Advertisement
ಉಪ್ಪುಂದ ಫಿಶರೀಸ್ ಕಾಲನಿಯ ಕಂಪ್ಲಿಮನೆ ಸುಬ್ಬ ಖಾರ್ವಿಯವರ ಪುತ್ರ ರೋಹಿತ್ ಖಾರ್ವಿ (35) ಸತತ 6 ಗಂಟೆ ಹೋರಾಡಿ ಮೇಲೆ ಬಂದವರು.
ರವಿವಾರ ಬೆಳಗ್ಗೆ ಮರವಂತೆಯ ಹೊರ ಬಂದರು ಪ್ರದೇಶದ ಎನ್‌ಎಸ್‌ಕೆ ಸಂಸ್ಥೆಯ ಕಾರ್ಮಿಕರು ನೆಲೆಸಿರುವ ಜಾಗದಲ್ಲಿ ಹ್ಯಾಂಡ್‌ಪಂಪ್ ಬಳಸಲು ಕೊಳವೆ ಬಾವಿ ತೆಗೆಯಲಾಗುತ್ತಿತ್ತು. ಈ ಕಾರ್ಯದಲ್ಲಿ ರೋಹಿತ್ ಖಾರ್ವಿ ಮತ್ತು ಇನ್ನು 3 ಮಂದಿ ತೊಡಗಿಕೊಂಡಿದ್ದರು. ರೋಹಿತ್ ಹಾಗೂ ಮತ್ತೂಬ್ಬರು ಕೆಳಗಿಳಿದಿದ್ದು, ಇನ್ನಿಬ್ಬರು ಮೇಲೆ ಇದ್ದರು. ಈ ವೇಳೆ ಸುತ್ತಲಿನ ಮಣ್ಣು ಕೊರೆಯುತ್ತಿದ್ದಂತೆ ಸಡಿಲವಾದ ಮಣ್ಣು ಕುಸಿಯಿತು. ಕೆಳಗಿದ್ದ ಒಬ್ಬರು ಮಣ್ಣು ಕುಸಿಯುತ್ತಿದ್ದಂತೆ ಮೇಲೆ ಬಂದರಾದರೂ ರೋಹಿತ್ ಕಾಲು ಮಣ್ಣಿನಲ್ಲಿ ಸಿಲುಕಿಕೊಂಡಿತು. ಈ ವೇಳೆ ಅವರ ಮೇಲೆ ಮತ್ತಷ್ಟು ಮಣ್ಣು ಕುಸಿಯಿತು. ಕೂಡಲೇ ಅಲ್ಲಿದ್ದವರು ಮೇಲೆತ್ತಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅನಂತರ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. 6 ತಾಸು ಕಾರ್ಯಾಚರಣೆ
ಬೆಳಗ್ಗೆ 11.30ರ ಸುಮಾರಿಗೆ ಸುದ್ದಿ ತಿಳಿದ ತತ್‌ಕ್ಷಣ ಕುಂದಾಪುರದ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬಂದಿ, ವೈದ್ಯರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಣ ಕಾರ್ಯಾಚರಣೆ ಆರಂಭಿಸಿದರು. ಬೋರ್‌ವೆಲ್‌ನ ಒಂದು ಬದಿಯಿಂದ ಸುಮಾರು 10 ಅಡಿ ಆಳದವರೆಗೆ ಮಣ್ಣನ್ನು ತೆರವುಗೊಳಿಸಲಾಯಿತು. ಅದು ಫಲ ಕೊಡದಿದ್ದಾಗ ಬೋರ್‌ವೆಲ್‌ನ ಸುತ್ತ ದೊಡ್ಡದಾದ ಡ್ರಮ್ ಇಳಿಸಿ, ಅಪಾಯವಾಗದಂತೆ ಮತ್ತೆ ಸುತ್ತಲಿನ ಮಣ್ಣನ್ನು ಅಗೆಯಲು ಆರಂಭಿಸಿದರು. ಸಮುದ್ರ ತೀರದ ಪ್ರದೇಶವಾಗಿರುವುದರಿಂದ ಮರಳು ಮತ್ತು ನೀರಿನಂಶ ಹೆಚ್ಚಿದ್ದುದರಿಂದ ಮಣ್ಣು ಒಮ್ಮೆಲೆ ಕುಸಿಯುವ ಭೀತಿಯ ನಡುವೆಯೇ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಯಿತು. ಎರಡೂ ಬದಿ ಕಾರ್ಮಿಕರು ವಾಸಿಸುವ ಶೆಡ್ ಇದ್ದು ಮೇಲೆತ್ತಿದ ಮಣ್ಣನ್ನು ತೆರವುಗೊಳಿಸಲು ಅಡಚಣೆ ಉಂಟಾಗಿತ್ತು.
Related Articles
Advertisement
ರಕ್ಷಣಾ ಕಾರ್ಯದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ., ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್, ಕುಂದಾಪುರ ತಹಶೀಲ್ದಾರ್ ತಿಪ್ಪೆಸ್ವಾಮಿ, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ಬೈಂದೂರು ವೃತ್ತ ನಿರೀಕ್ಷಕ ಸುರೇಶ ನಾಯ್ಕ ಮತ್ತಿತರ ಅಧಿಕಾರಿಗಳು ಪಾಲ್ಗೊಂಡರು.
ಶಾಸಕರಿಂದ ನಗದು ಬಹುಮಾನರೋಹಿತ್ನನ್ನು ಯಶ್ವಸಿಯಾಗಿ ರಕ್ಷಿಸಿದ ಅಗ್ನಿಶಾಮಕ ಸಿಬಂದಿಗೆ 25 ಸಾವಿರ ರೂ. ನಗದು ಬಹುಮಾನವನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಘೋಷಿಸಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರು ಮತ್ತು ಸ್ಥಳೀಯರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಏನಿದು ಹ್ಯಾಂಡ್ ಬೋರ್‌ವೆಲ್?
ದೊಡ್ಡ ಯಂತ್ರದ ಬೋರ್‌ವೆಲ್ ಇದಲ್ಲ. ಇದನ್ನು ಸಣ್ಣ ಯಂತ್ರದ ಸಹಾಯದಿಂದ ಮಾನವ ಶ್ರಮದ ಜತೆಗೆ ನಿರ್ಮಿಸಲಾಗುತ್ತದೆ. ಸುಮಾರು 30 ಅಡಿ ಆಳದಲ್ಲಿ ನೀರು ಇರುವ ಜಾಗವನ್ನು ಗುರುತಿಸಿ, ಮೊದಲು ಸುಮಾರು 10 ಅಡಿ ಆಳದ ವರೆಗೆ 3 – 4 ಅಡಿ ಅಗಲಕ್ಕೆ ತೋಡಲಾಗುತ್ತದೆ. ಅನಂತರ ಕೊಳವೆಯನ್ನು ಇಳಿಸುತ್ತಾರೆ. ಕೆಳ ಕೆಳಕ್ಕೆ ಇಳಿಸುತ್ತ ಹೋದಂತೆ ಆ ಕೊಳವೆ ಮೂಲಕವೇ ಮಣ್ಣು ಹೊರತೆಗೆಯಲಾಗುತ್ತದೆ. ಮೇಲ್ಮಟ್ಟದಲ್ಲಿ ನೀರಿರುವ ಕಡೆ ಮಾತ್ರ ಇಂತಹ ಕೊಳವೆ ಬಾವಿ ತೋಡಲಾಗುತ್ತದೆ. ಅಗ್ನಿಶಾಮಕ ದಳಕ್ಕೆ ಶ್ಲಾಘನೆ
ರೋಹಿತ್ ಅವರನ್ನು ಯಶಸ್ವಿಯಾಗಿ ಮೇಲೆತ್ತುವಲ್ಲಿ ಸತತ ಆರು ಗಂಟೆಗೂ ಹೆಚ್ಚು ಕಾಲ ಸ್ಥಳೀಯರು, ಮೀನುಗಾರರು, ಗಂಗೊಳ್ಳಿ ಠಾಣೆಯ ಪೊಲೀಸರ ಸಹಕಾರದೊಂದಿಗೆ ಶ್ರಮಿಸಿದ ಕುಂದಾಪುರ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಕೊರಗ ನಾಗ ಮೊಗೇರ ನೇತೃತ್ವದ ಅಧಿಕಾರಿಗಳು ಮತ್ತು ಸಿಬಂದಿಯ ಸಾಹಸಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ಕಾರ್ಯಾಚರಣೆ ವೇಳೆ ಗಂಗೊಳ್ಳಿಯ 24ಗಿ7 ಆಪದಾºಂಧವ ಆ್ಯಂಬುಲೆನ್ಸ್ ಮತ್ತು 24ಗಿ7 ಜೀವರಕ್ಷಕ ಆ್ಯಂಬುಲೆನ್ಸ್‌ಗಳನ್ನು ಸ್ಥಳದಲ್ಲಿಯೇ ಬೆಳಗ್ಗಿನಿಂದ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ಬೋರ್‌ವೆಲ್ ಒಳಗಿದ್ದ ರೋಹಿತ್ ಅವರಿಗೆ ಎರಡು ಬಾರಿ ಆಕ್ಸಿಜನ್, ಒಆರ್‌ಎಸ್ ದ್ರವಾಹಾರ ಒದಗಿಸಲಾಗಿತ್ತು. “ಮೇಲೆ ಬರುವ ಆತ್ಮವಿಶ್ವಾಸವಿತ್ತು’
ಆರು ತಾಸುಗಳ ಹೋರಾಟದಲ್ಲಿ ಗೆದ್ದು ಬಂದು, ಸಣ್ಣ – ಪುಟ್ಟ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಹಿತ್ ರವಿವಾರ ಸಂಜೆ “ಉದಯವಾಣಿ’ ಜತೆ ಮಾತನಾಡಿದರು. ನಾನು 15 ವರ್ಷಗಳಿಂದ ಈ ಹ್ಯಾಂಡ್ ಬೋರ್‌ವೆಲ್ ತೆರೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ. ಆದರೆ ಈವರೆಗೆ ಹೀಗೆ ಆಗಿರಲಿಲ್ಲ. ಮಣ್ಣು ಸ್ವಲ್ಪ ಮೆದು ಇದ್ದುದರಿಂದ ಒಮ್ಮೆಲೆ ಕುಸಿಯಿತು. ಆಗ ಪಾರಾಗಲು ಪ್ರಯತ್ನಪಟ್ಟರೂ ನನ್ನ ಎರಡೂ ಕಾಲುಗಳು ಮಣ್ಣಿನಲ್ಲಿ ಸಿಲುಕಿ ಕಷ್ಟವಾಯಿತು. ಆದರೆ ಬಿದ್ದಾಗ ಭಯ ಆಗಿರಲಿಲ್ಲ. ಮೇಲೆ ಬರುವ ಆತ್ಮವಿಶ್ವಾಸವಿತ್ತು. ಮೇಲಿನಿಂದ ಉಸಿರಾಟಕ್ಕೆ ವ್ಯವಸ್ಥೆ ಮಾಡಿದ್ದರಿಂದ ತೊಂದರೆಯಾಗಲಿಲ್ಲ. ಗಾಯವೂ ಆಗಿಲ್ಲ. ಕಾಲಿಗೆ ಸ್ವಲ್ಪ ಗೀರಿದಂತಾಗಿದೆ ಅಷ್ಟೆ. ನನ್ನನ್ನು ಮೇಲೆತ್ತಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎನ್ನುವುದಾಗಿ ತನ್ನ ಅನುಭವವನ್ನು ತೆರೆದಿಟ್ಟರು. “ಏನಾಗಿಲ್ಲ ಏನಾಗಿಲ್ಲ’ ಎನ್ನುತ್ತ ಎದ್ದುಬಂದರು
ಕ್ರೇನ್ ಮೂಲಕ ರೋಹಿತ್ ಅವರನ್ನು ಮೇಲೆತ್ತಿದ ಕೊನೆಯ ಕ್ಷಣ. ಸುಮಾರು ಆರು ತಾಸು ಬೋರ್‌ವೆಲ್‌ನೊಳಗಿದ್ದ ಅವರನ್ನು ಎತ್ತಿ ರಕ್ಷಿಸಲು ಎಲ್ಲರೂ ಸನ್ನದ್ಧರಾಗಿದ್ದರು. ಅವರು ಬೆಲ್ಟ್ ಹಿಡಿದು ಮೇಲೆ ಬರುತ್ತಿದ್ದಂತೆ ಸ್ಥಳದಲ್ಲಿದ್ದವರು ಅವರನ್ನು ಎತ್ತಿಕೊಂಡು ಕರೆದೊಯ್ದರು. ದೀರ್ಘಕಾಲ ಬಾವಿಯೊಳಗಿದ್ದು ಮೈಕೈಗೆಲ್ಲ ಮಣ್ಣು ಮೆತ್ತಿಕೊಂಡರೂ ಸುರಕ್ಷಿತವಾಗಿದ್ದ ರೋಹಿತ್ ಸಂಕೋಚದ ನಗುಮುಖದಿಂದಲೇ “ಏನಾಗಿಲ್ಲ, ಏನಾಗಿಲ್ಲ’ ಎನ್ನುತ್ತ ತನ್ನನ್ನು ಹೊತ್ತವರ ಹೆಗಲ ಮೇಲೆ ಸಾಗಿದರು.