Advertisement

ಮಾ.16-ಪ್ರಧಾನಿ ಮಿನಿ ರೋಡ್‌ ಶೋ; ಖರ್ಗೆ ತವರಿನಿಂದಲೇ ಮೋದಿ ರಣಕಹಳೆ

05:03 PM Mar 15, 2024 | Team Udayavani |

ಉದಯವಾಣಿ ಸಮಾಚಾರ
ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ|ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರ ಕಲಬುರಗಿಯಿಂದಲೇ ಲೋಕಸಭೆ ಚುನಾವಣೆ ಕಹಳೆ ಮೊಳಗಿಸಲು ಸಜ್ಜಾಗಿರುವ ಪ್ರಧಾನಿ ಮೋದಿ, ಮಾ.16ರಂದು ಮತ ಬೇಟೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

Advertisement

ಅಂದು ಮಧ್ಯಾಹ್ನ 1 ಗಂಟೆಗೆ ವಿಶೇಷ ವಿಮಾನ ಮೂಲಕ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿ ಸುವ ಮೋದಿ ಬಳಿಕ ಹೆಲಿಕಾಪ್ಟರ್‌ ಮೂಲಕ ನಗರದ ಪೊಲೀಸ್‌ ಮೈದಾನಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಮಿನಿ ರೋಡ್‌ ಶೋ ಮುಖಾಂತರ ಸಮಾವೇಶ ನಡೆಯುವ ನೂತನ ವಿದ್ಯಾಲಯ ತೆರಳಲಿದ್ದಾರೆ. ಬಳಿಕ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

2019ರ ಲೋಕಸಭೆ ಚುನಾವಣೆ ಮುಂಚೆಯೂ ಪ್ರಧಾನಿ ಮೋದಿ ಇದೇ ನೂತನ ವಿದ್ಯಾಲಯ ಮೈದಾನದಲ್ಲಿ ರಣಕಹಳೆ ಮೊಳಗಿಸಿದ್ದರು. ಇದೇ ಸಮಾವೇಶದಲ್ಲಿ ಆಗ ಕಾಂಗ್ರೆಸ್‌ನಿದಿಂದ ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಡಾ|ಉಮೇಶ ಜಾಧವ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಡಾ|ಉಮೇಶ ಜಾಧವ ಈಗ ಎರಡನೇ ಬಾರಿಗೆ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತ್ತೆ ಮೋದಿ ಕಣ ರಂಗೇರಿಸಲು ಆಗಮಿಸುತ್ತಿರುವುದರಿಂದ ಎಲ್ಲರ ದೃಷ್ಟಿ ಕಲಬುರಗಿಯತ್ತ ನೆಟ್ಟಿದೆ.

ಸಿದ್ಧತೆ ಪರಿಶೀಲನೆ: ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ಪ್ರಧಾನಿ ಕಾರ್ಯಕ್ರಮದ ಸಿದ್ಧತೆಯನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌, ಪೊಲೀಸ್‌ ಆಯುಕ್ತ ಆರ್‌.ಚೇತನ್‌, ಎಸ್ಪಿ ಅಕ್ಷಯ ಹಾಕೆ, ಸಂಸದ ಡಾ|ಉಮೇಶ ಜಾಧವ, ಬಿಜೆಪಿ ಮುಖಂಡರಾದ ರಾಜುಗೌಡ, ಪಿ.ರಾಜೀವ್‌, ರಾಜಕುಮಾರ ಪಾಟೀಲ ತೇಲ್ಕೂರ, ಶಿವರಾಜ ಪಾಟೀಲ ರದ್ದೇವಾಡಗಿ, ಚಂದು ಪಾಟೀಲ ಪರಿಶೀಲಿಸಿದರು.

Advertisement

ಎರಡು ಲಕ್ಷ ಜನತೆ ಭಾಗವಹಿಸುವ ನಿರೀಕ್ಷೆ
ಸಮಾವೇಶದಲ್ಲಿ ಎರಡು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಲೋಕಸಭೆ ಕ್ಷೇತ್ರದ ಉಸ್ತುವಾರಿ ರಾಜುಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜು, ಸಂಸದ ಡಾ|ಉಮೇಶ ಜಾಧವ ತಿಳಿಸಿದರು. ಗುರುವಾರ ಸಂಜೆ ಸಮಾವೇಶದ ಸಿದ್ಧತೆ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಜಂಟಿಯಾಗಿ ಮಾತನಾಡಿದ ಅವರು, ಕಲಬುರಗಿ-ಬೀದರ್‌ ಜಿಲ್ಲೆಯ ಕಾರ್ಯಕರ್ತರು ಹಾಗೂ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಆಯಾ ಮಾರ್ಗಗಳಲ್ಲಿ ಬರುವ ಎಂಟು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಆಕ್ಷೇಪ: ಬುಧವಾರ ಕಲಬುರಗಿ ನೂತನ ಮಹಾವಿದ್ಯಾಲಯದಲ್ಲಿ ನಡೆದ ಗ್ಯಾರಂಟಿ ಸಮಾವೇಶವನ್ನು ಕಾಂಗ್ರೆಸ್‌ ಪಕ್ಷದ ವೇದಿಕೆಯನ್ನಾಗಿ ಮಾರ್ಪಡಿಸಿರುವುದು ಖಂಡನೀಯವಾಗಿದೆ ಎಂದು ಮಾಜಿ ಸಚಿವ ರಾಜುಗೌಡ ಟೀಕಿಸಿದರು. ಪಕ್ಷದ ಸಮಾವೇಶ ಸಂಘಟಿಸಿ ಬಿಜೆಪಿ ವಿರುದ್ಧ ಟೀಕೆ ಮಾಡಲಿ. ಅದನ್ನು ಬಿಟ್ಟು ಸರ್ಕಾರಿ ವೇದಿಕೆಯಲ್ಲಿ ಟೀಕೆ ಮಾಡುವುದು ಎಷ್ಟೊಂದು ಸಮಂಜಸ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next