ಬೆಳಗಾವಿ: ಬೆಳಗಾವಿಯಲ್ಲಿ ಬದುಕುತ್ತಿರುವ ಮರಾಠಿ ಭಾಷಿಕರು ಪಾಕಿಸ್ತಾನದವರಲ್ಲ, ಲಷ್ಕರ್-ಎ-ತೋಯ್ಬಾ ಸಂಘಟನೆಗೆ ಸೇರಿದವರಲ್ಲ. ನಾವು ನಿಮ್ಮಂತೆಯೇ ರಾಷ್ಟ್ರೀಯತೆ ಹಾಗೂ ಹಿಂದೂತ್ವವಾದಿ ಆಗಿದ್ದೇವೆ ಎಂದು ಮಹಾರಾಷ್ಟ್ರದ ಶಿವಸೇನೆ ವಕ್ತಾರ ಸಂಜಯ ರಾವುತ್ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರಾಠಿಯ ಈ ಹೋರಾಟ ಎಂದರೆ ಹಿಂದೂತ್ವದ ಹೋರಾಟ. ಛತ್ರಪತಿ ಶಿವಾಜಿ ಮಹಾರಾಜರ ಮೇಲಿನ ಅನ್ಯಾಯದ ವಿರುದ್ಧದ ಹೋರಾಟವಾಗಿದೆ. ಇದು ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟ. ನಮ್ಮದು ನಿಮ್ಮೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಜಗಳವಿಲ್ಲ. ನಾವು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇವೆ ಎಂದರು.
ಮುಖ್ಯಮಂತ್ರಿ ಉದ್ಧವ ಠಾಕ್ರೆ ನಿರ್ದೇಶನದಂತೆ ಬೆಳಗಾವಿಯ ಲೋಕಸಭೆ ಉಪಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಶುಭಂ ಶೇಳಕೆಯನ್ನು ಬೆಂಬಲಿಸಲು ಕರ್ತವ್ಯ ಭಾವನೆಯಿಂದ ಆಗಮಿಸಿದ್ದೇನೆ. ಶಿವಸೇನೆಯ ಸಂಪೂರ್ಣ ಬೆಂಬಲ ಶೇಳಕೆಗೆ ಇದೆ. ಮಹಾರಾಷ್ಟ್ರದಲ್ಲಿರುವ ಪ್ರತಿಯೊಂದು ಪಕ್ಷದ ಪ್ರಮುಖರು, ರಾಜಕೀಯ ಮುಖಂಡರು ಶುಭಂ ಶೇಳಕೆಯನ್ನು ಬೆಂಬಲಿಸಬೇಕು. ಸಾಧ್ಯವಾದರೆ ಅಲ್ಲಿಂದಲೇ ಬೆಂಬಲ ಸೂಚಿಸಿದರೂ ನಡೆಯುತ್ತದೆ. ಎಂಇಎಸ್-ಶಿವಸೇನೆ ಕೂಡಿಕೊಂಡು ಶುಭಂ ಶೇಳಕೆಯನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಎಂದರು.
ಲೋಕಸಭೆ ಉಪಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಎಂಇಎಸ್ ಅಭ್ಯರ್ಥಿಗೆ ಕೇವಲ 50 ಸಾವಿರ ಮತ ಸಿಗಬಹುದು ಎಂದುಕೊಂಡಿದ್ದೇವು. ಆದರೆ ಶುಭಂ ಶೇಳಕೆಗೆ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೆಲುವಿನ ಅಂಚಿಗೆ ನಮ್ಮ ಅಭ್ಯರ್ಥಿ ಬಂದಿದ್ದಾರೆ. ವಿರೋಧಿ ಗಳು ತಮ್ಮ ಅಭ್ಯರ್ಥಿ ಗೆಲ್ಲಿಸಲು ಮುಖ್ಯಮಂತ್ರಿ, ಇಡೀ ಮಂತ್ರಿ ಮಂಡಲವೇ ಪ್ರಚಾರದಲ್ಲಿ ತೊಡಗಿದೆ. ಮುಂದೆ ಪ್ರಧಾನಿ ಅವರನ್ನು ಕರೆಸಿದರೂ ಅಚ್ಚರಿ ಇಲ್ಲ. ಶುಭಂ ಶೇಳಕೆಯ ಬೆಂಬಲ ನೋಡಿ ವಿರೋಧಿ ಗಳಲ್ಲಿ ನಡುಕ ಹುಟ್ಟಿದೆ ಎಂದರು.