Advertisement

ಪಾಲಿಕೆಯ ಹಲವು ಸೇವೆ ಆ್ಯಪ್‌ನಲ್ಲಿ ಲಭ್ಯ!

02:10 PM Sep 04, 2022 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ಈಗಾಗಲೇ ಡಿಜಿಟಲ್‌ನತ್ತ ಮುಖ ಮಾಡಿದ್ದು, ಕೆಲವು ಸೇವೆಗಳನ್ನು ಈಗಾಗಲೇ ಆನ್‌ಲೈನ್‌ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಇದೀಗ ಆ್ಯಪ್‌ ಮುಖೇನವೂ ವಿವಿಧ ಸೇವೆಗಳನ್ನು ಪರಿಚಯಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಸ್ಮಾರ್ಟ್‌ಸಿಟಿಯಿಂದ ಈಗಾಗಲೇ “ಒನ್‌ ಟಚ್‌ ಮಂಗಳೂರು’ ಎಂಬ ಪ್ರತ್ಯೇಕ ಆ್ಯಪ್‌ ರೂಪುಗೊಂಡಿದ್ದು, ಅದರಲ್ಲಿ ಮುಂದಿನ ಕೆಲವು ದಿನಗಳಲ್ಲಿ ಜನನ-ಮರಣ ಪ್ರಮಾಣಪತ್ರ, ಪಾಲಿಕೆ ವ್ಯಾಪ್ತಿ ಜಾಹೀರಾತು ಪರವಾನಿಗೆ, ಆಸ್ತಿ ತೆರಿಗೆ ಹಣ ಪಾವತಿ, ಉದ್ದಿಮೆ ಪರವಾನಿಗೆ ನವೀಕರಣ ಸಹಿತ ವಿವಿಧ ಸೇವೆಗಳನ್ನು ಆ್ಯಪ್‌ನಲ್ಲಿ ತರಲು ಯೋಜನೆ ರೂಪಿಸಲಾಗಿದೆ. ಈ ತಿಂಗಳೊಳಗೆ ಈ ಎಲ್ಲ ಸೇವೆಗಳು ಸಾರ್ವಜನಿಕರಿಗೆ ಆ್ಯಪ್‌ನಲ್ಲಿ ಸಿಗುವ ನಿರೀಕ್ಷೆ ಇದೆ.

ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್‌, ಉದ್ದಿಮೆ ಪರವಾನಿಗೆ, ಆಸ್ತಿ ತೆರಿಗೆ ಸೇವೆಯನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಆದರೆ ಈವರೆಗೆ ಆ್ಯಪ್‌ನಲ್ಲಿ ಈ ಎಲ್ಲ ಸೇವೆ ಇರಲಿಲ್ಲ. ಇಂದಿನ ಅಗತ್ಯಕ್ಕೆ ತಕ್ಕಂತೆ ಆ್ಯಪ್‌ ವ್ಯವಸ್ಥೆಗೂ ಒಗ್ಗಿಕೊಳ್ಳಲು ನಿರ್ಧರಿಸಲಾಗಿದೆ. ಅದೇ ರೀತಿ ಈ ಆ್ಯಪ್‌ ಮೂಲಕ “ಮಂಗಳೂರಿನಲ್ಲಿ ಇವತ್ತು ನೀರಿಲ್ಲ, ವಿದ್ಯುತ್‌ ಇಲ್ಲ, ಕಸ ಸಂಗ್ರಹಕ್ಕೆ ಬರುವುದಿಲ್ಲ, ನಾಳೆ ಒಣಕಸ ಸಂಗ್ರಹಿಸುತ್ತೇವೆ’ ಸಹಿತ ನಾನಾ ರೀತಿಯ ಸಾರ್ವಜನಿಕ ಮಾಹಿತಿಗಳು ಮಂಗಳೂರು ಜನರ ಮೊಬೈಲ್‌ಗೆ ಬರಲಿದೆ.

ಅದೇ ರೀತಿ, ವಿವಿಧ ಸೌಲಭ್ಯಗಳು ದೊರೆಯಲಿದೆ. ಸಿಟಿ ಗೈಡ್‌, ಎಮರ್ಜೆನ್ಸಿ ಸರ್ವಿಸ್‌, ಸೌಲಭ್ಯಗಳ ಮಾಹಿತಿ, ಪಾರ್ಕಿಂಗ್‌ ಸ್ಥಳಗಳು, ಪಾಸ್‌ಪೋರ್ಟ್‌ ಪರಿಶೀಲನೆ, ಡ್ರೈವಿಂಗ್‌ ಲೈಸೆನ್ಸ್‌ ವಿವರ, ರಸ್ತೆಗಳ ಮಾಹಿತಿ, ನೀರಿನ ಸೌಲಭ್ಯದ ಮಾಹಿತಿ, ಉದ್ದಿಮೆ ಮಾಹಿತಿ, ಪಡಿತರ ವಿವರ, ಮಹಿಳಾ ವಾಣಿ, ಆದಾಯ ವಿವರಗಳು, ಮತದಾರರ ಗುರುತಿನ ಚೀಟಿ, ನಗರ ಪ್ರದಕ್ಷಿಣೆ, ಆರ್‌ಟಿಒ ದಂಡಗಳು, ಕಾಣೆಯಾದವರ ಮಾಹಿತಿ, ಸಾರ್ವಜನಿಕ ಅಹವಾಲು, ವಿಚಾರಣೆ, ದಂಡ ಕಟ್ಟುವ ವಿಧಾನಗಳು, ಉದ್ಯೋಗ ವಿವರಗಳು, ಆಸ್ಪತ್ರೆ ಹಾಗೂ ಆರೋಗ್ಯ ವಿವರಗಳು ಇದೇ ಒನ್‌ ಟಚ್‌ ಮಂಗಳೂರು ಮೊಬೈಲ್‌ ಆ್ಯಪ್‌ ನಲ್ಲಿ ಬರುವ ಸಾಧ್ಯತೆ ಇದೆ.

ಆ್ಯಪ್‌ನಲಿ 285 ಬಸ್‌ಗಳ ಮಾಹಿತಿ

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸಿಟಿ, ಕೆಎಸ್ಸಾರ್ಟಿಸಿ ನರ್ಮ್ ಬಸ್‌ ಗಳ ಮಾಹಿತಿಗಳಿನ್ನು ಆ್ಯಪ್‌ನಲ್ಲಿ ನೋಡಬಹುದು. ಒನ್‌ ಟಚ್‌ ಮಂಗಳೂರು ಆ್ಯಪ್‌ ಮೂಲಕ ನಗರದಲ್ಲಿ ಸಂಚರಿಸುವ 250 ಸಿಟಿ ಬಸ್‌ ಮತ್ತು 35 ನರ್ಮ್ ಬಸ್‌ಗಳ ಮಾಹಿತಿ ದೊರಕಲಿದೆ. ಈ ನಿಟ್ಟಿನಲ್ಲಿ ಎಲ್ಲ ಬಸ್‌ಗಳಲ್ಲಿ ಜಿಪಿಎಸ್‌ ಅಳವಡಿಸುವಂತೆ ಜಿಲ್ಲಾಡಳಿತ ಈಗಾಗಲೇ ಬಸ್‌ ಮಾಲಕರಿಗೆ ಸೂಚನೆ ನೀಡಿದ್ದು, ಸದ್ಯ 85 ಸಿಟಿ ಮತ್ತು 10 ನರ್ಮ್ ಬಸ್‌ಗಳಲ್ಲಿ ಜಿಪಿಎಸ್‌ ಕಾರ್ಯನಿರ್ವಹಿಸುತ್ತಿದ್ದು, ಬಸ್‌ ಯಾವ ಕಡೆ ಸಂಚರಿಸುತ್ತಿದೆ, ಯಾವಾಗ ನಿಲ್ದಾಣಕ್ಕೆ ಆಗಮಿಸುತ್ತದೆ ಮುಂತಾದ ಮಾಹಿತಿಗಳನ್ನು ಪಡೆಯಬಹುದು ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು.

ಒಂದೆಡೆ ವಿವಿಧ ಸೇವೆ: ಪಾಲಿಕೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಒಂದೇ ಕಡೆಯಲ್ಲಿ ನೀಡುವ ಉದ್ದೇಶದಿಂದ ಡಿಜಿಟಲ್‌ ಆ್ಯಪ್‌ ಅನ್ನು ಪರಿಚಯಿಸಲಾಗುತ್ತಿದೆ. ಪಾಲಿಕೆ ಈಗಾಗಲೇ ಡಿಜಿಟಲ್‌ ವ್ಯವಸ್ಥೆಯತ್ತ ಮುಖ ಮಾಡಿದ್ದು, ಹಲವು ಸೇವೆ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಈಗ ಮತ್ತಷ್ಟು ಸೇವೆ “ಒನ್‌ ಟಚ್‌ ಮಂಗಳೂರು’ ಆ್ಯಪ್‌ನಲ್ಲಿಯೂ ಸಿಗುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ. –ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next