ಸಲಗ’ ಸಿನಿಮಾದ ಸೂರಿಯಣ್ಣ ಖ್ಯಾತಿಯ ದಿನೇಶ್ ಕುಮಾರ್ ನಿರ್ಮಿಸಿ, ನಟಿಸಿರುವ “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾ ತೆರೆಗೆ ಬರುವ ತಯಾರಿಯಲ್ಲಿದೆ.
ಈಗಾಗಲೇ “ಮಾರಿಗುಡ್ಡದ ಗಡ್ಡಧಾರಿಗಳು’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಪೋಸ್ಟರ್ ಮತ್ತು ಟೀಸರ್ ಹೊರಬಂದಿತು. ಹಿರಿಯ ನಿರ್ದೇಶಕ ಟಿ. ಎಸ್ ನಾಗಾಭರಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಚಿತ್ರತಂಡ, “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿತು.
ಇದೇ ವೇಳೆ ಮಾತನಾಡಿದ ನಿರ್ದೇಶಕ ರಾಜೀವ ಚಂದ್ರಕಾಂತ್, “ಸಾಮಾನ್ಯವಾಗಿ ಎಲ್ಲರೂ ಹೀರೋಗಳಿಗಾಗಿ ಕಥೆ ಬರೆಯುತ್ತಾರೆ. ಆದರೆ ಈ ಸಿನಿಮಾದಲ್ಲಿ ವಿಲನ್ ಗೋಸ್ಕರವೇ ಕಥೆ ಬರೆದು ಸಿನಿಮಾ ಮಾಡಲಾಗಿದೆ. 90ರ ದಶಕದ ಕಾಲಘಟ್ಟದ ಹಿನ್ನೆಲೆಯಲ್ಲಿ ಮಾರಿಗುಡ್ಡ ಎಂಬ ಕಾಲ್ಪನಿಕ ಸ್ಥಳದಲ್ಲಿ ಇಡೀ ಕಥೆ ನಡೆಯುತ್ತದೆ. ಮಾರಿಗುಡ್ಡದ ಗಡ್ಡಧಾರಿಗಳು ಅಲ್ಲಿನ ಜನರ ಹಣ, ವಸ್ತುಗಳನ್ನು ದೋಚುತ್ತಿರುತ್ತಾರೆ. ಮತ್ತೂಂದು ಟ್ರಾಕ್‌ನಲ್ಲಿ ಪ್ರೇಮ ಕಥೆಯೊಂದು ತೆರೆದುಕೊಳ್ಳುತ್ತದೆ. ಎಲ್ಲೋ ಒಂದು ಕಡೆ ಇವರೆಡು ಸೇರಿಕೊಳ್ಳುತ್ತದೆ. ನಂತರ ಏನಾಗುತ್ತದೆ ಎನ್ನುವುದೇ ಕಥೆಯ ಒಂದು ಎಳೆ’ ಎಂದು ಕಥಾಹಂದರದ ವಿವರಣೆ ನೀಡಿದರು.
“ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದಲ್ಲಿ ಪ್ರವೀಣ್ ನಾಯಕನಾಗಿ, ನಮ್ರತಾ ಅಗಸಿಮನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಗಣೇಶ್ ರಾವ್ ಕೇಸರ್‌ಕರ್, ಬೆನಕ ನಂಜಪ್ಪ, ರಕ್ಷಿತ್, ನಂಜುಂಡ, ನಾಗಾವಿಜಯ್, ಶಾರುಣ್ ಲೋಕೇಶ್, ಗಾಯಿತ್ರಿ, ಸೆಲ್ವಿ, ಬೇಬಿ ಮಾರಿಷ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕೆ.ಎಂ. ಇಂದ್ರ ಸಂಗೀತ ಸಂಯೋಜಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ಶಶಾಂಶ್ ಶೇಷಗಿರಿ, ಸಂಕಲನಕಾರ ಎನ್. ಎಂ ವಿಶ್ವ, ಮಾಜಿ ಕಾರ್ಪೋರೇಟರ್ ವೇಲು, ಸಾಹಸ ಸಂಯೋಜಕ ಜಾಗ್ವಾರ್ ಸಣ್ಣಪ್ಪ ಮೊದಲಾದವರು “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದ ಬಗ್ಗೆ ಒಂದಷ್ಟು ಮಾತನಾಡಿದರು.
ಕೋಲಾರ, ನರಸಾಪುರಘಟ್ಟ, ಏರೋಹಳ್ಳಿ ಘಟ್ಟ, ಕೆಜಿಎಫ್ ಮೊದಲಾದ ಕಡೆಗಳಲ್ಲಿ “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಸದ್ಯ “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದ ಡಿಐ ಮತ್ತಿತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದೇ ಡಿಸೆಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.