Advertisement

Maravanthe: ಸಂಪರ್ಕ ರಸ್ತೆ ಮತ್ತಷ್ಟು ಬಿರುಕು

03:44 PM Jun 17, 2023 | Team Udayavani |

ಕುಂದಾಪುರ: ಬಿಪರ್‌ ಜಾಯ್‌ ಚಂಡಮಾರುತದ ಪರಿಣಾಮ ಕಡಲಬ್ಬರ ಜೋರಾಗಿದ್ದು, ಇದರಿಂದ ಮರವಂತೆಯ ಕರಾವಳಿ ಭಾಗವನ್ನು ಸಂಪರ್ಕಿಸುವ ರಸ್ತೆಯು ಗುರುವಾರ ಬಿರುಕು ಬಿಟ್ಟಿದ್ದು, ಶುಕ್ರವಾರ ಭಾರೀ ಗಾತ್ರದ ಅಲೆಗಳು ಜೋರಾಗಿ ಅಪ್ಪಳಿಸುತ್ತಿರುವುದರಿಂದ ಇದು ಮತ್ತಷ್ಟು ಕುಸಿದಿದೆ.

Advertisement

ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಬೆಳಗ್ಗೆ ಮರವಂತೆಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಅವರು, ಇಲ್ಲಿನ ಸಮಸ್ಯೆಯನ್ನು ತಿಳಿಸುವ ಪ್ರಯತ್ನ ಮಾಡಿದರು. ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಮೀನುಗಾರಿಕಾ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಸಂಪರ್ಕ ಕಡಿತ ಭೀತಿ
ಮರವಂತೆಯ ಮೀನುಗಾರರು ನೆಲೆಸಿರುವ ಕರಾವಳಿ ಭಾಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಗುರುವಾರ ಸ್ವಲ್ಪ ಮಟ್ಟಿಗೆ ಕುಸಿದಿದ್ದರೆ,ಶುಕ್ರವಾರ ಈ ಪ್ರಮಾಣ ಇನ್ನಷ್ಟು ಜಾಸ್ತಿಯಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಪರ್ಕ ಕಡಿತ ಭೀತಿ ಎದುರಾಗಿದೆ. ಈ ರಸ್ತೆಯ ಸಂಪರ್ಕ ಕಡಿತಗೊಂಡರೆ, ಈ ಭಾಗದಲ್ಲಿ ನೂರಾರು ಮನೆಗಳಿದ್ದು, ಸಂಚಾರಕ್ಕೆ ತೊಡಕಾಗಲಿದೆ ಎನ್ನುವ ಆತಂಕ ಇಲ್ಲಿನ ಮೀನುಗಾರರದ್ದಾಗಿದೆ.

ಮೀನುಗಾರರ ಆಕ್ರೋಶ
ಕಳೆದ  ಚಂಡಮಾರುತದ ವೇಳೆ ಕಾಂಕ್ರೀಟ್‌ ರಸ್ತೆಯು ಸಂಪೂರ್ಣ ಕುಸಿದು ಬಿದ್ದಿದ್ದು, ಆ ಬಳಿಕ ನಾವೇ ಮೀನುಗಾರರ ಸೇವಾ ಸಮಿತಿಯವರೆಲ್ಲ ಸ್ವಂತ ಖರ್ಚಿನಲ್ಲಿ ಒಂದೂವರೆ ಲಕ್ಷ ರೂ. ಅನುದಾನವನ್ನು ಬಳಸಿಕೊಂಡು, ರಸ್ತೆ ದುರಸ್ತಿ ಮಾಡಿ, ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದ್ದೇವು. ಆ ಬಳಿಕ ಇಲ್ಲಿಗೆ ಹಿಂದಿನ ಸರಕಾರದ ಮುಖ್ಯಮಂತ್ರಿಗಳು, ಕಂದಾಯ, ಮೀನು ಗಾರಿಕೆ ಸಚಿವರು, ಜಿಲ್ಲಾಧಿಕಾರಿಗಳು ಸಹಿತ ಎಲ್ಲರೂ ಇಲ್ಲಿಗೆ ಭೇಟಿ ನೀಡಿ ಹೋಗಿದ್ದಾರೆ. ಆದರೆ ಇಲ್ಲಿನ ರಸ್ತೆ ಅಥವಾ ಕಡಲ್ಕೊರೆತ ತಡೆಯ ಕಾಮಗಾರಿಗೆ ಒಂದೂ ರೂ. ಅನುದಾನ ಬಿಡುಗಡೆಗೊಂಡಿಲ್ಲ. ಇದ ರಿಂದಲೇ ಈಗ ಈ ರಸ್ತೆಯು ಸಂಪೂರ್ಣ ಕೊಚ್ಚಿ ಹೋಗುವ ಆತಂಕ ಎದುರಾಗಿದೆ ಎನ್ನುವುದಾಗಿ ಇಲ್ಲಿಗೆ ಭೇಟಿ ನೀಡಿದ ಶಾಸಕರು, ಬಿಜೆಪಿ ಮಂಡಲದ ಅಧ್ಯಕ್ಷರ ಎದುರೇ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.

ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಬೈಂದೂರು ತಾ.ಪಂ. ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಆರೆಸ್ಸೆಸ್‌ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪಕ್ಷದ ಮುಖಂಡರಾದ ಸುರೇಶ್‌ ಶೆಟ್ಟಿ, ಅಶೋಕ ಶೆಟ್ಟಿ ಸಂಸಾಡಿ, ಅನಿತಾ, ಮರವಂತೆ ಮೀನುಗಾರರ ಶ್ರೀ ರಾಮ ಸೇವಾ ಸಮಿತಿಯ ಪ್ರಮುಖರಾದ ವಾಸುದೇವ ಖಾರ್ವಿ, ಚಂದ್ರ ಖಾರ್ವಿ, ಶಂಕರ್‌ ಖಾರ್ವಿ, ಮೀನುಗಾರರು ಉಪಸ್ಥಿತರಿದ್ದರು.

Advertisement

ಸರಕಾರ ತುರ್ತು ಸ್ಪಂದಿಸಲಿ
ಜಿಲ್ಲೆಯಲ್ಲಿ ಎಲ್ಲ ಕಡೆಗಳಿಗಿಂತಲೂ ಇಲ್ಲಿನ ಕರಾವಳಿಯಲ್ಲಿ ಹಚ್ಚಿನ ಅಪಾಯ ಜಾಸ್ತಿ. ಡಿಸಿಯವರಿಗೆ ಹೇಳಿದರೆ ಅವರ ಅಸಹಾಯಕತೆ ಹೇಳಿಕೊಳ್ಳುತ್ತಾರೆ. ಮೀನುಗಾರಿಕಾ ಸಚಿವರು ಕರಾವಳಿಯವರೇ ಆಗಿರುವುದರಿಂದ ಅವರಿಗೆ ಇಲ್ಲಿನ ಸಮಸ್ಯೆ ಅರ್ಥವಾಗಿದ್ದು, ನಮಗೆ ಸಚಿವರ ಬಗ್ಗೆ ವಿಶ್ವಾಸವಿದೆ. ನಾವು ಭೇಟಿ ಮಾಡಿದಾಗಲೂ ಭರವಸೆ ನೀಡಿದ್ದಾರೆ. ಇಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರದ ಜತೆಗೆ, ತುರ್ತು ಪರಿಹಾರ ಸೂಚಿಸಬೇಕಾಗಿದೆ. ಇಲ್ಲಿನ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವುದಾಗಿ ಸಚಿವರು ಹಾಗೂ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇನೆ.
– ಗುರುರಾಜ್‌ ಗಂಟಿಹೊಳೆ, ಬೈಂದೂರು ಶಾಸಕರು

ಗಂಭೀರವಾಗಿ ಪರಿಗಣಿಸಿ
ಬಿಪರ್‌ ಜಾಯ್‌ ಚಂಡಮಾರುತದಿಂದ ಕಡಲ್ಕೊರೆತ ಶುರುವಾಗಿ ವಾರವಾದರೂ ಇಲ್ಲಿಗೆ ಯಾರೂ ಪ್ರಮುಖ ಅಧಿಕಾರಿಗಳು ಬಂದಿಲ್ಲ. ಈ ಹಿಂದಿನ ಸರಕಾರದ ಎಲ್ಲರೂ ಬಂದಿದ್ದರೂ, ಅಧಿಕಾರಿಗಳು ಬಂದು ಹೋದರೂ ಇಲ್ಲಿಗೆ ಇನ್ನೂ ಶಾಶ್ವತ ಪರಿಹಾರ ದೊರಕಿಸಿ ಕೊಡಲಿಲ್ಲ. ನಾವೇ ತುರ್ತು ಕಾಮಗಾರಿ ಮಾಡಿಕೊಂಡಿದ್ದೇವೆ. ಆದರೆ ಸರಕಾರದಿಂದ ತಡೆಗೋಡೆ, ಕಡಲ್ಕೊರೆತ ತಡೆಗೆ ಏನೂ ಮಾಡಿಲ್ಲ. ರಸ್ತೆ, ಹಿಂದಿನ ವರ್ಷಗಳಲ್ಲಿ 500 ಕ್ಕೂ ಮಿಕ್ಕಿ ತೆಂಗಿನ ಮರ, 50-60 ಮೀನುಗಾರಿಕಾ ಶೆಡ್‌ ಕೊಚ್ಚಿಕೊಂಡು ಹೋಗಿದೆ. ಶಾಸಕರು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
-ವಾಸುದೇವ ಖಾರ್ವಿ, ಅಧ್ಯಕ್ಷರು,
ಮೀನುಗಾರರ ಶ್ರೀ ರಾಮ ಸೇವಾ ಸಮಿತಿ ಮರವಂತೆ

Advertisement

Udayavani is now on Telegram. Click here to join our channel and stay updated with the latest news.

Next