Advertisement

ಮಾರಣಕಟ್ಟೆ ಮಕರ ಸಂಕ್ರಾಂತಿ ಉತ್ಸವ: “ಸೇವಂತಿಗೆ’ ಸೇವೆಗೆ ದಾಖಲೆ ಸಂಖ್ಯೆಯ ಭಕ್ತರು

03:38 PM Jan 16, 2024 | Team Udayavani |

ವಂಡ್ಸೆ: ಸೇವಂತಿಗೆ ಹೂಗಳನ್ನು ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ದೇವರಿಗೆ ಹರಕೆಯ ರೂಪದಲ್ಲಿ ಸಮರ್ಪಿಸುವ ವಾಡಿಕೆ ಧಾರ್ಮಿಕ ಬದ್ಧತೆ ತಲಾತಲಾಂತರಗಳಿಂದಲೂ ನಡೆಯುತ್ತಾ ಬಂದಿದ್ದು, ಇಂದು ಕೂಡ ಪ್ರಚಲಿತವಾಗಿರುವುದು ಹಾಗೂ ಕ್ರಮಬದ್ಧವಾಗಿ ಚಾಚೂತಪ್ಪದೇ ಪಾಲಿಸುವ ಭಕ್ತರ ಸೇವಾ ಕೈಂಕರ್ಯ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ.15ರಂದು ನಡೆದಿದೆ.

Advertisement

ಕಂಹಾಸುರ ಎಂಬ ರಾಕ್ಷಸನನ್ನು ಜಗಜ್ಜನನಿ ಮೂಕಾಂಬಿಕೆ ವಧಿಸಿದ ಸ್ಥಳ ಮಾರಣಕಟ್ಟೆ ಎಂಬುವುದು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವುದರಿಂದ ಕ್ಷೇತ್ರ ದರ್ಶನಕ್ಕೆ ಉಡುಪಿ ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ 40 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿರುವುದು ಇಲ್ಲಿನ ಧಾರ್ಮಿಕ ಶ್ರದ್ಧಾ ಭಕ್ತಿಯ ಪ್ರತೀಕವಾಗಿದೆ.

ಶಿಸ್ತುಬದ್ಧವಾಗಿ ಯಾವುದೇ ಲೋಪ ದೋಷವಾಗದಂತೆ ತಲೆಯ ಮೇಲೆ ಸೇವಂತಿಗೆ ಬುಟ್ಟಿ ಹೊತ್ತು ಸಾಗುತ್ತಿದ್ದ ಭಕ್ತರ ಸಾಲು ಉದ್ದಾನುದ್ದಕ್ಕೂ ಸುಮಾರು 2 ಕಿ.ಮೀ. ದೂರ ವ್ಯಾಪ್ತಿಯವರೆಗೆ ಸಾಗಿತ್ತು. ಸದ್ದುಗದ್ದಲವಿಲ್ಲದೇ ಭಯ ಭಕ್ತಿಯಿಂದ ದೇವರ ಸೇವೆಗೆ ವಿವಿಧ ಜಿಲ್ಲೆಗಳಿಂದ ಮುಖ್ಯವಾಗಿ ಉಡುಪಿ ತಾಲೂಕಿನಿಂದ ಆಗಮಿಸಿದ ಭಕ್ತರು ಸೇವೆಯ ಮಹತ್ವವನ್ನು ಸಾರಿದರು.

ಮಹಾಮಂಗಳಾರತಿ, ಕೆಂಡಸೇವೆ
ಅಪಾರ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ಹಾಗೂ ರಾತ್ರಿ ಕೆಂಡಸೇವೆ ನಡೆಯಿತು. ದೇಗುಲದ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ ಅವರ ನೇತೃತ್ವದಲ್ಲಿ ಭಕ್ತರಿಗೆ ವಿಶೇಷ  ವ್ಯವಸ್ಥೆ ಕಲ್ಪಿಸಲಾಗಿತ್ತು.

ಜ. 16, 17: ಮಂಡಲ ಸೇವೆ 
ದೇಗುಲದಲ್ಲಿ ಜ.16 ಹಾಗೂ 17 ರಂದು ಮಂಡಲ ಸೇವೆ ನಡೆಯಲಿದ್ದು, 17ರಂದು ರಾತ್ರಿ ಕಡಬು ನೈವೇದ್ಯ, ಮಹಾಮಂಗಳಾರತಿ, ಮಾರಣಕಟ್ಟೆ ದೇಗುಲದ ಯಕ್ಷಗಾನ ತಂಡದಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ.

Advertisement

ಭಕ್ತರ ಆರಾಧ್ಯ ಕ್ಷೇತ್ರ
ಧನು ಸಂಕ್ರಮಣದಂದು ಕ್ಷೇತ್ರದ ಚಿಕ್ಕು ದೇವರ ಪಾತ್ರಿ ಇಲ್ಲಿನ ಚಕ್ರಾ ಉಪನದಿಯನ್ನು ದಾಟಿ ತುಳುನಾಡಿನ ಭಕ್ತರ ಮನೆಯಲ್ಲಿ ದರ್ಶನ ಮಾಡುತ್ತಾ ಕೊನೆಗೆ ಮಕರ ಸಂಕ್ರಮಣದಂದು ಕ್ಷೇತ್ರಕ್ಕೆ ಆಗಮಿಸುವ ಪದ್ಧತಿ ಇಂದೂ ಕೂಡ ಮುಂದುವರಿದಿದೆ. ಆನುವಂಶೀಯ ಮೊಕ್ತೇಸರರ ಉಪಸ್ಥಿತಿಯಲ್ಲಿ ವಾಕ್‌ ತೀರ್ಮಾನದಲ್ಲಿ ಭಾಗವಹಿಸಿ ಹರಕೆಯನ್ನು ಸಲ್ಲಿಸಿ ದೇವರ ಉತ್ಸವದಲ್ಲಿ ಭಾಗಿಯಾಗುವುದು ಪದ್ಧತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next