್ಯ ಬೀಳುತ್ತದೆ.
Advertisement
ಒಟ್ಟಾರೆ ಈ ಕಥಾನಕ ನಮ್ಮನ್ನು ಜಾಗೃತಗೊಳಿಸುವ, ಮಾರಿಯ ಮೋಹದ ಬಲೆಯಲ್ಲಿ ಸಿಕ್ಕಿ ಒದ್ದಾಡದಂತೆ ಎಚ್ಚರಿಸುವ ಕರೆಗಂಟೆಯಂತಿದೆ. ಇಡೀ ನಾಟಕವನ್ನು ರೂಪಕ ಪ್ರತಿಮೆಗಳಿಂದ ಒಂದು ಕಾವ್ಯದಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರಾದ ಡಾ| ಶ್ರೀಪಾದ ಭಟ್. ಬಹಳ ಮಾರ್ಮಿಕವಾಗಿ ಒಂದೊಂದು ದೃಶ್ಯವನ್ನೂ ಮನಮುಟ್ಟುವಂತೆ ನಿರೂಪಿಸಿರುವ ಅವರ ಕಾರ್ಯ ಅನನ್ಯವಾದದ್ದು. ಈ ಹೊತ್ತಿನ ಒಂದಷ್ಟು ತಲ್ಲಣಗಳಿಗೆ ಪ್ರತಿಕ್ರಿಯೆಗಳನ್ನು ಕಥೆಗೆ ಪೂರಕವಾಗಿ ಕಟ್ಟಿಕೊಟ್ಟಿದ್ದಾರೆ. ದುರಾಸೆಗಳಿಗೆ ನಮ್ಮನ್ನೇ ನಾವು ಮಾರಿಕೊಂಡಂತೆ ಬದುಕುತ್ತಿರುವ ಈ ದಿನಗಳಲ್ಲಿ ಪ್ರೀತಿ ಸ್ನೇಹ ನಂಬುಗೆಗಳ ಹೂಗಳನ್ನು ಅರಳಿಸುವ ಆಶಯ ಹೊತ್ತ ಯುದ್ಧವನ್ನು ವಿರೋಧಿಸುತ್ತಾ ಶಾಂತಿ ಸೌಹಾರ್ದತೆಗಾಗಿ ಪ್ರೇರಣೆ ನೀಡುವ ಇಂತಹ ಪ್ರಯೋಗಗಳ ಜರೂರತ್ತು ಇದೆ.