Advertisement

ಮಾ. 1: ಕಡಬ ತಾಲೂಕು ಉದ್ಘಾಟನೆ 

06:21 AM Feb 27, 2019 | |

ಕಡಬ : ನೂತನ ಕಡಬ ತಾಲೂಕು ಉದ್ಘಾಟನೆಗೆ ಮಾ. 1ರಂದು ದಿನ ನಿಗದಿಯಾಗಿದ್ದು, ಉದ್ಘಾಟನ ಸಮಾರಂಭದ ಪೂರ್ವಸಿದ್ಧತೆಗಾಗಿ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯು ಕಡಬದ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಜರಗಿತು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿಗಸ್‌ ಅವರು ಮಾತನಾಡಿ. ರಾಜ್ಯದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ನೂತನ ಕಡಬ ತಾಲೂಕನ್ನು ಮಾ. 1ರಂದು ಉದ್ಘಾಟಿಸಲಿದ್ದಾರೆ. ಸಮಾರಂಭದ ಸಿದ್ಧತೆಗಾಗಿ ಹೆಚ್ಚಿನ ಕಾಲಾವಕಾಶ ಇಲ್ಲದೇ ಇರುವುದರಿಂದಾಗಿ ಎಲ್ಲ ವ್ಯವಸ್ಥೆಗಳು ತುರ್ತಾಗಿ ಆಗಬೇಕಿದೆ ಎಂದರು.

ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಅವರು ಮಾತನಾಡಿ, ತಾಲೂಕು ಉದ್ಘಾಟನೆಗೆ ಸರಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದರು. ತಾಲೂಕು ಹೋರಾಟ ಸಮಿತಿಯ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಅವರು ನೂತನ ತಾಲೂಕು ಉದ್ಘಾಟನೆಯ ಬಳಿಕವಷ್ಟೇ ತಾಲೂಕು ಅನುಷ್ಠಾನಕ್ಕೆ ವೇಗ ದೊರೆಯಲಿದೆ. ಕಡಬ ಪೇಟೆಯ ಪಂಜ ರಸ್ತೆ ಬಳಿ ಬೆಳಗ್ಗೆ ಎಲ್ಲರೂ ಸೇರಿ, ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ, ಬಳಿಕ ಮೆರವಣಿಗೆಯಲ್ಲಿ ಸಾಗಿ ಕಡಬ ತಾಲೂಕು ಕಚೇರಿಯಲ್ಲಿ ಉದ್ಘಾಟನೆ ನೆರವೇರಿಸಿ ಸಭೆ ನಡೆಸುವುದು ಒಳಿತು ಎಂದರು.

ಗ್ರಾಮ ಸೇರ್ಪಡೆ: ಪತ್ರ
ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌ ಮಾತನಾಡಿ, ಈ ಹಿಂದೆ ಜಗದೀಶ್‌ ಶೆಟ್ಟರ್‌ ತಾಲೂಕು ಘೋಷಣೆ ಮಾಡುವಾಗ ಇದ್ದ ಬೆಳ್ತಂಗಡಿ ತಾಲೂಕಿನ 5 ಗ್ರಾಮಗಳನ್ನು ಈ ಬಾರಿ ರಾಜಕೀಯ ಕಾರಣಗಳಿಗಾಗಿ ಕೈಬಿಡಲಾಗಿದೆ. ಆ 5 ಗ್ರಾಮಗಳನ್ನು ಹಾಗೂ ಪಂಜ ಭಾಗವನ್ನು ಮತ್ತೆ ಕಡಬ ತಾಲೂಕಿಗೆ ಸೇರ್ಪಡೆ ಮಾಡಬೇಕು ಎಂದು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

ಬ್ಯಾನರ್‌ಗೆ ಶುಲ್ಕವಿಲ್ಲ!
ಕಡಬ ಗ್ರಾ.ಪಂ.ಅಧ್ಯಕ್ಷ ಅಧ್ಯಕ್ಷ ಬಾಬು ಮುಗೇರ ಅವರು ಮಾತನಾಡಿ, ತಾಲೂಕು ಉದ್ಘಾಟನೆಯ ಶುಭಾಶಯಗಳ ಬ್ಯಾನರ್‌ಗಳನ್ನು ಅಳವಡಿಸುವವರಿಗೆ ಪಂಚಾಯತ್‌ನ ಶುಲ್ಕ ವಿಧಿಸುವುದಿಲ್ಲ. ಆದರೆ ಪ್ಲಾಸ್ಟಿಕ್‌, ಫ್ಲೆಕ್ಸ್‌ಗಳಿಗೆ ಅವಕಾಶವಿಲ್ಲ ಎಂದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯರಾದ ಫಝಲ್‌ ಕೋಡಿಂಬಾಳ, ಗಣೇಶ್‌ ಕೈಕುರೆ, ಪಿ.ವೈ. ಕುಸುಮಾ, ಪ್ರಮುಖರಾದ ಅಶೋಕ್‌ ನೆಕ್ರಾಜೆ, ಎಸ್‌. ಅಬ್ದುಲ್‌ ಖಾದರ್‌, ಸೀತಾರಾಮ ಗೌಡ ಪೊಸವಳಿಕೆ, ವಾಡ್ಯಪ್ಪ ಗೌಡ ಎರ್ಮಾಯಿಲ್‌, ಸತೀಶ್‌ ನಾಯಕ್‌, ಕೆ.ಎಂ. ಹನೀಫ್‌ ಮತ್ತಿತರರು ಸಲಹೆ ಸೂಚನೆ ನೀಡಿದರು.

Advertisement

ತಾ.ಪಂ. ಸದಸ್ಯರಾದ ತೇಜಸ್ವಿನಿ ಶೇಖರ ಗೌಡ, ಜಯಂತಿ ಆರ್‌. ಗೌಡ, ಸೈಂಟ್‌ ಜೋಕಿಮ್ಸ್‌ ವಿದ್ಯಾ ಸಂಸ್ಥೆಯ ಸಂಚಾಲಕ ವಂ| ರೊನಾಲ್ಡ್‌ ಲೋಬೋ, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕೆ., ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಗೌಡ ಎಂ.ಎಸ್‌., ಕಡಬ ಎಸ್‌ಐ ಪ್ರಕಾಶ್‌ ದೇವಾಡಿಗ, ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ವೇದಾವತಿ, ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್‌, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಹೇಮಾರಾಮ್‌ದಾಸ್‌ ಉಪಸ್ಥಿತರಿದ್ದರು.

ಈ ಬಾರಿ ರದ್ದಾಗದಿರಲಿ: ಪ್ರಾರ್ಥನೆ 
ನೂತನ ಕಡಬ ತಾಲೂಕು ಅಧಿಕೃತವಾಗಿ ಉದ್ಘಾಟಿಸಲು ಈ ಹಿಂದೆ ದಿನ ನಿಗದಿಪಡಿಸಿದ್ದರೂ ಪದೇ ಪದೇ ವಿಘ್ನಗಳು ಎದುರಾಗಿ 4 ಬಾರಿ ಉದ್ಘಾಟನ ಸಮಾರಂಭ ರದ್ದಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಮಾರಂಭ ರದ್ದಾಗದೇ ತಾಲೂಕು ಉದ್ಘಾಟನೆಯ ಭಾಗ್ಯ ಈಡೇರಲಿ ಎಂದು ಕಡಬ ತಾಲೂಕಿನ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯವೂ ಸೇರಿದಂತೆ ಸ್ಥಳೀಯ ಸರ್ವ ಧರ್ಮಗಳ ಶ್ರದ್ಧಾ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮುಂದುವರಿಯುವುದು ಒಳಿತು ಎನ್ನುವ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು. ಕಳೆದ ಸಲ ಮಾಜಿ ಸಚಿವ, ಖ್ಯಾತ ಚಲನಚಿತ್ರ ನಟ ಅಂಬರೀಶ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶೋಕಾಚರಣೆ ಘೋಷಣೆಯಾದ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ತಾಲೂಕು ಉದ್ಘಾಟನೆಯ ಕಾರ್ಯಕ್ರಮ ರದ್ದುಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next