Advertisement
ಮರಾಠಿ ಭಾಷೆಯ ಮೊದಲ ಯಕ್ಷಕವಿ ಮುಂಬಯಿಯ ಎಂ.ಟಿ.ಪೂಜಾರಿ. ಮೂಲತಃ ಉಡುಪಿ ಜಿಲ್ಲೆಯ ಬೈಲೂರಿನವರಾದ ಎಂ.ಟಿ.ಪೂಜಾರಿಯವರು ಬದುಕು ಕಟ್ಟಿಕೊಳ್ಳಲು ಮುಂಬಯಿಗೆ ತೆರಳಿದರು. ಮುಂಬಯಿಗೆ ಪ್ರಯಾಣಿಸುವಾಗ ಕಡಲತೀರದ ಯಕ್ಷಗಾನದ ಗಾಳಿಯನ್ನೇ ಉಸಿರಾಡುತ್ತಾ ಹೋದ ಪೂಜಾರಿಯವರು ಅಲ್ಲಿಯೂ ಯಕ್ಷಮಾತೆಯ ಪೂಜೆ ಕೈಗೊಂಡರು. ಅದರ ಪರಿಣಾಮ ತುಳು-ಕನ್ನಡ ಭಾಷೆಗಳಲ್ಲಿ ಪ್ರಸಂಗ ರಚನೆ. ಎಂ.ಟಿ.ಪೂಜಾರಿ ಅವರು ಬರೆದ ಇಪ್ಪತ್ತನಾಲ್ಕು ಪ್ರಸಂಗಗಳಲ್ಲಿ ಸುಮಾರು ಹನ್ನೆರಡು ಪ್ರಸಂಗಗಳು ಬೆಳಕು ಕಂಡಿವೆ. ಅದರಲ್ಲೊಂದು “ಪಂಡರ್ ಪುರ್ ಮಹಿಮ್. ಶ್ರೀ ಕ್ಷೇತ್ರ ಪಂಡರಾಪುರದ ಸ್ಥಳಪುರಾಣವನ್ನು “ಶ್ರೀ ಪಂಡರಪುರ ಮಹಾತ್ಮೆ’ ಎಂಬ ಪ್ರಸಂಗವಾಗಿಸಿ ಕನ್ನಡದಲ್ಲಿ ಬರೆದ ಪೂಜಾರಿಯವರು ಅದನ್ನು ಮರಾಠಿಗೆ ಭಾಷಾಂತರಿಸಿದರು. ಯಕ್ಷಗಾನದ ಅಂಶಗಣ, ಮಾತ್ರಾಗಣ ಛಂದಸ್ಸುಗಳಲ್ಲಿ ಮರಾಠೀ ಹಾಡುಗಳನ್ನು ಹೃದ್ಯವಾಗಿ ಹೊಸೆದಿದ್ದಾರೆ. ಮುಂಬಯಿಯ ಯಕ್ಷಗಾನ ಮಂಡಳಿಗಳಿಂದ ಈ ಪ್ರಸಂಗದ 10-18 ಪ್ರದರ್ಶನಗಳು ಈಗಾಗಲೇ ಬೆಳಕು ಕಂಡಿವೆ. ತುಳು-ಮರಾಠಿ ಎರಡೂ ಪಠ್ಯಗಳನ್ನು 2016ರಲ್ಲಿ ಪುಸ್ತಕ ರೂಪದಲ್ಲಿ ಹೊರತಂದ ಎಂ.ಟಿ.ಪೂಜಾರಿಯವರು ತನ್ನ ಪದ್ಯಗಳಿಗೆ ಅರ್ಥ ವಿವರಣೆಯನ್ನೂ ಜೊತೆಗೆ ನೀಡಿದ್ದಾರೆ. ಸುಭಗ ಸುಂದರ ಶೈಲಿಯ ಹಾಡು ಮತ್ತು ಅರ್ಥ ವಿವರಣೆ ಹೃದಯಕ್ಕೆ ಹತ್ತಿರವಾಗಿದೆ.
Related Articles
Advertisement