ಕುಂದಾಪುರ: ಮರವಂತೆಯ ಮೀನುಗಾರಿಕಾ ಹೊರ ಬಂದರಿನ ಒಂದೊಂದೇ ಕಲ್ಲುಗಳು ಕಡಲು ಸೇರುತ್ತಿದೆ. ಅಲೆಗಳ ಅಬ್ಬರ ತಡೆಯಲು ಇಟ್ಟಿದ್ದ ಮರಳಿನ ಚೀಲಗಳು ಸಹ ಸಮುದ್ರಪಾಲಾಗುತ್ತಿದೆ. ಅಬ್ಬರಿಸುತ್ತಿರುವ ಕಡಲಿನ ಹೊಡೆತದಿಂದ ಮೀನುಗಾರಿಕಾ ಬಂದರು ಅಕ್ಷರಶಃ ನಲುಗಿ ಹೋಗಿದೆ.
ಭಾರೀ ತೂಕದ ಟೆಟ್ರಾಫೈಡ್‌ನಲ್ಲಿ ನಿರ್ಮಿಸಿರುವ ತಡೆಗೋಡೆಯೇ ಅಪಾಯದಲ್ಲಿ ಇದ್ದಂತಿದ್ದು, ಒಂದೊಂದೇ ಸಮುದ್ರದ ಒಡಲು ಸೇರುವಂತಿದೆ. ಕಲ್ಲುಗಳು ಜಾರಿ, ಕಡಲು ಪಾಲಾಗಿವೆ. ಸಮುದ್ರದ ಅಲೆಗಳು ಬಂದರಿನೊಳಗೆ ಬಂದು ಅಪ್ಪಳಿಸುತ್ತಿರುವುದರಿಂದ ಬಂದರು ಪ್ರದೇಶದಲ್ಲಿ ಯಾಂತ್ರೀಕೃತ ನಾಡದೋಣಿ ನಿಲುಗಡೆ ಜಾಗದಲ್ಲಿ ಕೊರೆತ ಆರಂಭಗೊಂಡಿದ್ದು, ದಿನಕಳೆದಂತೆ ತೀವ್ರಗೊಳ್ಳುತ್ತಿದೆ.
ಕಡಲ ಅಲೆಗಳ ಅಬ್ಬರಕ್ಕೆ ಒಳಾಂಗಣದ ಬಹುತೇಕ ಭೂಭಾಗ ಕಡಲು ಸೇರುತ್ತಿದ್ದರೆ, ಬಂದರಿನಲ್ಲಿ ಅಳವಡಿಸಲಾಗಿದ್ದ ಹೈಮಾಸ್ಟ್ ದೀಪದ ಕಂಬಗಳು, ಇಂಟರ್‌ಲಾಕ್ ಕೂಡ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. 2013ರಲ್ಲಿ ಆರಂಭಗೊಂಡಿದ್ದ ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಸುಮಾರು 55 ಕೋ. ರೂ. ವೆಚ್ಚದ ಕಾಮಗಾರಿಯಲ್ಲಿ ಶೇ.50ರಷ್ಟು ಸಮುದ್ರ ಪಾಲಾಗಿದೆ.
ಬಂದರಿನ ರಕ್ಷಣೆ ಮತ್ತು ವಿನ್ಯಾಸ ಬದಲಾವಣೆಗಾಗಿ ಬಿಡುಗಡೆಯಾದ 85 ಕೋ. ರೂ. ಅನುದಾನದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಅದಾಗಿ 2 ವರ್ಷ ಕಳೆದಿದೆ. ಇದು ಪೂರ್ಣಗೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುವುದು ಇಲ್ಲಿನ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಔಟ್‌ಡೋರ್ ಬಂದರು ಇನ್ನಿಲ್ಲದಂತೆ ಮರೆಯಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಬಂದರಿನ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿ ಮೀನುಗಾರರು ಒತ್ತಾಯಿಸಿದ್ದಾರೆ.