Advertisement

ಫೆಬ್ರವರಿಯಿಂದ ಆನ್‌ಲೈನ್‌ನಲ್ಲೇ ಖಾತಾ, ನಕ್ಷೆ

11:19 AM Jan 31, 2018 | Team Udayavani |

ಬೆಂಗಳೂರು: ಖಾತೆ ಮತ್ತು ನಕ್ಷೆ ಮಂಜೂರಾತಿಗಾಗಿ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಫೆಬ್ರವರಿಯಿಂದ ಆನ್‌ಲೈನ್‌ನಲ್ಲಿ ಖಾತೆ ಹಾಗೂ ನಕ್ಷೆ ದೊರೆಯುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.  ಮಂಗಳವಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಬಿಬಿಎಂಪಿಯಿಂದ ಈಗಾಗಲೇ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಫೆಬ್ರವರಿ ಮೊದಲ ವಾರದಿಂದಲೇ ಆನ್‌ಲೈನ್‌ನಲ್ಲಿ ಖಾತೆ ಮತ್ತು ನಕ್ಷೆ ದೊರೆಯಲಿವೆ ಎಂದರು.

Advertisement

ಆಸ್ತಿದಾರರು ಮನೆಯಲ್ಲಿ ಕುಳಿತೇ ಖಾತೆ ಮತ್ತು ನಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕವೇ ಅಧಿಕಾರಿಗಳು ಒಂದು ವಾರದಲ್ಲಿ ಖಾತೆ ಹಾಗೂ ನಕ್ಷೆ ಮಂಜೂರಾತಿ ಮಾಡಲಿದ್ದಾರೆ. ಖಾತೆ ಹಾಗೂ ನಕ್ಷೆ ಮಂಜೂರಾದ ಬಳಿಕ ಸಾರ್ವಜನಿಕರು ಆನ್‌ಲೈನ್‌ ಅಥವಾ ಪಾಲಿಕೆಯ ಕಚೇರಿಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಂತ್ರಾಂಶ ಬಳಕೆಯ ಕುರಿತಂತೆ ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಫೆಬ್ರವರಿಯಿಂದ ತರಬೇತಿ ನೀಡಲಾಗುವುದು. ಒಂದೊಮ್ಮೆ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳಲ್ಲಿ ಯಾವುದಾರೂ ಸಮಸ್ಯೆ ಅಥವಾ ಹೆಚ್ಚುವರಿ ದಾಖಲೆಗಳು ಅಗತ್ಯವಿದ್ದರೂ, ಅಧಿಕಾರಿಗಳು ಇ ಮೇಲ್‌ ಅಥವಾ ಎಸ್‌ಎಂಎಸ್‌ ಮೂಲಕವೇ ಕೋರಬೇಕಾಗುತ್ತದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ ಎಂದು ವಿವರಿಸಿದರು.

ಒತ್ತಾಯ: ವಿರೋಧಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಕನ್ನಿಂಗ್‌ಹ್ಯಾಮ್‌ ರಸ್ತೆಯಿಂದ ಜಸ್ಮಾಭವನದ ನಡುವಿನ ರಸ್ತೆಯಲ್ಲಿ ಸುಮಾರು 350 ಕೋಟಿ ರೂ. ಬೆಲೆ ಬಾಳುವ 1.28 ಲಕ್ಷ ಚದರಡಿ ಪಾಲಿಕೆಯ ಜಾಗವನ್ನು ಪಾಲಿಕೆಯ ಅಧಿಕಾರಿಗಳು ಕಾನೂನು ಬಾಹಿರವಾಗಿ ಖಾಸಗಿಯವರ ಹೆಸರಿಗೆ ಖಾತಾ ಮಾಡಿದ್ದಾರೆಂದು ಆರೋಪಿಸಿದರು. 

ಅಧಿಕಾರಿಗಳು ಅಮಾನತು: ಪ್ರಕರಣ ಸಂಬಂಧ ಪಾಲಿಕೆಯ ಆಯುಕ್ತರು ಈಗಾಗಲೇ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಕೂಡಲೇ ಸ್ವತ್ತು ವಶಕ್ಕೆ ಪಡೆದು ಮಂಜೂರು ಮಾಡಿರುವ ಖಾತೆ ರದ್ದುಪಡಿಸುವಂತೆ ಜಂಟಿ ಆಯುಕ್ತರಿಗೆ ಆದೇಶಿಸಿದ್ದಾರೆ.

Advertisement

ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಈವರೆಗೆ ಖಾತಾ ರದ್ದುಪಡಿಸಿ ವಶಕ್ಕೆ ಪಡೆದಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು. ಮೇಯರ್‌ ಮಾತನಾಡಿ, ಬುಧವಾರ ಬೆಳಗ್ಗೆ 11 ಗಂಟೆಗೆ ಆಯುಕ್ತರು, ಕಂದಾಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ, ಖಾತಾ ರದ್ದುಪಡಿಸಿ ವಶಕ್ಕೆ ಪಡೆಯುವಂತೆ ಆಯುಕ್ತರಿಗೆ ಸೂಚಿಸಿದರು.

ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮಾತನಾಡಿ, ಹಿಂದೆ ಪಾಲಿಕೆಯ ಆಸ್ತಿಗಳ ಸಂರಕ್ಷಣೆಗೆ ರಚಿಸಲಾಗಿದ್ದ ಆಸ್ತಿಗಳ ಸಮಿತಿ ಪಾಲಿಕೆ ಆಸ್ತಿಗಳ ಪಟ್ಟಿಯನ್ನು ಸಲ್ಲಿಸಿದ್ದು, ಕೂಡಲೇ ಅದಕ್ಕೆ ಸಂಬಂಧಿಸಿದ ಕೈಪಿಡಿಯನ್ನು ಪಾಲಿಕೆಯ ಎಲ್ಲ ಸದಸ್ಯರಿಗೆ ನೀಡಬೇಕು. ಆಸ್ತಿಗಳ ರಕ್ಷಣೆಗೆ ತಂತಿಬೇಲಿ ಅಳವಡಿಸಬೇಕಿದೆ ಎಂದರು. 

ಪಾಲಿಕೆ ಪರ: ನಾಗರಬಾವಿ ಬಳಿಯ ಸುಮಾರು 110 ಕೋಟಿ ಮೌಲ್ಯದ 3.20 ಎಕರೆ ನ್ಯಾಯಾಲಯದಲ್ಲಿ ಪಾಲಿಕೆ ಪರ ಆಗಿದೆ. ಆದರೆ, ಈವರೆಗೆ ಅದನ್ನು ವಶಕ್ಕೆ ಪಡೆದಿಲ್ಲ. ಮತ್ತೂಂದು ಪ್ರಕರಣದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿ 4.5 ವರ್ಷಗಳಾದರೂ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಸದಸ್ಯ ಉಮೇಶ್‌ ಶೆಟ್ಟಿ ಆರೋಪಿಸಿದರು.

ನಗರದಲ್ಲಿ ಈ ಹಿಂದೆ ಸಾಮಾಜಿಕ ಉದ್ದೇಶಗಳಿಗೆ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಗಳಿಗೆ ವಾರ್ಷಿಕ 30, 50, 100 ರೂ.ಗಳಿಗೆ ಪಾಲಿಕೆ ಆಸ್ತಿಗಳನ್ನು ಭೋಗ್ಯಕ್ಕೆ ನೀಡಲಾಗಿದೆ. ಆದರೆ, ಇತ್ತೀಚೆಗೆ ಸಂಸ್ಥೆಗಳು ವಾಣಿಜ್ಯ ಉದ್ದೇಶಗಳಿಗೆ ಆಸ್ತಿಗಳನ್ನು ಬಳಸುತ್ತಿದ್ದು, ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು. 

ವಾರದೊಳಗೆ ಪರಿಹಾರ: ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾತನಾಡಿ, ಮೇಯರ್‌ ವೈದ್ಯಕೀಯ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ವಾರದೊಳಗೆ ಹಣ ಬಿಡುಗಡೆ ಮಾಡಲಾಗುವುದೆಂದು ಭರವಸೆ ನೀಡಿದರು.  ನಿಧಿಯ ಮೊತ್ತಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದರಿಂದ ಹಣ ಬಿಡುಗಡೆ ವಿಳಂಬವಾಗಿದೆ ಎಂದು ತಿಳಿಸಿದರು.

ಚಂದ್ರಯಾನ ಯಾತ್ರಿಗಳಿಗೆ ನೆರವು: ಜರ್ಮನಿ, ಜಪಾನ್‌ನಿಂದ ತಲಾ ಒಂದು ತಂಡ ಚಂದ್ರಯಾನ ಕೈಗೊಳ್ಳುತ್ತಿದ್ದು, ಭಾರತದಿಂದ ಚಂದ್ರಯಾನಕ್ಕೆ ಬೆಂಗಳೂರಿನ ಇಂಡಸ್‌ ತಂಡ ಆಯ್ಕೆಯಾಗಿದೆ. ಆದರೆ, ಆರ್ಥಿಕ ನೆರವು ಅಗತ್ಯವಿದೆ ಎಂದು ಮಾಜಿ ಆಡಳಿತ ಪಕ್ಷ ನಾಯಕ ಮಹಮದ್‌ ರಿಜ್ವಾನ್‌ ನವಾಬ್‌ ತಿಳಿಸಿದರು. ಅದಕ್ಕೆ ಸ್ಪಂದಿಸಿದ ಮೇಯರ್‌, ಪಾಲಿಕೆಯಿಂದ ಅವರಿಗೆ 2-3 ಕೋಟಿ ರೂ. ಆರ್ಥಿಕ ನೆರವು ನೀಡಲು ಚರ್ಚಿಸಲಾಗುವುದು ಎಂದರು. 

ಸಿದ್ದಗಂಗಾ ಶ್ರೀ ಜನ್ಮದಿನಾಚರಣೆಗೆ 1 ಕೋಟಿ: ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ 111ನೇ ಜನ್ಮ ದಿನವನ್ನು ಪಾಲಿಕೆಯ ಎಂಟು ವಲಯದಲ್ಲಿ ಆಚರಣೆ ಮಾಡಲು 1 ಕೋಟಿ ರೂ. ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. 

ಪಾಲಿಕೆಯ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿಯನ್ನು ಯಾವುದೇ ನಿಗದಿತ ಉದ್ದೇಶ ಅಥವಾ ಇಲಾಖೆಗೆ ನೀಡದಿದ್ದರೆ, ಕೆಎಂಸಿ ಕಾಯ್ದೆ 174ರ ಪ್ರಕಾರ ಅಂತಹ ಆಸ್ತಿಗಳನ್ನು ಪಾಲಿಕೆಯ ವಶಕ್ಕೆ ಪಡೆದು ರಕ್ಷಣೆ ಮಾಡಬಹುದಾಗಿದೆ. ಅದರಂತೆ ಕೂಡಲೇ ಎಲ್ಲ ವಾರ್ಡ್‌ಗಳಲ್ಲಿರುವ ಸರ್ಕಾರಿ ಜಾಗಗಳ ಕುರಿತು ಪಟ್ಟಿ ತರಿಸಿಕೊಂಡು ಅವುಗಳ ರಕ್ಷಣೆಗೆ ತಂತಿಬೇಲಿ ಅಳವಡಿಸಲು ಅಗತ್ಯ ಅನುದಾನ ನೀಡಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತರು

ನಗರದಲ್ಲಿನ ಪಾಲಿಕೆಯ ಕಟ್ಟಡಗಳು, ಆಸ್ತಿಗಳು, ಪಾರ್ಕ್‌, ಶಾಲೆ, ಆಟದ ಮೈದಾನ, ರುದ್ರಭೂಮಿ ಹಾಗೂ ಇಂದಿರಾ ಕ್ಯಾಂಟೀನ್‌ ಸೇರಿದಂತೆ ಶೇ.80ರಷ್ಟು ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡುವ ಕೆಲಸ ಮುಗಿದಿದ್ದು, ಫೆ.15ರೊಳಗೆ ಉಳಿದ ಆಸ್ತಿಗಳಿಗೂ ಪಿಐಡಿ ಸಂಖ್ಯೆ ನೀಡಲಾಗುವುದು. 
-ಆರ್‌.ಸಂಪತ್‌ರಾಜ್‌, ಮೇಯರ್‌ 

ಕೊಳೆಗೇರಿಯಲ್ಲಿ 1 ವರ್ಷ ಸೇವೆ ಕಡ್ಡಾಯ: ತಮ್ಮ ವಾರ್ಡ್‌ನಲ್ಲಿ ಹೆಚ್ಚು ಕೊಳೆಗೇರಿಗಳಿವೆ ಎಂಬ ಕಾರಣದಿಂದ ಸಹಾಯಕ ಎಂಜಿನಿಯರ್‌ಗಳು ಕಾರ್ಯ ನಿರ್ವಹಿಸಲು ಬರುತ್ತಿಲ್ಲವೆಂದು ಕೋಣನಕುಂಟೆ ವಾರ್ಡ್‌ ಸದಸ್ಯೆ ಸುರೇಖಾ ಜಯರಾಮ್‌ ಬೇಸರ ವ್ಯಕ್ತಪಡಿಸಿದರು.

ಅದಕ್ಕೆ ಉತ್ತರಿಸಿದ ಮೇಯರ್‌, ಪಾಲಿಕೆಯಲ್ಲಿರುವ ಎಲ್ಲ ಸಹಾಯಕ ಎಂಜಿನಿಯರ್‌ಗಳ ಪಟ್ಟಿ ಮಾಡಿ ಯಾರು ಕೊಳೆಗೇರಿಗಳಲ್ಲಿ ಕಾರ್ಯ ನಿರ್ವಹಿಸಿಲ್ಲ ಎಂಬುದನ್ನು ಗುರುತಿಸಲಾಗುವುದು. ಜತೆಗೆ ಕೊಳೆಗೇರಿಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದು ಕಡ್ಡಾಯಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next