Advertisement

ರುಚಿ ರುಚಿ ಚುರುಮುರಿ ತಿನ್ನೋದಕ್ಕೆ ಮರೀಬೇಡ್ರೀ

04:00 AM Oct 29, 2018 | |

ಒಂದು ಓಣಿಯ ಕಸ ಗುಡಿಸುವ ಕೆಲಸ ಕೊಟ್ಟರೂ, ಅದನ್ನು ಹೇಗೆ ಮಾಡಬೇಕೆಂದರೆ ನೀವು ಗುಡಿಸಿದಷ್ಟು ಸ್ವತ್ಛವಾಗಿ ಇನ್ನೊಂದು ಓಣಿ ಇರಲು ಸಾಧ್ಯವಿಲ್ಲ ಎಂಬಂತಿರಬೇಕು ಎಂದು ಸರ್‌. ಎಂ. ವಿಶ್ವೇಶ್ವರಯ್ಯ ಹೇಳಿದ್ದಾರೆ. ಚಾಮರಾಜನಗರದ ಚುರುಮುರಿ ಮಹದೇವನನ್ನು ನೋಡಿದಾಗೆಲ್ಲ ಸರ್‌ ಎಂ.ವಿ.ಯವರ ಈ ಮಾತು ನೆನಪಾಗುತ್ತದೆ. ಈತ ಚುರುಮುರಿ ಮಾರಾಟದ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ, ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಬೇರೆಡೆಯ ಚುರುಮುರಿಗೂ ಮಹದೇವರ ಚುರುಮುರಿಗೂ ಹೋಲಿಕೆಯೇ ಇಲ್ಲ!

Advertisement

ಚುರುಮುರಿಗೆ ಹಾಕುವ ಪುರಿ ನಂಜನಗೂಡಿನದ್ದೇ ಆಗಬೇಕು. ಅದಕ್ಕೆ ಬೇಕಾದ ಟೊಮ್ಯಾಟೋ, ಈರುಳ್ಳಿ ಸೌತೇಕಾಯಿ ಇತ್ಯಾದಿ ಪದಾರ್ಥಗಳನ್ನು ಮೈಸೂರಿನ ದೇವರಾಜ ಮಾರ್ಕೆಟ್‌ನಲ್ಲಿ, ಆಯ್ದ ಮಾರಾಟಗಾರರಿಂದಲೇ ತರಬೇಕು. ಅದಕ್ಕೆ ಹಾಕುವ ನಿಪ್ಪಟ್ಟು ಮೈಸೂರಿನ ಇರ್ವಿನ್‌ ರೋಡಿನ ಮುರಳಿ ಅವರು ತಯಾರಿಸಿದ್ದೇ ಆಗಬೇಕು. ಇದಕ್ಕಾಗಿ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಚಾಮರಾಜನಗರದಿಂದ ಮೈಸೂರಿನ ಬಸ್‌ ಹತ್ತುತ್ತಾರೆ ಮಹದೇವ.

ಅವರು ಮೈಸೂರಿಗೆ ಹೋಗದ ದಿನ ಚಾಮರಾಜನಗರದಲ್ಲಿ ಚುರುಮುರಿ ಮಾರಾಟ ಇಲ್ಲ! ಚಾಮರಾಜನಗರದ ಮಾರುಕಟ್ಟೆಯಲ್ಲಿ ತನ್ನ ಮನಸ್ಸಿಗೊಪ್ಪುವ ಗುಣಮಟ್ಟದ ಪದಾರ್ಥಗಳು ದೊರಕುವುದಿಲ್ಲ ಅಂತಾರೆ ಮಹದೇವ. ಅದಕ್ಕಾಗಿ ನಿತ್ಯ ಮೈಸೂರಿಗೆ ಓಡಾಟ. ಇನ್ನು, ಚುರುಮುರಿಯ ರುಚಿಯಲ್ಲಿ ಮಹತ್ವದ ಪಾತ್ರ ವಹಿಸುವ ಒಣ ಮೆಣಸಿನಕಾಯಿಯನ್ನು ಆರು ತಿಂಗಳಿಗೊಮ್ಮೆ ಹುಬ್ಬಳ್ಳಿಗೆ ಹೋಗಿ ತಂದು ಶೇಖರಿಸಿ ಇಟ್ಟುಕೊಳ್ಳುತ್ತಾರೆ!

ಸೌತೇಕಾಯಿ ಅವತ್ತು ತಂದದ್ದು ಅವತ್ತಿಗೇ ಮುಗಿಯಬೇಕು. ನಾಳೆಗೆ ಇವತ್ತಿನ ಸವತೇಕಾಯಿ ಬಳಕೆ ಇಲ್ಲ. ಯಾಕೆ ಮಹದೇವ? ಇದು ನಾಳೆಗೂ ಆಗುತ್ತದಲ್ವ? ಅಂದರೆ, ನಾಳೆಗೆ ಇದು ಬೆಂಡು ಬಂದುಬಿಡುತ್ತದೆ ಸ್ವಾಮಿ ಅಂತಾರೆ. ಈ ವಿಷಯಗಳೆಲ್ಲಾ, ಬಹುತೇಕ ಗ್ರಾಹಕರಿಗೆ ಗೊತ್ತಿಲ್ಲ! ಮಹದೇವರ ಚುರುಮುರಿಯ ರುಚಿಗೆ ಕೆಓಎಫ್ ನ ಸಫ‌ಲ್‌ ಕಡಲೆಕಾಯಿಎಣ್ಣೆಯೇ ಆಗಬೇಕು! ಒಂದು ದಿನವೂ ಇನ್ನಾವ ಬ್ರಾಂಡಿನ ಎಣ್ಣೆ ಬಳಸಿದ್ದಿಲ್ಲ. 

ಚುರುಮುರಿ ಮಾಡುವ ತಳ್ಳು ಗಾಡಿಯೂ ಅಷ್ಟೇ ಸ್ವತ್ಛ, ಪಾತ್ರೆ ಪರಿಕರಗಳು ಅತ್ಯಂತ ಶುದ್ಧ. ಗ್ರಾಹಕರಿಗೆ ಕುಡಿಯಲು ಶುದ್ದೀಕರಿಸಿದ ಯುವಿ ಫಿಲ್ಟರೀಕರಿಸಿದ ನೀರು ಲಭ್ಯ. ಮಹದೇವ, ಗ್ರಾಹಕರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆಂದರೆ, ಚುರುಮುರಿ ಹಾಕಿಕೊಡುವ ಪೇಪರ್‌ ವಿಚಾರದಲ್ಲೂ ರಾಜಿ ಮಾಡಿಕೊಂಡಿಲ್ಲ. ನ್ಯೂಸ್‌ ಪ್ರಿಂಟಿನ ಇಂಕು ಚುರುಮುರಿಗೆ ಮೆತ್ತಿಕೊಳ್ಳುತ್ತದೆಂದು ದಿನಪತ್ರಿಕೆಗಳ ಕಾಗದ ಬಳಸುವುದಿಲ್ಲ. ಮಂದದ ಮ್ಯಾಗಜೀನ್‌ ಹಾಳೆಯಲ್ಲಿ ಹಾಕಿಕೊಡುತ್ತಾರೆ. 

Advertisement

ಇಷ್ಟೆಲ್ಲ ಕ್ವಾಲಿಟಿ ಪದಾರ್ಥಗಳು, ಮಹದೇವರ ಕೈಚಳಕ, ಕೈರುಚಿ ಇದ್ದ ಮೇಲೆ ಚುರುಮುರಿ ರುಚಿಯಾಗಿರದೇ ಇನ್ನೇನಾದೀತು?! ಹಾಗಾಗಿಯೇ ನಗರದ ಮಂದಿ ಶ್ರೀಮಂತರಿಂದ ಹಿಡಿದು ಬಡವರವರೆಗೆ ಎಲ್ಲರೂ ಮಹದೇವರ ಗ್ರಾಹಕರಾಗಿದ್ದಾರೆ. ಸಂಜೆಯಾಯಿತೆಂದರೆ  ರಥದ ಬೀದಿಯಲ್ಲಿ  ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ  ಮುಂದೆ ಇರುವ ಮಹದೇವರ ಚಾಮರಾಜೇಶ್ವರ ಚುರುಮುರಿ ಗಾಡಿಯ ಮುಂದೆ ಕಿಕ್ಕಿರಿಯುತ್ತಾರೆ.

ಮಹದೇವ ಅವರ ಊರು ಚಾಮರಾಜನಗರ ತಾಲೂಕಿನ ನಂಜೇದೇವನಪುರ. ಬಾಲ್ಯದಲ್ಲಿಯೇ ಅನಿವಾರ್ಯವಾಗಿ ಕುಟುಂಬದ ಹೊಣೆ ಹೊತ್ತ ಮಹದೇವ, ಜೀವನೋಪಾಯಕ್ಕಾಗಿ 1984ರಲ್ಲಿ ಮೈಸೂರಿನ ಸಯ್ನಾಜಿರಾವ್‌ ರಸ್ತೆಯ ಬಾಂಬೆ ಟಿಫಾನೀಸ್‌ ಸೇರಿದರು. ಅಲ್ಲಿ ಕೆಲವು ವರ್ಷಗಳ ಕಾಲ ಸಮೋಸ, ಮಿಲ್ಕ್ ಕೇಕ್‌, ಕೋವಾ ಇತ್ಯಾದಿಗಳನ್ನು ತಯಾರಿಸುತ್ತಿದ್ದರು.

ತಾನೇ ಸ್ವಂತ ಏನಾದರೂ ಮಾಡಬೇಕೆಂದು ನಿರ್ಧರಿಸಿ ತವರೂರು ಚಾಮರಾಜನಗರಕ್ಕೆ ಬಂದರು. 20 ವರ್ಷಗಳ ಹಿಂದೆ  ಚಾಮರಾಜನಗರದಲ್ಲಿ ಚುರುಮುರಿ ಮಾರಾಟ ಆರಂಭಿಸಿ ಯಶಸ್ವಿಯಾದರು. ಆಗ  ಒಂದು ಚುರುಮುರಿಗೆ 2 ರೂ. ಇತ್ತು. ಈಗ ಒಂದು ಚುರುಮುರಿಗೆ 35 ರೂ. ನಿಪ್ಪಟ್ಟು ಮಸಾಲಾ 35, ಟೊಮ್ಯಾಟೋ 30 ರೂ. ದರವಿದೆ. ಸ್ಥಳ: ಚಾಮರಾಜನಗರದ ರಥದ ಬೀದಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ ಮುಂದೆ.

ಮೊಬೈಲ್‌: 88923 80787.

* ಕೆ.ಎಸ್‌.ಬಿ. ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next