ರಾಯಪುರ: ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಅನುಮಾನದ ಹಿನ್ನಲೆಯಲ್ಲಿ ನಕ್ಸಲರು ನಾಲ್ವರು ಗ್ರಾಮಸ್ಥರನ್ನು ಕೊಂದ ಘಟನೆ ಛತ್ತೀಸ್ ಗಡ್ ನ ಬಿಜಪುರ್ ಜಿಲ್ಲೆಯಲ್ಲಿ ನಡೆದಿದೆ.
ಬಿಜಪುರ್ ಜಿಲ್ಲೆಯ ಗಂಗಲೂರ್ ಪೊಲೀಸ್ ಠಾಣಾ ವ್ಯಾಪ್ತಿಯ ದುಮ್ರಿ- ಪಲ್ನಾರ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಗ್ರಾಮಸ್ಥರು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಅವರು ಕಾಡಿನತ್ತ ತೆರಳಿರುವ ವಿಚಾರ ಬೆಳಕಿಗೆ ಬಂದಿತ್ತು. ಕಾಡಿನಲ್ಲಿ ಪೊಲೀಸರು ಹುಡುಕಾಡಿದ ವೇಳೆ ಹೆಣಗಳು ಸಿಕ್ಕಿವೆ. ಅಂದಹಾಗೆ, ಇವರನ್ನು ಒಮ್ಮೆಲೇ ಹತ್ಯೆ ಮಾಡಲಾಗಿದೆಯೋ ಅಥವಾ ಬೇರೆ ಬೇರೆ ಸಮಯದಲ್ಲಿ ಹತ್ಯೆ ಮಾಡಲಾಗಿದೆಯೇ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಮೃತರನ್ನು ಪುಸ್ನಾರ್ ಗ್ರಾಮದ ಭೂಸ್ಕು ಅಲಿಯಾಸ್ ತುಳಸಿ, ಪುನೆಮ್ ಸನ್ನು, ಗೋರೆ ಸನ್ನು ಅಲಿಯಾಸ್ ಧ್ರುವ ಮತ್ತು ಆಯುಟು ಅಲಿಯಾಸ್ ಫಲ್ಲಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ತೆಲುಗು ಚಿತ್ರ ನಿರ್ಮಾಪಕ ನೂತನ್ ನಾಯ್ಡುನನ್ನು ಉಡುಪಿಯಲ್ಲಿ ಬಂಧಿಸಿದ ಪೊಲೀಸರು
ಪ್ರಾಥಮಿಕ ಮಾಹಿತಿಯ ಪ್ರಕಾರ, ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದ ಕೆಲವು ಗ್ರಾಮಸ್ಥರನ್ನು ಮಾವೋವಾದಿಗಳು ಅರಣ್ಯಕ್ಕೆ ಕರೆದು ಪೊಲೀಸ್ ಮಾಹಿತಿದಾರರು ಎಂದು ಆರೋಪಿಸಿ ನಾಲ್ವರನ್ನು ಕ್ರೂರವಾಗಿ ಕೊಂದಿದ್ದಾರೆ ಎಂದು ಹೇಳಲಾಗಿದೆ.