ಬೆಂಗಳೂರು: ಸಾರ್ವಜನಿಕ ವಲಯದಲ್ಲಿ ದಿನದ 24 ಗಂಟೆಗಳ ಕಾಲವೂ ಕೆಲಸ ನಿರ್ವಹಿಸುವ ಪೊಲೀಸರಿಗೆ ದೈಹಿಕ ಸದೃಢತೆ ಅತ್ಯಗತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ಜುಲೈ 23ರಂದು ನಡೆಯಲಿರುವ “ನಮ್ಮ ಪೊಲೀಸ್ ಮ್ಯಾರಥಾನ್’ ಅಂಗವಾಗಿ ಕಬ್ಬನ್‌ಪಾರ್ಕ್‌ನಲ್ಲಿ ಭಾನುವಾರ ಮುಂಜಾನೆ ಹಮ್ಮಿಕೊಂಡಿದ್ದ “ಆರೋಹಣ್-ತರಬೇತಿ ಓಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪೊಲೀಸ್ ಸಿಬ್ಬಂದಿ 24/7 ಕೆಲಸ ನಿರ್ವಹಿಸಬೇಕು. ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡು ಆರೋಗ್ಯವಾಗಿರಲು ಇಂತಹ ಓಟಗಳು ಇರಬೇಕು.
ಈ ಹಿನ್ನೆಲೆಯಲ್ಲಿ ಜುಲೈ 23ರಂದು “ನಮ್ಮ ಪೊಲೀಸ್ ಮ್ಯಾರಥಾನ್’ ನಡೆಯಲಿದೆ. ಇದರ ಅಂಗವಾಗಿ ಪ್ರತಿ ವಾರ ಒಂದೊಂದು ವಿಭಾಗದ ಪೊಲೀಸ್ ಸಿಬ್ಬಂದಿಯೊಂದಿಗೆ ತರಬೇತಿ ಓಟ ಆಯೋಜಿಸಲಾಗುತ್ತಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಐದು ಕಿ.ಮೀ ಓಟ: ಭಾನುವಾರ ನಡೆದ ಮೊದಲ ಪೊಲೀಸ್ ತರಬೇತಿ ಓಟದಲ್ಲಿ ಕೆಎಸ್‌ಆರ್‌ಪಿ, ಸಿಎಆರ್, ಬೆಂಗಳೂರು ನಗರ ಪೊಲೀಸ್ ಮತ್ತು ಬೆಂಗಳೂರು ಸಂಚಾರ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸುಮಾರು 630ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಬಾಲಭವನ ಗೇಟ್‌ನಿಂದ ಆರಂಭವಾದ “ಆರೋಹಣ್-ಪೊಲೀಸ್ ತರಬೇತಿ ಓಟ’ ವಿಧಾನಸೌಧ, ಕೆ.ಆರ್ ವೃತ್ತ, ಕೇಂದ್ರ ಗ್ರಂಥಾಲಯ, ವಿಠಲ ಮಲ್ಯ ರಸ್ತೆ ಸಮೀಪದಲ್ಲಿ ಸಾಗಿದ್ದು, ಬಾಲಭವನ ದ್ವಾರದಲ್ಲಿ ಅಂತ್ಯಗೊಂಡಿತು. ಸುಮಾರು 5 ಕಿ.ಮೀ.ಓಟದಲ್ಲಿ ಭಾಗವಹಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ, ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್ ಅವರು ನೇತೃತ್ವ ವಹಿಸಿದ್ದರು.