Advertisement
ನಗರದ ಶರಣಬಸವೇಶ್ವರ ಜಾತ್ರಾ ಮೈದಾನ ದಲ್ಲಿ ಹೈದರಾಬಾದ್ ಕರ್ನಾಟಕ ರೈತ ಸಂಘ ರವಿವಾರ ಆಯೋಜಿಸಿದ್ದ ರೈತ ಜಾಗೃತಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಡಾ|ಸ್ವಾಮಿನಾಥ್‌ನ ವರದಿ ಯಥಾವತ್ತಾಗಿ ಜಾರಿ ಗೊಳಿಸುವುದು, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವುದು ಮತ್ತು ರೈತರಿಗೆ ಮಾಸಾಶನ ಸಹಿತ ಇತರ ರೈತರ ಬೇಡಿಕೆಗಳಿಗೆ ಹಾಲಿ ಕೇಂದ್ರ ಸರಕಾರ ಸ್ಪಂದಿಸಲಿದೆ ಎಂದು ಬಲವಾಗಿ ನಂಬಲಾಗಿತ್ತು. ಆದರೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ರೈತರತ್ತ ಸರಕಾರ ಕಣ್ಣೆತ್ತಿ ನೋಡದೇ ಇರುವುದರಿಂದ ಮತ್ತು ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದ ಹಿನ್ನೆಲೆಯಲ್ಲಿ ಆಂದೋಲನಕ್ಕೆ ಇಳಿಯಲಾಗುತ್ತಿದೆ ಎಂದರು.
ಆಂದೋಲನದ ಅಂಗವಾಗಿ ದೇಶಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದ ಅವರು ಈಗಾಗಲೇ 18 ರಾಜ್ಯಗಳಲ್ಲಿ ಪ್ರವಾಸ ಮಾಡಿ, ರೈತರನ್ನು ಸಂಘಟಿಸಲಾಗಿದೆ. ಐತಿಹಾಸಿಕ ಎನ್ನುವಂತೆ ರಾಮಲೀಲಾ ಮೈದಾನದಲ್ಲಿ ಹೋರಾಟಕ್ಕೆ ಧುಮುಕಲಾಗುವುದು. ರೈತರ ಶಕ್ತಿಯನ್ನು ಪ್ರದರ್ಶಿಸಿ ಕೇಂದ್ರಕ್ಕೆ ಚುರುಕು ಮುಟ್ಟಿಸಲಾಗುವುದು. 22 ವರ್ಷಗಳಲ್ಲಿ 12 ಲಕ್ಷ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆದರೆ ಒಬ್ಬನೇ ಒಬ್ಬ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಪ್ರಧಾನಿ ಮೋದಿ ಅವರು ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತಾರೆ ಹಾಗೂ ರೈತರ ಬವಣೆಗೆ ಸ್ಪಂದಿಸುತ್ತಾರೆ ಎಂದು ನಂಬಿ ಎಲ್ಲರೂ ಬೆಂಬಲಿಸಿದ್ದಾರೆ. ಆದರೆ 15 ರೂ. ಸಹ ಜೇಬಿಗೆ ಹಾಕಿಲ್ಲ ಎಂದು ಅಣ್ಣಾ ಹಜಾರೆ ದೂರಿದರು.