ನವದೆಹಲಿ: ಸಿಆರ್‌ಪಿಎಫ್ ಮತ್ತು ಭಾರತ ಸರ್ಕಾರವು ಮಾವೋವಾದಿಗಳ ವಿರುದ್ಧ ದೊಡ್ಡ ಮಟ್ಟಿನ ಗೆಲುವು ಸಾಧಿಸಿದೆ. ಬಿಹಾರವು ಈಗ ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಿದ್ದರೆ, ಜಾರ್ಖಂಡ್‌ನ ಬುದ್ಧ ಪಹಾಡ್ ಪ್ರದೇಶವು ಬರೋಬ್ಬರಿ 30 ವರ್ಷಗಳ ಬಳಿಕ ಮಾವೋವಾದಿಗಳಿಂದ ಮುಕ್ತಿ ಪಡೆದಿದೆ. ಸಿಆರ್‌ಪಿಎಪ್ ಪ್ರಧಾನ ನಿರ್ದೇಶಕ ಕುಲದೀಪ್ ಸಿಂಗ್ ಬುಧವಾರ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಲ್ಪೆ : ನಾಡದೋಣಿ ಬಲೆಗೆ ಬಿದ್ದ ಮಿಲ್ಕ್ ತಾಟೆ ಮೀನುಗಳು, ಕೆ.ಜಿ.ಗೆ 280 ರೂ.ಗಳಂತೆ ಹರಾಜು
ನಕ್ಸಲ್ ಬಾಹುಳ್ಯದ ಪ್ರದೇಶವಾಗಿದ್ದ ಬುದ್ಧ ಪಹಾಡ್‌ನಲ್ಲಿ ಇತ್ತೀಚೆಗೆ ಮೂರು ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಈಗ ಈ ವಲಯವು ನಕ್ಸಲ್ ಮುಕ್ತವಾಗಿದೆ. ಜತೆಗೆ, ಎಂಐ-17 ಹೆಲಿಕಾಪ್ಟರ್ ಕೂಡ ಸುರಕ್ಷಿತವಾಗಿ ಇಲ್ಲಿ ಲ್ಯಾಂಡ್ ಆಗಿದೆ. ಒಂದು ಶಾಶ್ವತ ಶಿಬಿರವನ್ನೂ ನಾವು ಸ್ಥಾಪಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಬಿಹಾರ ಕೂಡ ನಕ್ಸಲರ ಕಾಟದಿಂದ ಬಿಡುಗಡೆ ಹೊಂದಿದೆ. ಇಡೀ ರಾಜ್ಯದಲ್ಲಿ ಯಾವ ಪ್ರದೇಶವೂ ನಕ್ಸಲರ ವಶದಲ್ಲಿಲ್ಲ. ನಮ್ಮ ಪಡೆಗಳು ಯಾವಾಗ ಬೇಕಿದ್ದರೂಯಾವ ಪ್ರದೇಶಕ್ಕಾದರೂ ಸರಾಗವಾಗಿ ಸಾಗಬಹುದಾಗಿದೆ ಎಂದಿದ್ದಾರೆ. ದೇಶದಲ್ಲಿ ನಕ್ಸಲ್ ದಾಳಿ ಪ್ರಕರಣಗಳು ಶೇ.77ರಷ್ಟು ಇಳಿಕೆಯಾಗಿದ್ದು, 2009ರಲ್ಲಿ 2,258 ಇದ್ದಿದ್ದು, ಈಗ 509ಕ್ಕಿಳಿದಿದೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ದೇಶದ ಎಡಪಂಥೀಯ ಪ್ರತ್ಯೇಕತಾವಾದದ ವಿರುದ್ಧ ನಮ್ಮ ಭದ್ರತಾ ಪಡೆಗಳು ಅಭೂತಪೂರ್ವ ಯಶಸ್ಸನ್ನು ಗಳಿಸಿವೆ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಅಭಿನಂದನೆಗಳು.
●ಅಮಿತ್ ಶಾ,
ಕೇಂದ್ರ ಗೃಹ ಸಚಿವ