ಕನಕಪುರ: ಮರಳವಾಡಿ ಹೋಬಳಿಯ ಗ್ರಾಮೀಣ ಭಾಗದ ಗರ್ಭಿಣಿ,ಬಾಣಂತಿಯರಿಗೆ ರಾತ್ರಿ ವೇಳೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ ಎಂದು ಮರಳವಾಡಿಯ ಬಿಜೆಪಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮರಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕರ್ಮಕಾಂಡಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ದಿನದ 24ಗಂಟೆ ಗರ್ಭಿಣಿ, ಬಾಣಂತಿಯರಿಗೆ ಚಿಕಿತ್ಸೆ ನೀಡಬೇಕಾದ ಸಿಬ್ಬಂದಿ ರಾತ್ರಿಯಾದ ಕೂಡಲೇ ಆಸ್ಪತ್ರೆಗೆ ಬೀಗ ಜಡಿದು ಮಾಯವಾಗುತ್ತಿದ್ದಾರೆ. ಇದರಿಂದ ರಾತ್ರಿ ವೇಳೆ ಗ್ರಾಮೀಣ ಭಾಗದ ಹಳ್ಳಿಗಳಿಂದ ಬರುವ ಗರ್ಭಿಣಿಯರಿಗೆ ಹೆರಿಗೆ ನೋವು ಬಂದರೇ ವೈದ್ಯರಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ದೂರಿದರು.
ರಾತ್ರಿ ಪಾಳಿಯಲ್ಲಿ ಯಾರು ಇರಲ್ಲ: ಗ್ರಾಮೀಣ ಭಾಗದ ಜನರು ರಾತ್ರಿ ವೇಳೆ ತುರ್ತು ಆರೋಗ್ಯ ಸೇವೆಗೆ ನಗರ ಪ್ರದೇಶಗಳಿಗೆ ಹೋಗಬೇಕಿತ್ತು. ರಾತ್ರಿ ವೇಳೆ ವಾಹನ ವ್ಯವಸ್ಥೆ ಇಲ್ಲದೆ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಹಾಗಾಗಿ ಸರ್ಕಾರ ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆ ಮತ್ತು ತಾಯಿ ಮಗುವಿನ ಸುರಕ್ಷತೆಗೆ ಹೋಬಳಿ ಮಟ್ಟದ ಆರೋಗ್ಯ ಕೇಂದ್ರಗಳನ್ನು ಬಲಪಡಿಸಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಸಿಕೊಟ್ಟಿದೆ. ದಿನದ 24 ಗಂಟೆಯೂ ಗರ್ಭಿಣಿ ಬಾಣಂತಿಯರು ಸೇರಿದಂತೆ ಸಾರ್ವಜನಿಕರ ಸೇವೆಗೆ ಹೆಚ್ಚುವರಿಯಾಗಿ ಒಬ್ಬರು ಮಹಿಳಾ ವೈದ್ಯಾಧಿಕಾರಿ ಹಾಗೂ 3ಜನ ಶುಶ್ರೂಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿದ್ದರೂ ಸಹ ರಾತ್ರಿ ವೇಳೆ ಯಾವುದೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ಹೋರಹಾಕಿದರು.
ಸಂಜೆಯಾದ ಮೇಲೆ ಆಸ್ಪತ್ರೆಗೆ ಬೀಗ: ಸರ್ಕಾರಿ ರಜಾ ದಿನಗಳು ಹಾಗೂ ಪ್ರತಿ ದಿನ ರಾತ್ರಿ ಸಮಯದಲ್ಲಿ ಯಾವುದೇ ರೀತಿಯ ಸೌಲಭ್ಯಗಳುಇಲ್ಲಿ ದೊರೆಯುತ್ತಿಲ್ಲ. ಸಂಜೆಯಾದ ಕೂಡಲೇ ಇಲ್ಲಿನ ಸಿಬ್ಬಂದಿ ಆಸ್ಪತ್ರೆಗೆ ಬೀಗ ಜಡಿದು ಮನೆಗೆ ತೆರಳುತ್ತಾರೆ. ರಾತ್ರಿ ವೇಳೆ ಹೆರಿಗೆ ನೋವಿ ನಿಂದ ಬರುವ ಗರ್ಭಿಣಿಯರು ಆಸ್ಪತ್ರೆ ಸಿಬ್ಬಂದಿ ಬರುವವರೆಗೂ ತಾಸು ಗಟ್ಟಲೆ ಆಸ್ಪತ್ರೆ ಹೊರಭಾಗದಲ್ಲೇ ಕಾದು ಕುಳಿತುಕೊಳ್ಳಬೇಕಾದ ಅನಿವಾ ರ್ಯತೆ ಇದೆ. ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಬೇಜವಾಬ್ದಾರಿಯಿಂದ ಗರ್ಭಿಣಿ ಬಾಣಂತಿಯರ ಸಾವು ನೋವು ಸಂಭವಿಸುವ ಮೊದಲು ಮೇಲಾಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಾಗುವ ಅನಾಹುತಗಳಿಗೆ ಮೇಲಾಧಿಕಾರಿಗಳೇ ಹೊಣೆ ಎಂದರು.
ಲಂಚವಿಲ್ಲದೇ ಚಿಕಿತ್ಸೆಯಿಲ್ಲ: ಈ ಆಸ್ಪತ್ರೆಯಲ್ಲಿ ಲಂಚ ಕೊಡದಿದ್ದರೆ ಕೆಲವು ಸೌಲಭ್ಯಗಳು ಸಿಗವುದಿಲ್ಲ. ಮರಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ಚಿಕಿತ್ಸೆಗೆ ಹಣ ನೀಡಬೇಕಾದ ಅನಿವಾರ್ಯತೆ ಇದೆಯಂತೆ. ಇಲ್ಲಿನ ವೈದ್ಯರ ಕೈಗುಣ ಮತ್ತು ಚಿಕಿತ್ಸೆ ಚೆನ್ನಾಗಿದೆ. ಜನರು ಸಹ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ರಕ್ತ ಪರೀಕ್ಷೆ, ಇನ್ನಿತರೆ ಪರೀಕ್ಷೆಗಳಿಗೆ ರೋಗಿಗಳಿಂದ ಹಣ ವಸೂಲಿ ಮಾಡುತ್ತಾರೆ. ಸರಕಾರಿಆಸ್ಪತ್ರೆಗಳೆ ವಸೂಲಿ ಕೇಂದ್ರಗಳಾದರೆ ಬಡವರು ಮತ್ತು ನಿರ್ಗತಿಕರು ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಸಿಗುವುದು ದೂರದ ಮಾತು ಎಂದರು.
ಇಲ್ಲಿ ಸರ್ಕಾರಿ ಹಣವೂ ದೂರುಪಯೋಗವಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಿಂದಬಿಡುಗಡೆ ಆದ ಹಣ ದುರುಪಯೋಗವಾಗಿದೆ. ಜನಪ್ರತಿನಿಧಿಗಳು ಇಲ್ಲಿ ಬಂದರೆ ಬಹಳ ಬೇಗ ಚಿಕಿತ್ಸೆ ನೀಡುತ್ತಾರೆ. ಆದರೆ ಶ್ರೀಸಾಮಾನ್ಯರು ಕ್ಯೂನಲ್ಲಿ ನಿಂತು ಚಿಕಿತ್ಸೆ ಪಡೆದುಕೊಳ್ಳಬೇಕು. ಅವರಿಗೊಂದು ನ್ಯಾಯ ಜನ ಸಾಮಾನ್ಯರಿಗೊಂದು ನ್ಯಾಯನಾ? ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳು ಇತ್ತ ಗಮನಹರಿಸಿ ಎಲ್ಲವನ್ನೂ ತನಿಖೆಗೊಳಪಡಿಸಿ, ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮರಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಅವ್ಯವಸ್ಥೆಗಳ ತವರೂರಾಗಿದ್ದು ಜನಸಾಮಾನ್ಯರು ರಾತ್ರಿವೇಳೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನೇ ಒಂದೆರಡು ದಿನದ ಹಿಂದೆಗರ್ಭಿಣಿ ಕರೆತಂದು ಬೇರೆ ದಾರಿಯಿಲ್ಲದೆಗಂಟೆಗಟ್ಟಲೆ ಕಾದೆ. ಸರಕಾರದಿಂದ ನಾನಾ ಯೋಜನೆಗಳಿಗೆ ಬಿಡುಗಡೆಯಾದ ಹಣದುರುಪಯೋಗವಾಗಿದ್ದು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು. –
ಚಂದ್ರು, ಮರಳವಾಡಿ ಬಿಜೆಪಿ ಕಾರ್ಯಕರ್ತ