ಬೆಂಗಳೂರು: ಟ್ರಾಲಿ ಬ್ಯಾಗ್‌ನಲ್ಲಿ ಗಾಂಜಾ ತುಂಬಿಕೊಂಡು ಬಂದಿದ್ದ ಇಬ್ಬರು ಆರೋಪಿಗಳು ದಂಡು ರೈಲ್ವೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಒಡಿಶಾ ಮೂಲದ ಬಸಂತ್ (28) ಹಾಗೂ ಬೀದರ್‌ನ ಮೌನೇಶ್ವರ್ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಎಂಟು ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಜು.20ರಂದು ಮಧ್ಯಾಹ್ನ 2.30ರ ಸುಮಾರಿಗೆ ದಂಡು ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ನಲ್ಲಿ ಕುಳಿತಿದ್ದ ಇಬ್ಬರು ಯುವಕರು, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಈ ಕುರಿತು ದೊರೆತ ಮಾಹಿತಿ ಆಧರಿಸಿ ಪಿಎಸ್‌ಐ ಎಂ.ಸತ್ಯಪ್ಪ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಯುವಕರ ಬಳಿಯಿದ್ದ ರಡು ಬ್ಯಾಗ್‌ಗಳನ್ನು ಜಪ್ತಿ ಮಾಡಿ ಪರಿಶೀಲಿಸಿದಾಗ ಮೂರು ಪ್ರತ್ಯೇಕ ಪ್ಯಾಕ್‌ಗಳಲ್ಲಿ ಎಂಟು ಕೆ.ಜಿ ಗಾಂಜಾ ಪತ್ತೆಯಾಗಿದೆ. ಹೀಗಾಗಿ ಆರೋಪಿಗಳಾದ ಬಸಂತ್ ಹಾಗೂ ಮೌನೇಶ್ವರ್‌ನನ್ನು ಎನ್‌ಡಿಪಿಎಸ್ ಕಾಯಿದೆ ಅಡಿ ಬಂಧಿಸಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ, ಆರೋ ಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ಒಡಿಶಾದಿಂದ ಬಂದಿದ್ದ ಗಾಂಜಾ: ಹಲಸೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮೌನೇಶ್ವರ್‌ಗೆ, ಗಾಂಜಾ ಮಾರಾಟ ಮಾಡುತ್ತಿದ್ದ ಪರಿಚಿತ ವ್ಯಕ್ತಿಯೊಬ್ಬಮ ಮೂಲಕ ಬಸಂತ್ ಪರಿಚಯವಾಗಿತ್ತು. ಇತ್ತೀಚೆಗೆ ಒಡಿಶಾಗೆ ತೆರಳಿದ್ದ ಮೌನೇಶ್ವರ್ ಮತ್ತು ಬಸಂತ್ ಕಡಿಮೆ ಬೆಲೆಗೆ ಗಾಂಜಾ ಪಡೆದು, ಬ್ರಹ್ಮಪುರದಿಂದ ರೈಲು ಮೂಲಕ ದಂಡು ರೈಲು ನಿಲ್ದಾಣಕ್ಕೆ ಬಂದಿದ್ದರು.
ಆರೋಪಿಗಳು ಅವರೇ ಗಾಂಜಾ ಮಾರಾಟ ಮಾಡುತ್ತಿದ್ದರೇ ಅಥವಾ ಬೇರೆಯವರ ಸೂಚನೆ ಮೇರೆಗೆ ತಂದಿದ್ದರೇ ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿ ಹೇಳಿದರು.
15 ಕೆ.ಜಿ ಬಿಟ್ಟು ಪರಾರಿಯಾಗಿದ್ದರು: ಜನವರಿಯಿಂದ ಈಚೆಗೆ ಹೊರ ರಾಜ್ಯಗಳಿಂದ ಗಾಂಜಾ ತಂದ ನಾಲ್ಕು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಸಾವಿರಾರು ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಮೇ ತಿಂಗಳಿನಲ್ಲಿ ಫ್ಲಾಟ್ ಫಾರ್ಮ್ನಲ್ಲಿ ಅನುಮಾನಸ್ಪದ ಬ್ಯಾಗ್‌ವೊಂದು ಕಂಡು ಬಂದಿತ್ತು. ಹೀಗಾಗಿ, ಪೊಲೀಸರ ತಂಡ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ 15 ಕೆ.ಜಿ ಗಾಂಜಾ ಸಿಕ್ಕಿತ್ತು. ಆರೋಪಿಗಳು ಪೊಲೀಸರ ಭಯದಿಂದ ಬ್ಯಾಗ್ ಬಿಟ್ಟು ಪರಾರಿಯಾಗಿದ್ದರು. ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದರು.