Advertisement

ವಲಸೆ ಹಕ್ಕಿಗಳು ಚೆಲ್ಲಾಪಿಲ್ಲಿ

11:29 AM May 06, 2020 | mahesh |

ಬೆಂಗಳೂರು: ಗೂಡು ಸೇರಲು ಒಟ್ಟಾಗಿ ಬಂದಿದ್ದ “ವಲಸೆ ಹಕ್ಕಿ’ಗಳು ಈಗ ಅಕ್ಷರಶಃ ಚೆಲ್ಲಾಪಿಲ್ಲಿಯಾಗಿ  ಬೀದಿಗೆಬಿದ್ದಿವೆ. ಪರಿಣಾಮ ತವರಿನ ಆಸೆಪಟ್ಟಿದ್ದೇ ತಪ್ಪು ಎನ್ನುವಂತೆ ಅವುಗಳಿಗೆ ಭಾಸವಾಗುತ್ತಿದೆ! ಬಿಹಾರ, ಒಡಿಶಾ, ಉತ್ತರ ಪ್ರದೇಶ ಸೇರಿದಂತೆ ನಾನಾ ಭಾಗಗಳಿಗೆ ತೆರಳಲು ಸಾರಿಗೆ ಸೇವೆ ಕಲ್ಪಿಸುವಂತೆ ಒತ್ತಾಯಿಸಿ 2 ದಿನಗಳಿಂದ ಸಾವಿರಾರು ವಲಸಿಗರು ಮಾದವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿದ್ದರಿಂದ ಕಂಗೆಟ್ಟು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಮಂಗಳವಾರ ಸಂಜೆ ಏಕಾಏಕಿ ಸರ್ಕಾರಿ ಬಸ್‌ಗಳಲ್ಲಿ ಅವರೆಲ್ಲರನ್ನೂ ವಿವಿಧ ತಂಡಗಳಾಗಿ ಕೆ.ಆರ್‌.ಮಾರುಕಟ್ಟೆ-ಮೆಜೆಸ್ಟಿಕ್‌ಗೆ ತಂದುಬಿಡಲಾಯಿತು. ಹೀಗೆ ನಡುದಾರಿಯಲ್ಲಿ ಬಿಟ್ಟು ಹೋಗಿದ್ದರಿಂದ ಆ ಕಾರ್ಮಿಕರು ಅನಾಥರಾದರು.
ಎಲೆಕ್ಟ್ರಾನಿಕ್‌ ಸಿಟಿ, ಬನಶಂಕರಿ, ಯಲಹಂಕ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ನೆಲೆಸಿರುವ ಆ ಕಾರ್ಮಿಕರು ತಮ್ಮ ಶಿಬಿರಗಳು, ರೂಮ್‌ಗಳನ್ನು ಸೇರಲು ಪರದಾಡುವಂತಾಯಿತು. ಯಾವುದೇ ಸಾರಿಗೆ ಸೇವೆ ಇಲ್ಲ. ಸೋಂಕಿನ ಭೀತಿಯಿಂದ ಯಾರೂ ಡ್ರಾಪ್‌ ಕೊಡಲಿಲ್ಲ. ಮಧ್ಯರಾತ್ರಿ 12ರವರೆಗೂ ಹತ್ತಾರು ಕಿ.ಮೀ. ನಡೆದುಹೋಗಬೇಕಾಯಿತು. ಮನೆಗೆ ಕಳುಹಿಸಿಕೊಡಿ ಎಂದು ಕೇಳಿದ್ದೇ ನಮಗೆ ಶಾಪವಾಯಿತು’ ಎಂದು ಉತ್ತರ ಪ್ರದೇಶ ಮೂಲದ ಕಾರ್ಮಿಕ ನಿಖೀಲ್‌ ಅಸಹಾಯಕತೆ ವ್ಯಕ್ತಪಡಿಸಿದರು.

Advertisement

ಹಿನ್ನೆಲೆ: ತಮ್ಮೂರುಗಳಿಗೆ ತೆರಳಲು ರೈಲು ವ್ಯವಸ್ಥೆ  ಕಲ್ಪಿಸುವಂತೆ ಸೋಮವಾರ ಬೆಳಗ್ಗೆ ಸುಮಾರು ನೂರಾರು ಕಾರ್ಮಿಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗಿಳಿದಿದ್ದರು. ನಂತರದಲ್ಲಿ ಚಿಕ್ಕಬಾಣಾವರ ಮೂಲಕ ರೈಲಿನಲ್ಲಿ ಕಳುಹಿಸಲಾಗುತ್ತದೆ ಎಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಕಾರ್ಮಿಕರೆಲ್ಲ ಮಾದವಾರಕ್ಕೆ ಬಂದು ಸೇರಿದರು. ರೈಲು ಸೇವೆ ಇಲ್ಲದ್ದರಿಂದ ಅಲ್ಲಿ ನೈಸ್‌ ರಸ್ತೆ ತಡೆದು ಕಾರ್ಮಿಕರು ಪ್ರತಿಭಟನೆ ನಡೆಸಿದರು. ಸಂಜೆವರೆಗೂ ಯಾವುದೇ ಸ್ಪಂದನೆ ಸಿಗಲಿಲ್ಲ. ಪ್ರತಿಭಟನೆ ವಿಕೋಪಕ್ಕೆ ಹೋಗಿತ್ತು. ತದನಂತರ ಕೆಲವರು ಬೇಸತ್ತು ವಾಪಸ್‌ ನಡೆದರು.
ಕೆಲವರು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ರಾತ್ರಿಯಿಡೀ ಸ್ಥಳಸಿಕ್ಕಲ್ಲಿ ಮಲಗಿದ್ದರು.

ಮಂಗಳವಾರ ಬೆಳಗ್ಗಿನಿಂದ ಸಂಜೆವರೆಗೆ ಕಾದವರನ್ನು ಸರ್ಕಾರಿ ಬಸ್‌ಗಳಲ್ಲಿ ಕಾರ್ಮಿಕರನ್ನು ಏಕಾಏಕಿ ಕೊಂಡೊಯ್ದು ಕೆ.ಆರ್‌. ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ನಲ್ಲಿ ಬಿಡಲಾಯಿತು. ಅಲ್ಲಿಂದ ಗೂಡು ಸೇರುವುದು ಅವರಿಗೆ ಮತ್ತೂಂದು ಸಮಸ್ಯೆ ಆಯಿತು. ಇನ್ನು ಬಸ್‌ಗಳಲ್ಲಿ ಯಾವುದೇ ಸಾಮಾಜಿಕ ಅಂತರ ಇರಲಿಲ್ಲ. ಪ್ರತಿ ಸೀಟಿಗೆ ನೂರಾರು ರೂ. ಟಿಕೆಟ್‌ ದರ ನಿಗದಿಪಡಿಸಲಾಗಿತ್ತು.
40-45 ಜನರನ್ನು ಬಸ್‌ಗಳಲ್ಲಿ ತುಂಬಲಾಗಿತ್ತು.

ತಿಂಗಳ ದಿನಸಿ ಹೊತ್ತು ಮನೆಗೆ: ಎಚ್ಚೆತ್ತ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸದ್ಯಕ್ಕೆ ವಿಶೇಷ ರೈಲು ವ್ಯವಸ್ಥೆ ಇಲ್ಲದಿರುವ ಬಗ್ಗೆ ಮಾಹಿತಿ ನೀಡಿ. ಈ ಹಿಂದೆ ನೆಲೆಸಿದ್ದ ಶೆಡ್‌ಗಳಲ್ಲಿಯೇ ಇರುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿವೆ. ಮಾದವಾರದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ವಲಸೆ ಕಾರ್ಮಿಕರಿಂದ
ಉಂಟಾಗಿದ್ದ ಪ್ರಕ್ಷುದ್ಧ ಪರಿಸ್ಥಿತಿ ಮಂಗಳವಾರ ತಹಬದಿಗೆ ಬಂದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. “ಬಿಎಂಟಿಸಿ ಬಸ್‌ಗಳಲ್ಲಿ ಕರೆತರುವಾಗ ಸಾಮಾಜಿಕ ಅಂತರ ಕಾಪಾಡಿ, ಮುಂಜಾಗ್ರತಾ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ತಿಂಗಳ ದಿನಸಿ ನೀಡಿ ಅವರು ಈ ಹಿಂದೆ ವಾಸವಿದ್ದ ಸ್ಥಳಗಳಿಗೆ ಬಿಡಲಾಗುತ್ತಿದೆ. ಅವರು ತಮ್ಮ ಸ್ವಂತ ಊರುಗಳಿಗೆ ತೆರಳಲು ವಿಶೇಷ ರೈಲು ಕಲ್ಪಿಸುವ ಕ್ರಮಗಳ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ’ ಎಂದು ಕೇಂದ್ರ ವಲಯದ ಐಜಿಪಿ ಶರತ್‌ಚಂದ್ರ ತಿಳಿಸಿದ್ದಾರೆ.

ಕಾರ್ಮಿಕರಿಗಾಗಿ ಬಿಲ್ಡರ್‌ಗಳ ಅಹವಾಲು
ಸರ್ಕಾರ ಕಾರ್ಮಿಕರನ್ನು ಏಕಾಏಕಿ ಊರಿಗೆ ತೆರಳಲು ಸೂಚಿಸಿ ಇನ್ನೊಂದೆಡೆ ಕಟ್ಟಡ ಕಾಮಗಾರಿಗಳನ್ನು ಆರಂಭಿಸಲು ಸೂಚಿಸಿದ್ದು ಕಟ್ಟಡ ಕಾಮಗಾರಿ ಕೈಗೊಳ್ಳಲು ಕಾರ್ಮಿಕರು ಸಿಗದ
ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಲ್ಡರ್‌ಗಳು ಸರ್ಕಾರದ ಎದುರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಅವರನ್ನು ಸಮಾಧಾನಿಸಲು ಸರ್ಕಾರ ಹೊರ ರಾಜ್ಯಗಳಿಗೆ
ವಾಪಸ್‌ ತೆರಳಲು ಮುಂದಾಗಿರುವ ಕಾರ್ಮಿಕರನ್ನು ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್‌ ಅಶೋಕ್‌ ಬಿಐಇಸಿಯಲ್ಲಿ
ಉಳಿದುಕೊಂಡಿದ್ದ ಕಾರ್ಮಿಕರನ್ನು ಮನವೊಲಿಸಿ ಅವರಿಗೆ ಕನಿಷ್ಠ 15 ದಿನಗಳಿಗೆ ಅಗತ್ಯವಿರುವ ಪಡಿತರ ವ್ಯವಸ್ಥೆ ಕಲ್ಪಿಸಿ ಅವರು ಮೊದಲು ವಾಸವಾಗಿದ್ದ ಸ್ಥಳಗಳಲ್ಲಿಯೇ
ಉಳಿಯುವಂತೆ ಮಾಡಿದ್ದಾರೆ ಎನ್ನಲಾಗಿದೆ.

Advertisement

ಸಿಎಂಯಿಂದ ಸಚಿವರ ತರಾಟೆ
ಸರ್ಕಾರದ ಸಚಿವರುಗಳ ನಡುವಿನ ಗೊಂದಲ, ಪೊಲೀಸರು ಹಾಗೂ ಆದೇಶ  ಮಾಡುವವರ ನಡುವೆ ಸಂವಹನದಕೊರತೆಯಿಂದ ಕಾರ್ಮಿಕರು ನಗರದಾದ್ಯಂತ ಬಸ್‌ ಹಾಗೂ ರೈಲು
ಸೇವೆಗಾಗಿ ತಿರುಗಾಡುವಂತಾಯಿತು. ಈ ಬೆಳವಣಿಗೆಯಿಂದ ಬೇಸರಗೊಂಡ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಸಂಜೆಯೇ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಮಿಕರ ಗಲಾಟೆ ಹಿನ್ನೆಲೆಯಲ್ಲಿ ಸಚಿವರಾದ ಆರ್‌. ಅಶೋಕ್‌ ಹಾಗೂ ಲಕ್ಷ್ಮಣ ಸವದಿ ಅವರನ್ನು ಕರೆಯಿಸಿ ಕಾರ್ಮಿಕರನ್ನು ಕಳುಹಿಸುವಲ್ಲಿ ಆಗುತ್ತಿರುವ ಗೊಂದಲಕ್ಕೆ ಆಕ್ರೋಶ ವ್ಯಕ್ತಪಡಿಸಿ, ಕಾರ್ಮಿಕರು ಗುಳೇ ಹೋಗದಂತೆ ವ್ಯವಸ್ಥೆ ಮಾಡುಲು ಸೂಚಿಸಿದ್ದಾರೆ ಎನ್ನಲಾಗಿದೆ.

11 ಕಾರ್ಮಿಕರಲ್ಲಿ ಜ್ವರ
ಮಾದವಾರದಲ್ಲಿ ಬೀಡುಬಿಟ್ಟಿದ್ದ ಕಾರ್ಮಿಕರ ಪೈಕಿ 11 ಜನರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಉಳಿದವರಲ್ಲಿ ಆತಂಕ ಸೃಷ್ಟಿಸಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ಕಾರ್ಮಿಕರನ್ನು ಎರಡು
ಆ್ಯಂಬುಲೆನ್ಸ್‌ ಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರುವವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ 11 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ವಿಜಯೇಂದ್ರ ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲ, ಅವರೊಂದಿಗೆ ಸಂಪರ್ಕದಲ್ಲಿರುವವರ ಮೇಲೆ
ನಿಗಾ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next