ಅಫಜಲಪುರ: ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಮರಾಠಿ ಸಮುದಾಯದವರ ಬಹು ದಿನಗಳ ಬೇಡಿಕೆಯಾದ 3ಬಿಯಿಂದ 2ಎ ಗೆ ಸೇರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುವುದಾಗಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು. ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ತಾಲೂಕು ಘಟಕ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತಿ ಹಾಗೂ ಮರಾಠ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮರಾಠ ಸಮುದಾಯ ಕರ್ನಾಟಕದಲ್ಲಿ ಈಗಜಾಗೃತವಾಗಿದೆ. ನಿಮ್ಮ ಬೇಡಿಕೆ ಈಡೇರಿಸಲು ಮಾಜಿ ಶಾಸಕ ಎಂ. ವೈ. ಪಾಟೀಲ, ಶಾಸಕ ದತ್ತಾತ್ರೇಯ ಪಾಟೀಲ, ಗೋವಿಂದ ಭಟ್ ಸೇರಿದಂತೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಶಿವಾಜಿ ಮಹಾರಾಜರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಅವರು ದೇವ ಮಾನವರಾಗಿದ್ದರು. ಮರಾಠಿಗರಾಗಲಿ ಯಾರೇ ಇರಲಿ ಕರ್ನಾಟಕ ಮತ್ತು ಕನ್ನಡ ನಾಡು, ನುಡಿ ಬಗ್ಗೆ ಅಭಿಮಾನವಿರಬೇಕು ಎಂದು ಹೇಳಿದರು.
ಮಾಜಿ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಮರಾಠ ಸಮಾಜದ ಮೊದಲ ಬೃಹತ್ ಸಮಾವೇಶ ಇದಾಗಿದೆ. ಸಮಾವೇಶದ ಮೂಲಕ ನಿಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಿರಿ. ಅಲ್ಪಸಂಖ್ಯಾತರಾದ ನೀವು ಸೌಲಭ್ಯಗಳಿಂದ ವಂಚಿತರಾಗಿದ್ದಿರಿ. ಸಂಘಟನೆ ಇನ್ನಷ್ಟು ಗಟ್ಟಿಯಾಗಿ ಬೆಳೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿಮ್ಮ ಕೂಗು ಕೇಳಿಸಿದರೆ ಬೇಡಿಕೆಗಳು ಈಡೇರಲಿವೆ ಎಂದು ಹೇಳಿದರು.
ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಹಿಂದೂ ಸಮಾಜ ಇವತ್ತು ಉಳಿದಿದೆ ಎಂದರೆ ಅದಕ್ಕೆ ಶಿವಾಜಿ ಮಹಾರಾಜರೇ ಕಾರಣರಾಗಿದ್ದಾರೆ. ಅವರು ನಮಗೆಲ್ಲ ಆದರ್ಶವಾಗಿದ್ದಾರೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮಳೇಂದ್ರ ಮಠದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸಗಳನ್ನು ಇತಿಹಾಸ ಹೇಳುತ್ತದೆ.
ಅವರು ಎಲ್ಲ ಧರ್ಮ, ಜಾತಿ,ಜನಾಂಗದವರನ್ನು ಒಟ್ಟೂಗೂಡಿಸಿಕೊಂಡು ರಾಜ್ಯಭಾರ ಮಾಡಿದ್ದಾರೆ. ಅಂಥವರ ಜಯಂತಿ ಆಚರಣೆ ಮಾತ್ರ ಮಾಡದೆ ಪ್ರತಿದಿನ ಅವರ ಸ್ಮರಣೆ ಮಾಡುವಂತಾಗಲಿ ಎಂದು ಹೇಳಿದರು. ಕ.ರಾ.ಕ್ಷ.ಮ. ಪರಿಷತ್ ರಾಜ್ಯ ಉಪಾದ್ಯಕ್ಷ ಸೂರ್ಯಕಾಂತ ಕದಂ, ಮರಾಠ ಸಮಾಜದ ರಾಮಚಂದ್ರ ಜಗದಾಳೆ, ಬೀದರ ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ, ಸಮಾಜ ಸೇವಕ ಜೆಡಿಎಸ್ ಮುಖಂಡ ಗೋವಿಂದ ಭಟ್ ಹಾವನೂರ ಮಾತನಾಡಿದರು.
ಸಮಾಜದ ತಾಲೂಕು ಅಧ್ಯಕ್ಷ ದಿಲೀಪ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ತಾಪಂ ಅಧ್ಯಕ್ಷೆ ರುಕ್ಮಿàಣಿ ಬಾಬು ಜಮಾದಾರ, ಮುಖಂಡರಾದ ಮಕೂºಲ್ ಪಟೇಲ್, ಸೂರ್ಯಕಾಂತ ನಾಕೇದಾರ, ಮತೀನ್ ಪಟೇಲ್, ನಾಗೇಶ ಕೊಳ್ಳಿ, ರಾಜು ಉಕ್ಕಲಿ, ಪಾಂಡುರಂಗ ಬಂಡಗಾರ, ಅಣ್ಣಾರಾಯ ಪಾಟೀಲ, ಸಾಯಬಣ್ಣ ಪೂಜಾರಿ, ಪಪ್ಪು ಪಟೇಲ್, ಶ್ರೀಶೈಲ ಬಳೂರ್ಗಿ, ಶಂಕು ಮ್ಯಾಕೇರಿ, ರಾಜು ಚವ್ಹಾಣ, ವಿಜಯಕುಮಾರ ಪಾಟೀಲ, ಸಿದ್ದಲಿಂಗಪ್ಪ ಸೂರ್ಯವಂಶಿ, ತಹಶೀಲ್ದಾರ ಶಶಿಕಲಾ ಪಾದಗಟ್ಟಿ ಸೇರಿದಂತೆ ಮರಾಠ ಮುದಾಯದವರು ಇದ್ದರು.