Advertisement

ಮಾರ್ಕೋಪೋಲೋ ಬಸ್‌ ಖರೀದಿ ಹಗರಣ ಸಿಐಡಿ ತನಿಖೆಗೆ

12:24 PM Mar 06, 2018 | |

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ )ಯಲ್ಲಿ ನಡೆದಿದೆ ಎನ್ನಲಾದ ಮಾರ್ಕೋಪೋಲೋ ಬಸ್‌ ಖರೀದಿ ಹಗರಣದ ಕುರಿತು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

Advertisement

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ, ಬಿಎಂಟಿಸಿಯಿಂದ ಈ ಹಿಂದೆ 98 ಮಾರ್ಕೊಪೋಲೊ ಬಸ್ಸು ಖರೀದಿ ಮಾಡಲಾಗಿತ್ತು. ಈ ಖರೀದಿ ಒಪ್ಪಂದದಿಂದ ಬಿಎಂಟಿಸಿಗೆ ತೀವ್ರ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸಲಾಗಿದ್ದು, ಆ ತನಿಖಾ ವರದಿ ಆಧರಿಸಿ ಬಸ್‌ ಖರೀದಿ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಬಿಎಂಟಿಸಿಗೆ ಮಾರ್ಕೋಪೋಲೋ ಬಸ್‌ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಅವರು ಗೃಹ ಸಚಿವರಾಗಿದ್ದಾಗ ಈ ಕುರಿತು ಆಂತರಿಕ ತನಿಖೆಗೆ ಆದೇಶಿಸಲಾಗಿತ್ತು.

ಬಿಎಂಟಿಸಿ ಖರೀದಿಸಿದ್ದ 98 ಮಾರ್ಕೊಪೋಲೊ ಬಸ್ಸುಗಳು ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫ‌ಲವಾಗಿದ್ದವು. ಹಿಂಬದಿ ಇಂಜಿನ್‌ನ ಈ ಬಸ್‌ಗಳಲ್ಲಿ ತಾಂತ್ರಿಕ ವೈಫ‌ಲ್ಯ ಉಂಟಾಗಿತ್ತು. ಹೀಗಾಗಿ ಅವುಗಳನ್ನು ಸಾಮಾನ್ಯ ಬಸ್‌ಗಳ ಪ್ರಯಾಣದರದಲ್ಲಿ ಓಡಿಸಲಾಗಿತ್ತು.

ಆದರೂ ಸಂಸ್ಥೆಗೆ ಇದರಿಂದ ಸಾಕಷ್ಟು ನಷ್ಟವಾಗಿದೆ. ಬಸ್‌ ಖರೀದಿ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸದ ಕಾರಣ ಮಾರ್ಕೋ ಪೋಲೋ ಬಸ್‌ ಸಂಚಾರದಿಂದ ನಾಲ್ಕು ವರ್ಷಗಳಲ್ಲಿ ಬಿಎಂಟಿಸಿಗೆ 30 ಕೋಟಿ ರು. ನಷ್ಟ ಉಂಟಾಗಿತ್ತು. 8 ವರ್ಷಗಳ ಕಾಲ ಬಸ್ಸು ಓಡಿಸಬೇಕು ಎಂಬ ಒಪ್ಪಂದದ ಹಿನ್ನೆಲೆಯಲ್ಲಿ ಬಿಎಂಟಿಸಿ ಸಾಕಷ್ಟು ನಷ್ಟ ಅನುಭವಿಸಿದೆ ಎಂದು ಬಿಎಂಟಿಸಿ ಆಂತರಿಕ ವರದಿಯಿಂದ ಬಯಲಾಗಿತ್ತು. 

Advertisement

ಏನಿದು ಹಗರಣ?: ಆರ್‌.ಅಶೋಕ್‌ ಸಾರಿಗೆ ಸಚಿವರಾಗಿದ್ದಾಗ ನರ್ಮ್ ಯೋಜನೆಯಡಿ 31 ಕೋಟಿ ರೂ. ವೆಚ್ಚದಲ್ಲಿ 98 ಮಾರ್ಕೋಪೋಲೋ ಬಸ್‌ಗಳನ್ನು ಖರೀದಿಸಲಾಗಿತ್ತು. ಈ ಬಸ್‌ಗಳ ಕಾರ್ಯಾಚರಣೆ ಬಗ್ಗೆ ಆರಂಭದಿಂದಲೇ ಪ್ರಯಾಣಿಕರಿಂದ ಅಸಮಧಾನ ವ್ಯಕ್ತವಾಗಿತ್ತು.

ಬಸ್‌ಗಳು ಹೆಚ್ಚು ಹೊಗೆ ಉಗುಳುತ್ತಿವೆ ಎಂಬ ಕಾರಣಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿತ್ತು. ಈ ಮಧ್ಯೆ ಮೈಲೇಜ್‌ ಕಡಿಮೆ, ಹೊಗೆ ಜಾಸ್ತಿ ಎಂಬ ದೂರಿನ ಹಿನ್ನೆಲೆಯಲ್ಲಿ ಕಂಪೆನಿಯೇ ಉಚಿತವಾಗಿ 96 ಬಸ್‌ಗಳ ಎಂಜಿನ್‌ ಬದಲಿಸಿತ್ತು. ಆದರೂ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಬಿಎಂಟಿಸಿ ಆ ಬಸ್‌ನಲ್ಲಿ ಪ್ರತಿ ಕಿ.ಮೀ.ಗೆ 27 ರು.ಗಳಷ್ಟು ನಷ್ಟ ಅನುಭವಿಸಿತ್ತು.

ಅಶೋಕ್‌ ಕಟ್ಟಿಹಾಕುವ ತಂತ್ರ: ಮಾರ್ಕೋಪೋಲೋ ಬಸ್‌ ಖರೀದಿ ಹಗರಣದ ತನಿಖೆಯನ್ನು ಸಿಐಡಿಗೆ ತನಿಖೆಗೆ ಒಪ್ಪಿಸುವುದರ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟದ ನೇತೃತ್ವ ವಹಿಸಿರುವ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರನ್ನು ಕಟ್ಟಿಹಾಕುವ ತಂತ್ರವಿದೆ ಎಂದು ಹೇಳಲಾಗುತ್ತಿದೆ. ಮಾರ್ಕೋಪೋಲೋ ಬಸ್‌ ಖರೀದಿ ಸಂದರ್ಭದಲ್ಲಿ ಆರ್‌.ಅಶೋಕ್‌ ಸಾರಿಗೆ ಸಚಿವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next