Advertisement
5 ಎಕರೆ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಭೂಮಿ ಒತ್ತುವರಿಯಾಗಿರುವ ಕಡೆ ಆದ್ಯತೆ ಮೇರೆಗೆ ಕಾರ್ಯಾಚರಣೆ ನಡೆಸಿ ಕಾಲಮಿತಿಯೊಳಗೆ (ಮಾರ್ಚ್ ಅಂತ್ಯ) ವಶಕ್ಕೆ ಪಡೆಯುವಂತೆ ನಿಗಮವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಇದಾದ ಬಳಿಕ ಮೂರರಿಂದ ಐದು ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ತಾಕೀತು ಮಾಡಿದೆ. ಭೂಮಿಗೆ ಬೇಡಿಕೆ ಜತೆಗೆ ಬೆಲೆಯೂ ಗಗನಮುಖೀಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ.
ರಾಜ್ಯಾದ್ಯಂತ ಒಟ್ಟು 63.83 ಲಕ್ಷ ಎಕರೆ ಸರ್ಕಾರಿ ಭೂಮಿಯಲ್ಲಿ ಒಟ್ಟು 12.88 ಲಕ್ಷ ಎಕರೆ ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಿ 2014ರ ಜನವರಿಯಲ್ಲಿ ವರದಿ ಸಲ್ಲಿಸಲಾಗಿತ್ತು. ಅದರಲ್ಲಿ ಬಗರ್‌ಹುಕುಂನ ಡಿ ಸಕ್ರಮಕ್ಕೆ ಒಳಪಡುವ 8.22 ಲಕ್ಷ ಎಕರೆ, ನ್ಯಾಯಾಲ ಯಗಳಲ್ಲಿ ವ್ಯಾಜ್ಯವಿರುವ 6,869 ಎಕರೆ ಹಾಗೂ ಇತರೆ ಒತ್ತುವರಿದಾರರು 4,58,471 ಎಕರೆ ಕಬಳಿಸಿರುವುದು ಬಯಲಾಗಿತ್ತು. ಬಗರ್‌ಹುಕುಂ ಹಾಗೂ ನ್ಯಾಯಾಲಯ ಪ್ರಕರಣಗಳನ್ನು ಹೊರತುಪಡಿಸಿ 4.58 ಲಕ್ಷ ಎಕರೆ ಭೂಮಿ ಮರುವಶಕ್ಕೆ ಕೆಪಿಎಲ್‌ಸಿ ಮುಂದಾಗಿತ್ತು. ಮೂರು ವರ್ಷಗಳಲ್ಲಿ (2016ರ ನ.30ರವರೆಗೆ) 2.61 ಲಕ್ಷ ಎಕರೆ ಒತ್ತುವರಿ ತೆರವಾಗಿದ್ದು, ಇನ್ನೂ 1,97,112 ಎಕರೆ ಒತ್ತುವರಿ ತೆರವು ಬಾಕಿ ಉಳಿದಿದೆ.
Related Articles
ಒತ್ತುವರಿ ತೆರವು ತ್ವರಿತಗೊಳಿಸುವ ಸಲುವಾಗಿ ಕೆಪಿಎಲ್‌ಸಿ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಮೊದಲಿಗೆ ಐದು ಎಕರೆ ಮತ್ತು ಅದಕ್ಕಿಂತ ಹೆಚ್ಚು ಭೂಮಿ ಒತ್ತುವರಿ ತೆರವಿಗೆ ಆದ್ಯತೆ ನೀಡಿದ್ದು, ಮಾಚ್ ìನೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.
Advertisement
ಉಳಿದಂತೆ ಮೂರರಿಂದ ಐದು ಎಕರೆಯಂತೆ ಒತ್ತುವರಿ ಮಾಡಿಕೊಂಡವರಿಂದ 60,000ಕ್ಕೂ ಹೆಚ್ಚು ಭೂಮಿ ಕಬಳಿಕೆಯಾಗಿದ್ದು, ಅವುಗಳನ್ನೂ ವಶಕ್ಕೆ ಪಡೆಯಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಮೂರು ಎಕರೆವರೆಗೆ ಒತ್ತುವರಿಯಾದ 93,000ಕ್ಕೂ ಹೆಚ್ಚು ಭೂಮಿ ಮರುವಶಕ್ಕೂ ಗಮನ ಹರಿಸುವಂತೆ ನಿರ್ದೇಶನ ನೀಡಿದೆ.
2,800 ಮಂದಿಯಿಂದ 20,000 ಎಕರೆ ಒತ್ತುವರಿ!: ಒತ್ತುವರಿ ತೆರವು ನಡೆದಿದೆಯಾದರೂ ಇನ್ನೂ ಸಾಕಷ್ಟುಬಾಕಿ ಇದೆ. ಅವುಗಳಲ್ಲಿ ಕಂದಾಯ ಭೂಮಿ ಪೈಕಿ ಐದು ಎಕರೆಗಿಂತ ಹೆಚ್ಚು ಭೂಮಿಯನ್ನು 2,800ಕ್ಕೂ ಅಧಿಕ ಮಂದಿ ಒತ್ತುವರಿ ಮಾಡಿಕೊಂಡಿದ್ದು, ಸುಮಾರು 20 ಸಾವಿರ ಎಕರೆ ಇವರ ವಶದಲ್ಲಿದ್ದು, ಅವುಗಳನ್ನುತೆರವುಗೊಳಿಸಬೇಕಾಗಿದೆ. ಚಿಕ್ಕಮಗಳೂರಿನಲ್ಲಿ 13,000, ಹಾಸನದಲ್ಲಿ 1,672, ಶಿವಮೊಗ್ಗದಲ್ಲಿ 1,457 , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,074 ಎಕರೆ
ಸರ್ಕಾರಿ ಭೂಮಿಯನ್ನು ಬೃಹತ್ ಒತ್ತುವರಿದಾರರು ಕಬಳಿಸಿದ್ದಾರೆ. ಇದರ ಜತೆಗೆ ಬಳ್ಳಾರಿ, ಬೀದರ್, ಚಾಮರಾಜನಗರ, ಗದಗ, ಕೊಡಗು, ಮೈಸೂರು, ತುಮಕೂರು, ಉಡುಪಿ ಹಾಗೂ ವಿಜಯಪುರದಲ್ಲಿ ಬೃಹತ್ ಒತ್ತುವರಿದಾರರಿಂದ ಸರ್ಕಾರಿ ಭೂಮಿ ವಶಕ್ಕೆ ಪಡೆಯುವಂತೆ ಕೆಪಿಎಲ್‌ಸಿ ಸೂಚಿಸಿದೆ. ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯ ಆದ್ಯತೆ ಮೇರೆಗೆ ನಡೆಯುತ್ತಿಲ್ಲವೆಂಬ ಆರೋಪವಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಬರ ನಿರ್ವಹಣೆ, ಎಪಿಎಂಸಿ ಚುನಾವಣೆ ಇತರೆ ಕಾರಣಗಳಿಂದ ತೆರವು ಕಾರ್ಯಾಚರಣೆ ತುಸು ವಿಳಂಬವಾಗಿದೆ ಎಂಬ ಮಾತುಗಳೂ ಇವೆ. ಜಿಲ್ಲಾಧಿಕಾರಿಗಳಿಗೆ ನಿರಂತರವಾಗಿ ಸೂಚನೆ ನೀಡುತ್ತಿರುವ ನಿಗಮವು, ಜಿಲ್ಲಾವಾರು ಒತ್ತುವರಿ ತೆರವು ಮಾಸಿಕ ವಿವರ ಪಡೆದು ಸರ್ಕಾರಕ್ಕೆ ನೀಡುತ್ತಿದೆ. ಸರ್ಕಾರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುತ್ತಿದೆ. ಹೀಗಾಗಿ ನಿಗಮದ ಸೂಚನೆಯಂತೆ ಕಾಲಮಿತಿಯೊಳಗೆ ಜಿಲ್ಲಾಧಿಕಾರಿಗಳು ತೆರವು ಕಾರ್ಯ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.