ಕುಂದಾಪುರ : ಕೆಲವು ದಿನಗಳ ಹಿಂದೆ ಸತ್ತ ಅಪೂರ್ವ ಪೈಲೆಟ್ ವೇಲ್‌ನ ಕಳೇಬರವು ಹೆದ್ದಾರಿ ಬದಿಯ ತ್ರಾಸಿ-ಮರವಂತೆ ಕಡಲತೀರದಲ್ಲಿ ಪತ್ತೆಯಾಗಿದೆ.
ಬುಧವಾರ ಬೆಳಗ್ಗಿನಿಂದಲೇ ಕೊಳೆತು ನಾರುತ್ತಿದ್ದರೂ ಸಂಬಂಧಪಟ್ಟ ಪ್ರವಾಸೋದ್ಯಮ ಅಥವಾ ಮೀನುಗಾರಿಕೆ ಇಲಾಖೆಯವರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಸ್ಥಳೀಯರೇ ಸೇರಿ ಕಡಲ ಕಿನಾರೆಯಲ್ಲಿ ಹೂತಿದ್ದರು.
ಮಂಗಳವಾರ ತಡರಾತ್ರಿ ಸುಮಾರು 500 ಕೆ.ಜಿ. ತೂಕದ ಪೈಲೆಟ್ ವೇಲ್ ಶವ ತ್ರಾಸಿ – ಮರವಂತೆ ಬೀಚಿನ ದಡಕ್ಕೆ ತೇಲಿ ಬಂದಿತ್ತು. ಈ ಮೀನಿನ ಕಳೇಬರವನ್ನು ಅರಣ್ಯ ಅಧಿಕಾರಿಗಳು ಹಾಗೂ ಮಂಗಳೂರಿನ ರೀಫ್ವಾಚ್ ಮರೈನ್ ಕನ್ಸರ್ವೇಶನ್ ಸಂಸ್ಥೆಯ ಅಧಿಕಾರಿಗಳು ಪರಿಶೀಲಿಸಿದ್ದು, ಅಪರೂಪದ ಪೈಲೆಟ್ ವೇಲ್ ಎನ್ನುವ ತಿಮಿಂಗಿಲದ ಪ್ರಭೇದ ಎಂದು ತಿಳಿಸಿದ್ದಾರೆ.
ಹೂತು ಹಾಕಿದ್ದ ಮೀನಿನ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೀನಿನ ಶ್ವಾಸಕೋಶದಲ್ಲಿ ಗಾಳಿ ಇರದ ಕಾರಣ, ಶುಷ್ಕ ವಾತಾವರಣದ ಒತ್ತಡದಿಂದ ಸಾವನ್ನಪ್ಪಿರಬಹುದು ಎಂದು ತಿಳಿದು ಬಂದಿದೆ.
ಅರಣ್ಯಾಧಿಕಾರಿ ದಿಲೀಪ್ ಕುಮಾರ್, ರೀಫ್ವಾಚ್ ಮರೈನ್ ಕನ್ಸರ್ವೇಶನ್ ಸಂಸ್ಥೆಯ ತೇಜಸ್ವಿನಿ, ವಿರಿಲ್ ಸ್ಟೀಫನ್ ಮೊದಲಾದವರಿದ್ದರು.
ಇದನ್ನೂ ಓದಿ : ಶಿರ್ವ : ರಸ್ತೆ ಬದಿ ನಿಂತಿದ್ದವರಿಗೆ ಬೈಕ್ ಢಿಕ್ಕಿ : ತಂದೆ ಸಾವು, ಮಗ ಗಂಭೀರ