ಮಂಗಳೂರು: ನಗರದ ಸುಲ್ತಾನ್ ಬತ್ತೇರಿಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ಮಾ. 8 ಹಾಗೂ 9ರಂದು ಆಯೋಜಿಸಿರುವ “ಅಮೃತ ಸಂಗಮ-2019’ರಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಪಾಲ್ಗೊಳ್ಳಲಿದ್ದಾರೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾ. 8ರಂದು ಬೆಳಗ್ಗೆ 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಗಾಲಿ ಕುರ್ಚಿ, ವಿದ್ಯಾರ್ಥಿವೇತನ, ಪಿಂಚಣಿ ವಿತರಣೆ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆಯ ಹೊಲಿಗೆ ಯಂತ್ರ, ಅಮೃತ ಶ್ರೀ ಯೋಜನೆಯ ಸದಸ್ಯರಿಗೆ ಸೀರೆ ವಿತರಣೆ ನಡೆಯಲಿದೆ. ಅಮಲ ಭಾರತ ಯೋಜನೆಯಡಿ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಆಧುನಿಕ ಮಾದರಿಯ ಶೌಚಾಲಯ ಉದ್ಘಾಟನೆ ನಡೆಯಲಿದೆ ಎಂದರು.
ಕಾರ್ಪೊರೇಶನ್ ಬ್ಯಾಂಕ್ ಆಡಳಿತ ನಿರ್ದೇಶಕಿ ಪಿ.ವಿ. ಭಾರತಿ, ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ್ ಕೆ. ಭಾಗವಹಿಸಲಿದ್ದಾರೆ. ಎರಡೂ ದಿನ ಪ್ರವಚನ, ಸತ್ಸಂಗ, ಭಜನೆ, ಧ್ಯಾನ, ಮಾನಸ ಪೂಜೆ ಮತ್ತು ಎಲ್ಲರಿಗೂ ಅಮ್ಮನವರ “ಅನುಗ್ರಹ ದರ್ಶನ’ವಿರುತ್ತದೆ. ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ವಿಶೇಷ ಪೂಜೆಗಳು ನಡೆಯಲಿವೆ ಎಂದರು.ಪ್ರಮುಖರಾದ ವಾಮನ್ ಕಾಮತ್, ಸುರೇಶ್ ಅಮೀನ್, ವಾಸುದೇವ ಬೋಳೂರು, ಮಾಧವ ಸುವರ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.
ಎಲ್ಲರಿಗೂ “ಅಮ್ಮ’ನವರ ದರ್ಶನ
“ಅಮ್ಮನವರ ದರ್ಶನ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಅಗತ್ಯವಾದ ಟೋಕನ್‌ಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತದೆ. ಸಕಾಲದಲ್ಲಿ ಆಗಮಿಸಿಆಸೀನರಾಗಿರುವ ಎಲ್ಲರಿಗೂ ದರ್ಶನಾವಕಾಶವಿರುತ್ತದೆ. ಅನ್ನಸಂತರ್ಪಣೆ, ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯವಿದೆ. ಲೇಡಿಹಿಲ್‌ನಿಂದ ಅಮೃತ ವಿದ್ಯಾಲಯಂ ವರೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್, ರೈಲು ನಿಲ್ದಾಣಗಳಿಗೂ ಸಾರಿಗೆ ವ್ಯವಸ್ಥೆಯಿದೆ ಎಂದು ಪ್ರಸಾದ್‌ರಾಜ್ ಕಾಂಚನ್ ತಿಳಿಸಿದರು.