Advertisement

ಮರವಂತೆ: ಸಮುದ್ರದ ಅಲೆಯಿಂದ 10 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ

07:50 AM Aug 13, 2017 | |

ಉಡುಪಿ: ಪರಿಸರ ಸ್ನೇಹಿ ಇಂಧನಗಳನ್ನು ಉತ್ಪತ್ತಿ ಮಾಡುವಲ್ಲಿ ವಿಶೇಷ ಸಂಶೋಧನೆಗಳನ್ನು ಮಾಡಿರುವ ವಿಜ್ಞಾನಿ ವಿಜಯ ಕುಮಾರ್‌ ಹೆಗ್ಡೆ ಅವರ ಸುಸಿ ಗ್ಲೋಬಲ್‌ ಸಂಶೋಧನಾ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯ ಮರವಂತೆಯಲ್ಲಿ 10 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಘಟಕವನ್ನು ನಿರ್ಮಿಸಲು ಸಮಗ್ರ ಯೋಜನಾ ವರದಿಯು (ಡಿಪಿಆರ್‌) ಸಿದ್ಧಗೊಂಡಿದ್ದು, ರಾಜ್ಯ ಸರಕಾರಕ್ಕೆ ಅದರ ಪ್ರಸ್ತಾವನೆ ಸಲ್ಲಿಕೆಯಾಗಿದೆ.

Advertisement

ಬೆಂಗಳೂರಿನ ಎನರ್ಜಿ ಆ್ಯಂಡ್‌ ಡೆವಲಪ್‌ಮೆಂಟ್‌ ಸೆಂಟರ್‌ನ ಎಂಜಿನಿ ಯರ್‌ ಧೀರೇಂದ್ರ ಆಚಾರ್ಯ ಹಾಗೂ ಸುಸಿ ಗ್ಲೋಬಲ್‌ ರಿಸರ್ಚ್‌ನ ಚಯರ್‌ಮನ್‌ ವಿಜಯ ಕುಮಾರ್‌ ಹೆಗ್ಡೆ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮರವಂತೆಯಲ್ಲಿ ಸಮುದ್ರದ ಅಲೆಗಳ ಶಕ್ತಿ ಉತ್ತಮವಾಗಿದೆ. ಹಾಗಾಗಿ ಆ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಅಲೆಯ ಉಬ್ಬರವಿಳಿತದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಯನ್ನು ಕೆಮ್ಮಣ್ಣುವಿನಲ್ಲಿ ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿದೆ. ಮರವಂತೆ ಯಲ್ಲಿ 60 ಕೋ.ರೂ. ವೆಚ್ಚದಲ್ಲಿ ಪ್ರಾಥಮಿಕ ಹಂತದಲ್ಲಿ 10 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಮಾಡಿ ಮೆಸ್ಕಾಂ ಗ್ರಿಡ್‌ಗಳಿಗೆ ವಿದ್ಯುತ್‌ ಅನ್ನು ಸರಬರಾಜು ಮಾಡಲು ಸರಕಾರದೊಂದಿಗೆ ಒಪ್ಪಂದಮಾಡಿಕೊಳ್ಳಲಾಗುವುದು. ಪೈಲಟ್‌ ಯೋಜನೆಯಾಗಿ ಇದನ್ನು ಸರಕಾರ ಸ್ವೀಕರಿಸಲಿದೆ. ಸರಕಾರದ ಸಹಕಾರ ಉತ್ತಮ ರೀತಿಯಲ್ಲಿ ದೊರೆತಲ್ಲಿ ಮುಂದಕ್ಕೆ 500 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯ ಗುರಿಯನ್ನೂ ಹೊಂದಲಾಗಿದೆ ಎಂದರು.

ಪೂರ್ಣಪ್ರಜ್ಞ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಎ.ಪಿ. ಭಟ್‌, ಕೆನರಾ ಎಂಜಿನಿಯರಿಂಗ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಟಿ. ನಾರಾಯಣ ಶಾನುಭಾಗ್‌ ಅವರು ಉಪಸ್ಥಿತರಿದ್ದರು.

ವಿಶ್ವದೆಲ್ಲಡೆ ವ್ಯಾಪಿಸಲಿ: ಪೇಜಾವರ  ಕಿರಿಯ ಶ್ರೀ
ಟೈಡಲ್‌ ಪವರ್‌ ಯೋಜನೆಯನ್ನು ವೀಕ್ಷಿಸಿದ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಮಿತವ್ಯಯ ಇಂಧನ, ಪರಿಸರಸ್ನೇಹಿ ಯೋಜನೆ ಈಗಿನ ವಾತಾವರಣಕ್ಕೆ ಅತ್ಯಗತ್ಯವಾಗಿದೆ. ಪ್ರಪಂಚದಲ್ಲಿ ಅತೀ  ಹೆಚ್ಚು ಭಾಗ ಸಮುದ್ರವಿರುವುದರಿಂದ ಅಲೆಗಳ ಶಕ್ತಿಯಿಂದ ಇಂಧನ ಉತ್ಪಾದಿಸುವ ಯೋಜನೆಗಳಿಗೆ ಉತ್ತಮ ಭವಿಷ್ಯವಿದೆ. ಸರಕಾರ ಸಹಕಾರ ಕೊಡಬೇಕು ಎಂದರು.

1 ಮೆ.ವ್ಯಾ. ಉತ್ಪಾದನೆಗೆ 6 ಕೋ.ರೂ.
ಅಲೆಗಳ ಶಕ್ತಿಯಿಂದ ಉತ್ಪಾದಿಸುವ 1 ಮೆ.ವ್ಯಾ. ವಿದ್ಯುತ್‌ ಘಟಕಕ್ಕೆ 6 ಕೋ.ರೂ. ವೆಚ್ಚವಾಗುತ್ತದೆ. ಕಲ್ಲಿದ್ದಲು ಮತ್ತಿತರ ಮೂಲಗಳಿಂದ ಉತ್ಪಾದಿಸುವ 1 ಮೆ.ವ್ಯಾ. ವಿದ್ಯುತ್‌ಗೆ 25ರಿಂದ 30 ಕೋ.ರೂ. ವ್ಯಯವಾಗುತ್ತದೆ. ಸರಕಾರ ಕೈಜೋಡಿಸಿದರೆ ವಾರ್ಷಿಕ ಕೋಟ್ಯಾನುಗಟ್ಟಲೆ ಹಣ ಉಳಿಕೆ ಮಾಡಬಹುದು.                                      
ವಿಜಯ ಕುಮಾರ್‌ ಹೆಗ್ಡೆ

Advertisement

ಉಬ್ಬರವಿಳಿತದ ವಿದ್ಯುತ್‌ ಬೆಸ್ಟ್‌
ಕರಾವಳಿಯಲ್ಲಿ ಸೋಲಾರ್‌, ಪವನ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆಗೆ ಪೂರಕ ವಾತಾವರಣವಿಲ್ಲ. ಆದರೆ ಸಮುದ್ರದ ಅಲೆಯಿಂದ ವಿದ್ಯುತ್‌ ಉತ್ಪಾದನೆಗೆ ಒತ್ತು ಕೊಟ್ಟರೆ ಕರಾವಳಿಯ ಯಾವುದೇ ಮೂಲೆಗೆ ವಿದ್ಯುತ್‌ ಕೊಡಲು ಸಾಧ್ಯವಾಗುತ್ತದೆ. ಇಲ್ಲೇ ಉತ್ಪಾದನೆ ಮಾಡಿ ಗ್ರಿಡ್‌ಗಳಿಗೆ ನೇರವಾಗಿ ಕೊಡುವುದರಿಂದ ಸರಬರಾಜು ವೆಚ್ಚ ಉಳಿಯುತ್ತದೆ.
ಧೀರೇಂದ್ರ ಆಚಾರ್ಯ, ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next