Advertisement

ನನೆಗುದಿಗೆ ಬಿದ್ದ ಮರ್ದಾಳ ಪ್ರಾ.ಆ. ಕೇಂದ್ರದ ಪ್ರಸ್ತಾವನೆ

03:25 PM May 10, 2017 | Harsha Rao |

ಕಡಬ : ಹಲವು ವರ್ಷಗಳ ಹಿಂದೆ ಮರ್ದಾಳದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಆರಂಭಿಧಿಸುವ ಪ್ರಸ್ತಾವನೆಗೆ ಇನ್ನೂ ಜೀವ ಬಂದಿಲ್ಲ.

Advertisement

ಆರೋಗ್ಯ ಕೇಂದ್ರ ಸ್ಥಾಪನೆ ಸಂಬಂಧ ಪ್ರಾಥಮಿಕ ಪ್ರಕ್ರಿಯೆಯೂ ನಡೆದಿತ್ತು. ಆದರೆ ಕಂದಾಯ ಇಲಾಖೆ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆ ಪ್ರಸ್ತಾವನೆ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. 

ಅಗತ್ಯ ಜಮೀನು ಲಭ್ಯ
ಮರ್ದಾಳ ಪೇಟೆಯ ಸಮೀಪ ಐತ್ತೂರು ಗ್ರಾ.ಪಂ.ವ್ಯಾಪ್ತಿಯ ಶಿವಾಜಿನಗರದ ಸರ್ವೆ ನಂ.176ಪಿ(6) ರಲ್ಲಿ ಆರೋಗ್ಯ ಇಲಾಖೆಗೆ 35 ಸೆಂಟ್ಸ್‌ ಜಮೀನು ಇದೆ. ಅಲ್ಲಿ ಬಂಟ್ರ ಆರೋಗ್ಯ ಉಪ ಕೇಂದ್ರವೂ ಇದೆ. ಅದೇ ಜಮೀನಿಗೆ ಹೊಂದಿಕೊಂಡಂತೆ ಸುಮಾರು 3 ಎಕರೆ ಸರಕಾರಿ ಜಮೀನು ಲಭ್ಯವಿದೆ. ಅದನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾದಿರಿಸುವಂತೆ ಐತ್ತೂರು ಗ್ರಾ.ಪಂ.ಹಲವು ಬಾರಿ ನಿರ್ಣಯ ಕೈಗೊಂಡು ಕಂದಾಯ ಇಲಾಖೆಗೆ ಸಲ್ಲಿಸಿದೆ. ಆದರೆ ಪ್ರಯೋಜನವಾಗಿಲ್ಲ. ಕಂದಾಯ ಇಲಾಖಾಧಿಕಾರಿಗಳ ಸ್ಪಂದನೆ ಇಲ್ಲದಿರುವ ಕಾರಣ 2010ರಲ್ಲಿ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು ಸರಕಾರವೂ ಆಸಕ್ತಿ ತೋರಿಸಲಿಲ್ಲ.

ಆರೋಗ್ಯ ಕೇಂದ್ರ ಅಗತ್ಯ
ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಸ್ತುತ ಸಮುದಾಯ ಆಸ್ಪತ್ರೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಟುವಟಿಕೆಗಳು ಇದರಿಂದ ಬೇರ್ಪಡೆಯಾಗಲಿವೆ. ಆ ಸಂದರ್ಭದಲ್ಲಿ ಹತ್ತಿರದ ಯಾವುದಾದರೂ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು. ಇಲ್ಲದಿದ್ದರೆ ಈಗ ಕಡಬ ಪ್ರಾ. ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಗ್ರಾಮಗಳು ಹಾಗೂ ಉಪ ಕೇಂದ್ರಗಳನ್ನು ನೆರೆಯ ಪಂಜ, ನೆಲ್ಯಾಡಿ, ಕೊçಲ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಬೇಕಾಗುತ್ತದೆ. ಅದರಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಸ್ತಾವನೆಗೆ ಮರುಜೀವ ನೀಡಬೇಕೆಂಬುದು ಗ್ರಾಮಸ್ಥರ ಆಗ್ರಹ. ಕಡಬಕ್ಕೆ ಸುಲಭ ಸಂಪರ್ಕದಲ್ಲಿರುವ ಐತ್ತೂರು, ಕೊಣಾಜೆ, ಬಿಳಿನೆಲೆ, ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳು ಪ್ರಸ್ತುತ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿವೆ.

ಅವುಗಳನ್ನು ಅಲ್ಲಿಂದ ಬೇರ್ಪಡಿಸಿ ಕಡಬದ ವ್ಯಾಪ್ತಿಗೆ ಸೇರಿಸಬೇಕೆಂದು ಸಂಬಂಧಪಟ್ಟ ಗ್ರಾ.ಪಂ.ಗಳು ಹಲವು ಬಾರಿ ನಿರ್ಣಯ ಅಂಗೀಕರಿಸಿ ಆರೋಗ್ಯ ಇಲಾಖೆಗೆ ಸಲ್ಲಿಸಿವೆ. ಹೊಸದಾಗಿ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ರಚನೆಯಾದರೆ ಅಲ್ಲಿಗೆ ಈ ಗ್ರಾಮಗಳನ್ನು ಸೇರಿಸಬಹುದಾಗಿದೆ. ಇದರಿಂದ ಜನರಿಗೂ ಅನುಕೂಲವಾಗಲಿದೆ.

Advertisement

ಮತ್ತೆ ಇಲಾಖೆಗೆ ಮನವಿ
ಈ ಹಿಂದೆ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯ ಪ್ರಸ್ತಾವನೆ ಬಂದಾಗ ಮರ್ದಾಳ ಪೇಟೆಗೆ ಹತ್ತಿರದಲ್ಲಿರುವ ಐತ್ತೂರು ಗ್ರಾ.ಪಂ.ವ್ಯಾಪ್ತಿಯ 2  ಎಕ್ರೆ ಸರಕಾರಿ ಜಮೀನನ್ನು ಆರೋಗ್ಯ ಇಲಾಖೆಗೆ  ನೀಡುವಂತೆ ನಾವು ನಿರ್ಣಯ ಆಂಗೀಕರಿಸಿ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಆದರೆ ಜಮೀನು ನೀಡಲು ಕಂದಾಯ ಇಲಾಖೆ ತಡ ಮಾಡಿದ್ದರಿಂದ ಅವಕಾಶ ಕೈತಪ್ಪಿತು. ಇದೀಗ ಮತ್ತೆ ಈ ಬಗ್ಗೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕೆ. ತಿಳಿಸಿದ್ದಾರೆ.

ಸೇರ್ಪಡೆಗೊಳಿಸಬಹುದಾದ ಗ್ರಾಮಗಳು
ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ಯಲ್ಲಿರುವ ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಗಳೊಂದಿಗೆ ನೆರೆಯ ಗ್ರಾಮಗಳಾದ  ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಬಿಳಿನೆಲೆ ಮುಂತಾದ ಗ್ರಾಮಗಳನ್ನು ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿಸಬಹುದಾಗಿದೆ.

ಸರಕಾರಕ್ಕೆ ವರದಿ 
ಈ ಹಿಂದೆ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ರಚಿಸುವ ಪ್ರಸ್ತಾವನೆ ಇತ್ತು. ಆದರೆ ಜಮೀನಿನ ಕೊರತೆ ಯಿಂದಾಗಿ ಅದು ಕಾರ್ಯಗತವಾಗಿಲ್ಲ. ಮುಂದಿನ ದಿನಗಳಲ್ಲಿ ಕಡಬ ಸಮುದಾಯ ಆಸ್ಪತ್ರೆಯ ವ್ಯಾಪ್ತಿಯ ಗ್ರಾಮಗಳಿಗೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಸಾಧ್ಯತೆಗಳಿವೆ. ಜನಪ್ರತಿನಿಧಿಗಳಿಂದ ಈ ಕುರಿತು ಮನವಿ ಬಂದಿದೆ. ಮರ್ದಾಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯಾಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next