Advertisement

ಚಾಂಪಿಯನ್‌ ವೋಜ್ನಿಯಾಕಿ ಶರಪೋವಾಗೆ ಶರಣು

01:30 AM Jan 19, 2019 | |

ಮೆಲ್ಬರ್ನ್: ಹಾಲಿ ಚಾಂಪಿಯನ್‌ ಡೆನ್ಮಾರ್ಕ್‌ನ ಕ್ಯಾರೋಲಿನ್‌ ವೋಜ್ನಿಯಾಕಿ ಸೋಲಿನೊಂದಿಗೆ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯ ಕುತೂಹಲ ಗರಿಗೆದರತೊಡಗಿದೆ. 

Advertisement

ಶುಕ್ರವಾರದ 3ನೇ ಸುತ್ತಿನ ಪಂದ್ಯದಲ್ಲಿ ರಶ್ಯದ ಅನುಭವಿ ಆಟಗಾರ್ತಿ ಮರಿಯಾ ಶರಪೋವಾ 3 ಸೆಟ್‌ಗಳ ಕಾದಾಟದ ಬಳಿಕ ವೋಜ್ನಿಯಾಕಿಗೆ 6-4, 4-6, 6-3 ಅಂತರದ ಸೋಲುಣಿಸುವಲ್ಲಿ ಯಶಸ್ವಿಯಾದರು.

2008ರಷ್ಟು ಹಿಂದೆ ಇಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದ ಶರಪೋವಾ 37 ವಿನ್ನರ್‌ಗಳೊಂದಿಗೆ ಆಕ್ರಮಣಕಾರಿ ಆಟವಾಡಿದರು. ಇವರಿನ್ನು ಆತಿಥೇಯ ನಾಡಿನ ಇನ್‌ಫಾರ್ಮ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ ವಿರುದ್ಧ ಸೆಣಸಲಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಬಾರ್ಟಿ ಗ್ರೀಸ್‌ನ ಮರಿಯಾ ಸಕ್ಕರಿ ವಿರುದ್ಧ 7-5, 6-1 ಅಂತರದ ಗೆಲುವಿನ ಸವಿ ಅನುಭವಿಸಿದರು. ಗೆಲುವಿನ ಬಳಿಕ ಬಾರ್ಟಿ ಭಾರತ-ಆಸ್ಟ್ರೇಲಿಯ ನಡುವಿನ ಅಂತಿಮ ಏಕದಿನ ಪಂದ್ಯ ವೀಕ್ಷಿಸತೊಡಗಿದರು!

ಅನಿಸಿಮೋವಾ ಕನಸಿನ ಓಟ
ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತಿ, 17ರ ಹರೆಯದ ಅಮಂಡಾ ಅನಿಸಿಮೋವಾ “ಮೆಲ್ಬರ್ನ್ ಪಾರ್ಕ್‌’ನಲ್ಲಿ ಕನಸಿನ ಓಟ ಮುಂದುವರಿಸಿದ್ದಾರೆ. ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು 6-3, 6-2 ಅಂತರದಿಂದ ಮಣಿಸಿ 4ನೇ ಸುತ್ತಿಗೆ ಏರಿದ್ದಾರೆ. ಮುಂದಿನ ಸುತ್ತಿನಲ್ಲಿ 8ನೇ ಶ್ರೇಯಾಂಕದ ಜೆಕ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ ಸವಾಲನ್ನು ಎದುರಿಸಬೇಕಿದೆ. ಕ್ವಿಟೋವಾ ಸ್ವಿಜರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್‌ ವಿರುದ್ಧ 6-1, 6-4 ಅಂತರದ ಗೆಲುವು ದಾಖಲಿಸಿದರು.ಅನಿಸಿಮೋವಾ ಈ ಕೂಟದಲ್ಲಿ ಉಳಿದಿರುವ ಅತೀ ಕಿರಿಯ ಆಟಗಾರ್ತಿಯಾಗಿದ್ದು, ಮೊದಲ ಸಲ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಡುತ್ತಿದ್ದಾರೆ.

ಕೆರ್ಬರ್‌ ಬರ್ತ್‌ಡೇ ಸಂಭ್ರಮ
2016ರ ಚಾಂಪಿಯನ್‌ ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ 6-1, 6-0 ಅಂತರದಿಂದ ಕಿಂಬರ್ಲಿ ಬಿರೆಲ್‌ ಅವರನ್ನು ಸೋಲಿಸಿ 3ನೇ ಸುತ್ತು ದಾಟಿದರು. ಈ ಗೆಲುವು ಅವರ ಬರ್ತ್‌ಡೇ ಸಂಭ್ರಮವನ್ನು ಹೆಚ್ಚಿಸಿತು. ಶುಕ್ರವಾರ ಕೆರ್ಬರ್‌ ಅವರ 31ನೇ ಹುಟ್ಟುಹಬ್ಬವಾಗಿತ್ತು.

Advertisement

4ನೇ ಸುತ್ತಿನಲ್ಲೂ ಕೆರ್ಬರ್‌ಗೆ ಸುಲಭ ಸವಾಲು ಎದುರಾಗಿದ್ದು, ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತಿ ಡೇನಿಯಲ್‌ ಕೊಲಿನ್ಸ್‌ ವಿರುದ್ಧ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next