ಮರವೂರು: ಇಲ್ಲಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವ ಸ್ಥಾನಕ್ಕೆ ಲೋಕ ಕಲ್ಯಾಣಾರ್ಥ, ಸಕಲ ಸಂಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ 6ನೇ ವರ್ಷದ ‘ಅಮ್ಮನೆಡೆಗೆ ನಮ್ಮ ನಡೆ’ ಪಾದಯಾತ್ರೆಯ ಅಭಿಯಾನಕ್ಕೆ ಸುಮಾರು 55 ಸಾವಿರ ಭಕ್ತರು ಮರವೂರಿನಿಂದ ಕಟೀಲಿಗೆ ಆಗಮಿಸಿ ದೇವರ ದರ್ಶನ ಪಡೆದರು. ಈ ಬಾರಿ ಅಭೂತ ಪೂರ್ವ ಪಾದಯಾತ್ರೆಗೆ ಕಾರಣವಾಯಿತು.
ಮುಂಜಾನೆಯೇ ಭಕ್ತರು ಮರವೂರು ದೇಗುಲಕ್ಕೆ ಆಗಮಿಸಿದ್ದರು. ದೇವರ ದರ್ಶನ ಪಡೆದು ಕಟೀಲು ಕ್ಷೇತ್ರಕ್ಕೆ ಪಾದ ಯಾತ್ರೆ ಆರಂಭಿಸಿದ್ದರು. ಮರವೂರಿನಿಂದ ಕಟೀಲಿ ನವರೆಗೆ ರಸ್ತೆಯಲ್ಲಿ ಭಕ್ತರ ಸಮೂಹವೇ ಕಾಣಸಿಕ್ಕಿತ್ತು. ಮರವೂರು ದೇಗುಲದ ವಠಾರದಲ್ಲಿ ಭಕ್ತರಿಗಾಗಿ ಉಪಾಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಲೋಕ ಕಲ್ಯಾಣಾರ್ಥ, ಸಕಲ ಕಷ್ಟ ನಿವಾರಣೆಗಾಗಿ ಹಮ್ಮಿಕೊಂಡ ಈ ಪಾದಯಾತ್ರೆಗೆ ಸೂಟರ್‌ಪೇಟೆ ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧ ಪೀಠ ಧರ್ಮದರ್ಶಿ ಪ್ರವೀಣ್‌ರಾಜ್ ಮಚ್ಛೇಂದ್ರ ನಾಥ ಬಾಬಾ, ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಕೆ. ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಮೊಕ್ತೇಸರ ಸುಧೀರ್ ಶೆಟ್ಟಿ, ಕಲ್ಲಡ್ಕ ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಕದ್ರಿ ಕ್ಷೇತ್ರದ ಮೊಕ್ತೇಸರ ಎ.ಜೆ. ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಜಗದೀಶ ಶೇಣವ, ಶರಣ್ ಪಂಪ್‌ವೆಲ್, ರವೀಂದ್ರ ಅರಸ, ಮೋನಪ್ಪ ಭಂಡಾರಿ, ತಾರಾನಾಥ ಶೆಟ್ಟಿ, ಜೀತೇಂದ್ರ ಕೊಟ್ಟಾರಿ, ಬಿಪಿನ್ ಕುಲಾಲ್, ಆಶಾ ಜ್ಯೋತಿ ರೈ, ಉದಯ್ ಶೆಟ್ಟಿ ಪಡುಬಿದಿರೆ, ಸತೀಶ್ಚಂದ್ರ ಶೆಟ್ಟಿ, ಶಶಿಧರ್ ಶೆಟ್ಟಿ, ಶೆಡ್ಯೆ ಮಂಜುನಾಥ ಭಂಡಾರಿ, ಬ್ರಿಜೇಶ್ ಚೌಟ, ಅಮ್ಮನೆಡೆಗೆ ನಮ್ಮ ನಡೆ ಅಧ್ಯಕ್ಷ ಸಂದೀಪ್ ಶೆಟ್ಟಿ ಮರ ವೂರು, ಸಮಿತಿಯ ನಿವೇದಿತಾ ಎನ್.ಶೆಟ್ಟಿ ಬೆಳ್ಳಿಪ್ಪಾಡಿ, ಕಿಶೋರ್ ರೈ ಪುತ್ತೂರು, ಸುಕೇಶ್ ಶೆಟ್ಟಿ ಮುಂಡಾರುಗುತ್ತು ಮೊದಲಾದವರು ಉಪಸ್ಥಿತರಿದ್ದು ಚಾಲನೆ ನೀಡಿದರು.
ಮುಂಜಾನೆ 2ಗಂಟೆಗೆ ಮರವೂರು ದೇಗುಲಕ್ಕೆ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಉಪಾಹಾರ ಸ್ವೀಕರಿಸಿ, ಕಟೀಲು ದೇಗುಲಕ್ಕೆ ಪಾದಯಾತ್ರೆ ನಡೆಸಿದರು. ಬೆಳಗ್ಗೆ 7.30ಕ್ಕೆ ಮರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರ ಸಮಾವೇಶ, ಸಾಮೂಹಿಕ ಪ್ರಾರ್ಥ ನೆಯ ಬಳಿಕ ಪಾದಯಾತ್ರೆಗೆ ಚಾಲನೆ ನೀಡಲಾಗಿತ್ತು.
ಮರವೂರಿನಲ್ಲಿ ಉಪಾಹಾರ ಸಜ್ಜಿಗೆ, ಅವಲಕ್ಕಿ ಚಹಾ ವ್ಯವಸ್ಥೆ. ದಾರಿಯೂದ್ದಕ್ಕೂ ಬೆಲ್ಲ,ನೀರು, ಮಜ್ಜಿಗೆ, ತಂಪು ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಬಾರಿ ವ್ಯವಸ್ಥೆ ಅಚ್ಚುಕಟ್ಟು ಮಾಡಲಾಗಿತ್ತು. ಪೆರ್ಮುದೆ ಚರ್ಚ್ ವತಿಯಿಂದ ಭಕ್ತರಿಗೆ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಭಜನ ತಂಡ, ವಿವಿಧ ಸಂಘ, ಸಂಸ್ಥೆಗಳು, ವಯಸ್ಕರು, ಯುವಕ ಯುವತಿಯರು, ಸಮವಸ್ತ್ರ ಧಾರಿಗಳು, ಕೆಂಜಾರು, ಕರಂ ಬಾರು, ಬಜಪೆ, ಪೆರ್ಮುದೆ, ಎಕ್ಕಾರು ಮಾರ್ಗವಾಗಿ ಕಟೀಲಿಗೆ ತಲುಪಿತು. ಕ್ರಮಬದ್ಧ ನಡೆಗೆಯಿಂದಾಗಿ ಯಾವುದೇ ವಾಹನಗಳಿಗೆ ಸಂಚಾರದಲ್ಲಿ ಹೆಚ್ಚು ತಡೆವುಂಟಾಗಲಿಲ್ಲ. ಪೊಲೀಸರು, ಟ್ರಾಫಿಕ್ ಪೊಲೀಸ್‌ರು, ಆ್ಯಂಬುಲೆನ್ಸ್ ಸೇವೆ, ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಾದ್ಯಘೋಷ
ಭಜನೆ, ಚೆಂಡೆ, ವಾದ್ಯದೊಂದಿಗೆ ಪಾದಯಾತ್ರೆಯೂ ಆರಂಭಗೊಂಡಿತ್ತು. ಬ್ರಹ್ಮ, ವಿಷ್ಣು, ಮಹೇಶ್ವರ ಯಕ್ಷಗಾನ ವೇಷಧಾರಿಗಳ ವಾಹನ ಅದರ ಹಿಂದೆ ಕಟೀಲು ಶ್ರೀದುರ್ಗಾಪರಮೇಶ್ವರಿಯ ಚಿತ್ರಪಟ ಹೊತ್ತ ವಾಹನದೊಂದಿಗೆ ಸಾಗುವ ಭಕ್ತರ ಕಾಲ್ನಡಿಗೆ ಅಭಿಯಾನ ಕಟೀಲು ಕ್ಷೇತ್ರಕ್ಕೆ ತೆರಳಿತ್ತು. ಸತತ 6ನೇ ವರ್ಷದಲ್ಲಿ ಪಾಲ್ಗೊಂಡ ಭಕ್ತರೂ ಇದ್ದರು.