Advertisement

ಮಹಿಳಾ ದಿನಾಚರಣೆಗಾಗಿ ಮ್ಯಾರಥಾನ್‌

03:23 PM Mar 04, 2018 | |

ವಿಜಯಪುರ: ಮಹಿಳೆಯ ಜ್ಞಾನ, ಸೃಜನಶೀಲತೆ ಮತ್ತು ಅವಳ ಕೌಶಲ್ಯವನ್ನು ಇಡಿ ಸಮಾಜದ ಮುಂದೆ ಜಾಹೀರು ಪಡಿಸುವ ಹಾಗೂ ಅದಕ್ಕೊಂದು ಸಾಮಾಜಿಕ ಮಾನ್ಯತೆ ಕೊಡುವ ಉದ್ದೇಶದಿಂದ ಮಹಿಳಾ ಸಬಲೀಕರಣ ಮ್ಯಾರಥಾನ್‌ ಮಾಡಿದ್ದೇವೆ ಎಂದು ಮಹಿಳಾ ವಿವಿ ಕುಲಪತಿ ಪ್ರೊ| ಸಬಿಹಾ ತಿಳಿಸಿದರು.

Advertisement

ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ
ಅವರು ಮಾತನಾಡಿದರು.

ಮಹಿಳಾ ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಮಹಿಳಾ ಸಾಂಸ್ಕೃತಿಕ
ಹಬ್ಬದ ರಾಯಭಾರಿಗಳಾಗಿ ಓಟ ಕೈಗೊಂಡಿರುವುದು ಹರ್ಷ ತಂದಿದೆ. ಆಧುನಿಕ ಸಮೂಹ ಮಾಧ್ಯಮಗಳಿಂದ ಹಾಗೂ ಇತರೆ ಸಾಧನಗಳಿಂದ ಎಲ್ಲರಿಗೂ ಮಾಹಿತಿ ತಲುಪಿಸುವಂತಹ ಕಾರ್ಯವನ್ನು ವಿದ್ಯಾರ್ಥಿಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಉತ್ಸಾಹ ಸದಾ ನಿಮ್ಮ ಜೀವನದಲ್ಲಿ ಇರಲಿ ಎಂದರು.

ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ನಿರ್ವಾಹಕ ನಿರ್ದೇಶಕ ವೀರೇಶ ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯ. ದುಶ್ಚಟಗಳಿಗೆ ದಾಸರಾಗದೇ ಆರೋಗ್ಯಕರ ಜೀವನ ರೂಪಿಸಿಕೊಂಡರೆ ಸಮಾಜದಲ್ಲಿ ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯ.

ಆದರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಜಂಕ್‌ ಫುಡ್‌ಗಳಿಗೆ ಮಾರು ಹೋಗುತ್ತಿದ್ದಾರೆ ಎಂದು ವಿಷಾದಿಸಿದರು. ಮಹಿಳಾ ಸಾಂಸ್ಕೃತಿಕ ಹಬ್ಬದ ಪ್ರಧಾನ ಸಂಯೋಜಕಿ ಆರ್‌. ಸುನಂದಮ್ಮ ಮಾತನಾಡಿ, ಇಂದು ಸಮಾಜದಲ್ಲಿ ಮಹಿಳೆ ಎಲ್ಲ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾಳೆ. ಆದರೂ ಅವಳ ಹಿನ್ನಡೆ ಗಮನಿಸುವವರು ಕಡಿಮೆ ಮಟ್ಟದಲ್ಲಿ ಇರುವುದು ವಿಷಾದನೀಯ. ಇಂತಹ
ಸವಾಲನ್ನು ಎದುರಿಸಿಕೊಂಡು ಮುಂದೆ ಹೋಗಬೇಕಾದರೆ ಮಹಿಳೆ ಶ್ರಮ ಪಡಬೇಕಾಗುತ್ತದೆ. ಎಲ್ಲವನ್ನೂ ಮೀರಿ ಬೆಳೆಯಲು ಇಂತಹ ಕಾರ್ಯಕ್ರಮಗಳು ನಮ್ಮೊಳಗೆ ಒಂದು ಉತ್ಸಾಹ, ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

Advertisement

ನಗರದ ಬಿಎಲ್‌ಡಿಇ ಎಂಜಿನಿಯರಿಂಗ್‌ ಕಾಲೇಜು, ಸೈನಿಕ ಶಾಲೆ, ಗೋಲಗುಮ್ಮಟ ಮತ್ತು ಕೋರ್ಟ್‌ ಸರ್ಕಲ್‌ ಹೀಗೆ
ನಾಲ್ಕು ಕಡೆಗಳಿಂದ ಮ್ಯಾರಥಾನ್‌ ಹೊರಟು, ಮಹಾತ್ಮ ಗಾಂಧಿಧೀಜಿ ವೃತ್ತದ ಬಳಿ ಸಮಾರೋಪಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next