ಮೈಸೂರು: ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಿ ಸಕ್ರಮಗೊಳಿಸುವುದನ್ನು ಮಾರ್ಚ್ ಒಳಗೆ ಮುಗಿಸುವಂತೆ ಸಚಿವ ಕಾಗೋಡು ತಿಮ್ಮಪ್ಪ ಕಂದಾಯ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.
ಮೈಸೂರು ಜಿಲ್ಲೆಯ ಕಂದಾಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಿ ಸಕ್ರಮಗೊಳಿಸುವ ಸಂಬಂಧ ಗ್ರಾಮಾಂತರ ಪ್ರದೇಶದಲ್ಲಿ (94-ಸಿ), ನಗರ ಪ್ರದೇಶದಲ್ಲಿ (94 ಸಿಸಿ) ಅರ್ಜಿ ಸಲ್ಲಿಸಲು ಫೆಬ್ರವರಿ 4 ಕಡೇ ದಿನವಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳು ಪ್ರತಿ ಗ್ರಾಮಗಳಿಗೂ ಹೋಗಿ ಸಮೀಕ್ಷೆ ಮಾಡಿ, ಅರ್ಜಿ ಪಡೆದು ಕೆಲಸ ಮಾಡಿಕೊಡಬೇಕು. ಇದು ಮಾರ್ಚ್ ಒಳಗೆ ಮುಗಿಸಬೇಕು ಎಂದರು.
1991ಕ್ಕಿಂತ ಹಿಂದೆ ಮೂರು ವರ್ಷ ಸಾಗುವಳಿ ಮಾಡಿದ್ದರೂ ಅಂಥವರಿಗೆ ಭೂಮಿಯನ್ನು ಮಂಜೂರು ಮಾಡಿ, ಇಲ್ಲವಾದಲ್ಲಿ ಕಾನೂನು ತಿದ್ದುಪಡಿ ಮಾಡಿದ್ದು ಅನುಕೂಲವಾಗಲ್ಲ. ಕೋರಂ ಇಲ್ಲ ಎಂದು ಅಕ್ರಮ-ಸಕ್ರಮ ಸಮಿತಿ ಸಭೆಗಳನ್ನು ಮುಂದೂಡದೆ ಇಬ್ಬರು ಸದಸ್ಯರು ಬಂದರೂ ಸಭೆ ನಡೆಸಿ, ತಹಶೀಲ್ದಾರ್‌ಗಳು ತೀರ್ಮಾನ ಕೈಗೊಂಡು ಅರ್ಹರಿಗೆ ಹಕ್ಕುಪತ್ರ ನೀಡಿ, ಪಹಣಿಯಲ್ಲಿ ಹೆಸರು ದಾಖಲಿಸಿ ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.
ಪಕ್ಕಾ ಪೋಡಿಗೆ ಹೊಸ ಸುತ್ತೋಲೆ: ರಾಜ್ಯದಲ್ಲಿನ ಎಲ್ಲಾ ಸರ್ಕಾರಿ, ಖಾಸಗಿ ಜಮೀನಿನ ಪಕ್ಕಾ-ಪೋಡಿಯನ್ನು ಏಕಕಾಲಕ್ಕೆ ಮಾಡುವ ಸಂಬಂಧ ಸದ್ಯದಲ್ಲೇ ಹೊಸದಾಗಿ ಸುತ್ತೋಲೆ ಹೊರಡಿಸಲಾಗುವುದು. ಪಕ್ಕಾ-ಪೋಡಿ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳ ಬದಲಿಗೆ ತಹಶೀಲ್ದಾರರಿಗೆ ನೀಡಲಾಗಿದೆ. ಈ ಕಾರ್ಯ ಸಮರ್ಪಕವಾಗಿ ನಡೆಯಬೇಕೆಂಬ ಕಾರಣಕ್ಕಾಗಿಯೇ ಹೊಸದಾಗಿ ಒಂದು ಸಾವಿರ ಭೂ ಮಾಪಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಹೊಸ ಭೂ ಮಾಪಕರು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದರು. ರಾಜ್ಯದಲ್ಲಿ ಈಗಾಗಲೇ ಘೋಷಿಸಲಾಗಿರುವ ಹೊಸ ತಾಲೂಕುಗಳು ರಚನೆ ಆಗುವವರೆಗೂ ಹೊಸ ತಾಲೂಕುಗಳನ್ನು ಘೋಷಿಸುವುದಿಲ್ಲ. ಈಗ ಘೋಷಿಸಿರುವ 50 ಹೊಸ ತಾಲೂಕುಗಳು ಜನವರಿಯಿಂದ ಕಾರ್ಯಾರಂಭ ಮಾಡಲಿವೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.