Advertisement

ಮಾ. 2ರ ಬಳಿಕ ಮನಪಾಗೆ ಹೊಸ ಮೇಯರ್‌! ರಾಜಕೀಯ ಲೆಕ್ಕಾಚಾರಕ್ಕೆ ಪಾಲಿಕೆ ಅಖಾಡ ಸಿದ್ಧ

05:26 PM Feb 16, 2022 | Team Udayavani |

ಪಾಲಿಕೆ ಚುನಾವಣೆ 2019ರ ನ. 12ಕ್ಕೆ ನಡೆದಿದ್ದು ಬಿಜೆಪಿ 44, ಕಾಂಗ್ರೆಸ್‌ 14 , ಎಸ್‌ಡಿಪಿಐ 2 ಸ್ಥಾನ ಗಳನ್ನು ಪಡೆದಿತ್ತು. 21ನೇ ಅವಧಿಗೆ ಮೇಯರ್‌ ಆಗಿ (ಹಿಂದುಳಿದ ವರ್ಗ ಎ) ದಿವಾಕರ್‌ ಪಾಂಡೇಶ್ವರ ಹಾಗೂ ಉಪಮೇಯರ್‌ (ಸಾಮಾನ್ಯ ಮಹಿಳೆ) ವೇದಾವತಿ ಅವರು 2020ರ ಫೆ. 28ರಂದು ಅಧಿಕಾರ ಸ್ವೀಕರಿಸಿದ್ದರು. 2021-22ನೇ ಅವಧಿಯ ಮೇಯರ್‌ ಮೀಸಲಾತಿ “ಸಾಮಾನ್ಯ’ ಹಾಗೂ ಉಪಮೇಯರ್‌ “ಸಾಮಾನ್ಯ ಮಹಿಳೆ’ಯಾಗಿತ್ತು. ಕಳೆದ ವರ್ಷ ಮಾ.2ರಂದು ಚುನಾವಣೆ ನಡೆದಿದ್ದು, ಮೇಯರ್‌ ಆಗಿ ಮಂಗಳಾದೇವಿ ವಾರ್ಡ್‌ನ ಪ್ರೇಮಾನಂದ ಶೆಟ್ಟಿ, ಉಪ ಮೇಯರ್‌ ಆಗಿ ಕುಂಜತ್ತಬೈಲ್‌ (ದಕ್ಷಿಣ) ವಾರ್ಡ್‌ನ ಸುಮಂಗಲಾ ರಾವ್‌ ಆಯ್ಕೆಯಾಗಿದ್ದರು.

Advertisement

ಲಾಲ್‌ಬಾಗ್: ಮಹಾನಗರ ಪಾಲಿಕೆಗೆ ಹೊಸ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗೆ ಪ್ರಾರಂಭಿಕ ಸಿದ್ಧತೆ ನಡೆಯುತ್ತಿದ್ದು, ಮಾ.2ರಂದು ಚುನಾವಣೆ ನಿಗದಿಯಾಗಿದೆ. ಈ ನೆಲೆಯಲ್ಲಿ ಮನಪಾ ಅಖಾಡದಲ್ಲಿ ರಾಜಕೀಯ ಚರ್ಚೆ ಗರಿಗೆದರಿದೆ.

2022-23ನೇ ಸಾಲಿಗೆ ಮೇಯರ್‌ ಸ್ಥಾನ “ಸಾಮಾನ್ಯ’ ಹಾಗೂ ಉಪ ಮೇಯರ್‌ ಸ್ಥಾನವು “ಹಿಂದುಳಿದ ವರ್ಗ ಎ ಮಹಿಳೆ’ ಮೀಸಲಾತಿ ಅಂತಿಮಗೊಂಡಿದೆ. ಕಳೆದ ವರ್ಷ ಮಾ.2ರಂದು ಮೇಯರ್‌ ಚುನಾವಣೆ ನಡೆದಿತ್ತು. ಈ ಬಾರಿಯೂ ಇದೇ ಸಮಯಕ್ಕೆ ಚುನಾವಣೆ ನಡೆಯಲಿದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಸೂತ್ರ ಹಿಡಿದ ಬಳಿಕ ನಡೆಯುವ ಮೂರನೇ ಮೇಯರ್‌ ಸ್ಥಾನದ ಚುನಾವಣೆ ಇದಾಗಲಿದೆ. ಮೊದಲಿಗೆ ದಿವಾಕರ ಪಾಂಡೇಶ್ವರ ಮೇಯರ್‌ ಆಗಿದ್ದು, ಪ್ರಸ್ತುತ ಪ್ರೇಮಾನಂದ ಶೆಟ್ಟಿ ಮೇಯರ್‌.

ಮುಂದಿನ ಮೇಯರ್‌ ಯಾರು?
ಮುಂದಿನ ಮೇಯರ್‌ ಯಾರು ಎಂಬ ಬಗ್ಗೆ ಬಹಿರಂಗ ಮಾತುಕತೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೆ ಬಿಜೆಪಿ ಪಕ್ಷದೊಳಗೆ ಈ ಕುರಿತ ಚರ್ಚೆಗೆ ವೇದಿಕೆ ಸಿದ್ಧಗೊಂಡಿದೆ. ಆಕಾಂಕ್ಷಿಗಳು ತಮ್ಮ ವ್ಯಾಪ್ತಿಯಲ್ಲಿ ಲಾಬಿ ನಡೆಸಲು ಸದ್ದಿಲ್ಲದೆ ಸುದ್ದಿ ಮಾಡುತ್ತಿದ್ದಾರೆ! ಮುಂದಿನ ಮೇಯರ್‌ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ., ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ವೈ.ಭರತ್‌ ಶೆಟ್ಟಿ ಸಹಿತ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಮಹತ್ವದ ಸಭೆ ಕೆಲವೇ ದಿನಗಳಲ್ಲಿ ಮಂಗಳೂರಿನಲ್ಲಿ ನಡೆಯಲಿದೆ. ಉಪ ಮೇಯರ್‌ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ನಡೆಯಲಿದೆ. ಬಳಿಕ ಕಾರ್ಪೋರೆಟರ್‌ಗಳಿಂದಲೂ ಅಭಿಪ್ರಾಯ ಆಲಿಸಲಾಗುತ್ತದೆ.

ಈ ಬಾರಿಯೇ ಮಹತ್ವ!
ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಮೇಯರ್‌ ಹುದ್ದೆ ಮಹತ್ವ ಪಡೆದು ಕೊಂಡಿದೆ. ಹೀಗಾಗಿ ರಾಜಕೀಯ ಅನುಭವ ಹಾಗೂ ಪಾಲಿಕೆ ಆಡಳಿತದ ಪೂರ್ಣ ಹಿಡಿತ ಗೊತ್ತಿರುವವರಿಗೆ ಈ ಬಾರಿಯ ಮೇಯರ್‌ ಹುದ್ದೆ ಸಿಗುವ ಸಾಧ್ಯತೆಯಿದೆ. ಇದಕ್ಕಾಗಿ ಅನು ಭವಿ ಕಾರ್ಪೋರೆಟರ್‌ಗಳ ಹೆಸರು ಮೇಯರ್‌ ಹುದ್ದೆಗೆ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ಹೊಸದಾಗಿ ಆಯ್ಕೆಯಾದ ಸದಸ್ಯರ ಹೆಸರು ಕೂಡ ಮೇಯರ್‌ ರೇಸ್‌ನಲ್ಲಿ ಕೇಳಿಬರುತ್ತಿದೆ. ಅದರಲ್ಲಿಯೂ ಕಳೆದ ವರ್ಷದಂತೆ ಮೇಯರ್‌ ಸ್ಥಾನ “ಸಾಮಾನ್ಯ’ ಮೀಸಲಾತಿಗೆ ದೊರೆತ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಎಲ್ಲ ಸದಸ್ಯರು ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಪಡೆಯಬಹುದಾಗಿದೆ. ಇದು ಈ ಬಾರಿಯ ಮೇಯರ್‌ ಆಯ್ಕೆಗೆ ಕೊಂಚ ಕಗ್ಗಂಟು ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Advertisement

ಬಿಜೆಪಿಯಿಂದ ಎರಡು ಬಾರಿ ಮೇಯರ್‌ ಸ್ಥಾನ ಮಂಗಳೂರು ದಕ್ಷಿಣಕ್ಕೆ ಲಭಿಸಿರುವ ಕಾರಣದಿಂದ ಮುಂದಿನದ್ದು ನಗರ ಉತ್ತರಕ್ಕೆ ಎಂಬು ದು ಚರ್ಚೆಯಲ್ಲಿದೆ. ಜತೆಗೆ ಮೇಯರ್‌ ಆಯ್ಕೆ ಕುರಿತಂತೆ ಜಾತಿ ಸಮೀಕರಣವೂ ಸದ್ಯ ಕೇಳಿಬರುತ್ತಿದೆ!

1 ವರ್ಷಕ್ಕೆ ಮುನ್ನವೇ ಮೀಸಲಾತಿ!
ಸಾಮಾನ್ಯವಾಗಿ ಆಯಾಯ ವರ್ಷದ ಮೇಯರ್‌-ಉಪಮೇ ಯರ್‌ ಮೀಸಲಾತಿ ಆಯಾ ವರ್ಷವೇ ಸರಕಾರ ಪ್ರಕಟ ಮಾಡುತ್ತದೆ. ಆದರೆ, ಮಂಗಳೂರು ಪಾಲಿಕೆ ಹಾಗೂ ಉಳಿದ ಪಾಲಿಕೆಗಳ ನಡುವೆ 1 ವರ್ಷದ ಆಡಳಿತ ಅವಧಿ ವ್ಯತ್ಯಾಸವಿದೆ. ಮಂಗಳೂರು ಪಾಲಿಕೆಗೆ ಮುಂದೆ 23ನೇ ಅವಧಿಯ ಮೇಯರ್‌-ಉಪಮೇಯರ್‌ ಆಯ್ಕೆ ನಡೆಯಲಿದ್ದರೆ, ಉಳಿದ ಪಾಲಿಕೆಗಳಿಗೆ ಈ ಬಾರಿ 24ನೇ ಅವಧಿ. ಹೀಗಾಗಿ ಕಳೆದ ವರ್ಷವೇ ಮೇಯರ್‌-ಉಪಮೇಯರ್‌ ಮೀಸಲಾತಿ ಮಂಗಳೂರು ಪಾಲಿಕೆಗೆ ಬಂದಿತ್ತು. ಅದು ಈ ವರ್ಷ ಅನುಷ್ಠಾನವಾಗಲಿದೆ. ಈ ನೆಲೆಯಲ್ಲಿ ಮುಂದಿನ ವರ್ಷದ ಮೀಸಲಾತಿ ಸದ್ಯ ಬರಬೇಕಿತ್ತು. ನಿರೀಕ್ಷಿಸಲಾಗುತ್ತಿದೆ!

ಮಾ.2ರಂದು ಚುನಾವಣೆ
ಮನಪಾಗೆ ನೂತನ ಮೇಯರ್‌-ಉಪಮೇಯರ್‌ ಚುನಾವಣೆ ಮಾ.2ರಂದು ನಡೆಯಲಿದೆ. ಈ ಕುರಿತಂತೆ ಕಾಪೋರೇಟರ್  ಗಳಿಗೆ ಮಾಹಿತಿ ನೀಡಲಾಗುತ್ತಿದೆ.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next