Advertisement

ಹಲವು ದಾಖಲೆ ಬರೆದ ಮಹಾಮಳೆ!

03:27 PM Nov 19, 2019 | Suhan S |

ಶಿವಮೊಗ್ಗ: ಕಳೆದ 50 ವರ್ಷದಲ್ಲೇ ಇಂತಹ ಮಳೆಯಾಗಿಲ್ಲ ಎಂಬ ಮಾತುಗಳು ಈ ವರ್ಷ ಅಲ್ಲಲ್ಲಿ ಕೇಳಿ ಬರುತ್ತಿವೆ. ಇಂತಹ ಮಹಾಮಳೆ ಈ ಬಾರಿ ರಾಜ್ಯದಲ್ಲಿ ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿವೆ.

Advertisement

ಲಕ್ಷಾಂತರ ಜನರ ನೋವಿಗೆ ಕಾರಣವಾದ ಮಳೆ ರಾಜ್ಯದ ಯಾವ ಮೂಲೆಯಲ್ಲಿ ತನ್ನ ಆರ್ಭಟ ಮೆರೆದಿದೆ ಎಂಬ ಮಾಹಿತಿ ಇಲ್ಲಿದೆ. ಮುಂಗಾರು ಪೂರ್ವ ಮಳೆ ವಿಫಲವಾಗಿದ್ದರಿಂದ ರೈತರು ಆತಂಕಗೊಂಡಿದ್ದರು. ಜೂನ್‌ನಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ಜುಲೈ 15 ಕಳೆದರೂ ಆರಂಭವಾಗಿರಲಿಲ್ಲ. ಜುಲೈ ಅಂತ್ಯಕ್ಕೆ ಬಂದ ಮಳೆ ಕೊಂಚ ನಿರಾಳ ಭಾವ ಮೂಡಿಸಿತು. ಆಗಸ್ಟ್‌ ಮೊದಲ ವಾರದಲ್ಲಿ ಆರಂಭವಾದ ಮಳೆ ಕೇವಲ ಒಂದು ವಾರದಲ್ಲೇ ಹಲವು ದಾಖಲೆಗಳನ್ನು ಸೃಷ್ಟಿಸಿತು. ಆರಿದ್ರಾ ಮಳೆ ಹೊಡೆತಕ್ಕೆ ಲಕ್ಷಾಂತರ ಜನ ಬೀದಿಗೆ ಬರುವಂತಾಯಿತು. ಸಾವಿರಾರು ಜನ ಮನೆ, ಆಸ್ತಿಪಾಸ್ತಿ ಕಳೆದುಕೊಂಡರು. ನೂರಾರು ಜನ ಪ್ರಾಣ ಕಳೆದುಕೊಂಡರು. ಮಳೆ ಮುಗಿದು ಮೂರು ತಿಂಗಳಾದರೂ ಸಂಕಷ್ಟಗಳುಬಗೆಹರಿದಿಲ್ಲ.

ಮಾವಿನಕುರ್ವದಲ್ಲಿ ದಾಖಲೆ ಮಳೆ: 2019ರ ಮಾನ್ಸೂನ್‌ ಮಾರುತಗಳಿಂದ ಈ ಬಾರಿ ಅತಿ ಹೆಚ್ಚು ಮಳೆಯಾಗಿರುವುದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಹೋಬಳಿಯಲ್ಲಿ. ಜನವರಿ 1ರಿಂದ ಸೆಪ್ಟೆಂಬರ್‌ 18ರವರೆಗೆ ಇಲ್ಲಿ 5975 (3539 ಮಿಮೀ ವಾಡಿಕೆ) ಮಿಮೀ ಮಳೆಯಾಗಿದ್ದು, ವಾಡಿಕೆಗಿಂತಹೆಚ್ಚು ಮಳೆ ಸುರಿದಿದೆ. ಸೆಪ್ಟೆಂಬರ್‌ ಅಂತ್ಯಕ್ಕೆ ಕೊನೆಯಾಗಬೇಕಿದ್ದ ಮುಂಗಾರು ಮಾರುತಗಳು ಅಕ್ಟೋಬರ್‌ನಲ್ಲೂ ಮುಂದುವರಿದಿದ್ದರಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿ ದಾಖಲೆಯಿಂದ ಕೊಂಚದರಲ್ಲೇ ಮಿಸ್‌ ಆಗಿದೆ. ಸೆಪ್ಟೆಂಬರ್‌ ಕೊನೆವರೆಗೂ ಮುಂದಿದ್ದ ಕರೂರು ಹೋಬಳಿ ಅಕ್ಟೋಬರ್‌ನಲ್ಲಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದೆ.

ಸೆಪ್ಟೆಂಬರ್‌ ಕೊನೆವರೆಗೆ ಮಾವಿನಕುರ್ವದಲ್ಲಿ 5464 ಮಿಮೀ, ಕರೂರಿನಲ್ಲಿ 5496 ಮಿಮೀ ಮಳೆಯಾಗಿತ್ತು. ಅಕ್ಟೋಬರ್‌ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಮಾವಿನಕುರ್ವ ಪ್ರಥಮ ಸ್ಥಾನ ಪಡೆದಿದೆ. ಕರೂರು ಹೋಬಳಿಯಲ್ಲಿ ಸೆ.18ರವರೆಗೆ 5793 ಮಿಮೀ ಮಳೆಯಾಗಿದೆ. (3927 ಮಿಮೀ ವಾಡಿಕೆ).ಅದೇ ರೀತಿ ಸಾಗರ ತಾಲೂಕಿನ ಬಾರಂಗಿಯಲ್ಲಿ 5455 ಮಿಮೀ (3158 ಮಿಮೀ ವಾಡಿಕೆ), ಕಾರ್ಕಳ ತಾಲೂಕಿನ ಅಜೇಕರ್‌ 5759 ಮಿಮೀ (5689 ಮಿಮೀ ವಾಡಿಕೆ). ಕುಂದಾಪುರ ಹೋಬಳಿಯಲ್ಲಿ 5658 ಮಿಮೀ (5664 ಮಿಮೀ), ಬೈಂದೂರು 5658 ಮಿಮೀ (4013 ಮಿಮೀ), ಅಂಕೋಲ 5704 ಮಿಮೀ (3950 ಮಿಮೀ), ಸಿದ್ದಾಪುರ ತಾಲೂಕಿನ ಕೊಡಕಣಿ 5706 ಮಿಮೀ (2919 ಮಿಮೀ). ಸೂಪಾದ ಕ್ಯಾಸಲ್‌ರಾಕ್‌ 5635 ಮಿಮೀ (2309 ಮಿಮೀ), ಹೊನ್ನಾವರ 5537 ಮಿಮೀ (3630 ಮಿಮೀ) ಮಳೆಯಾಗಿದ್ದು, ಅತಿ ಹೆಚ್ಚು ಮಳೆ ದಾಖಲಾದ ಹೋಬಳಿಗಳಾಗಿವೆ. ವಾಡಿಕೆಗಿಂತ ಹೆಚ್ಚು ಮಳೆಯಾಗದಿದ್ದರೂ ತಿಂಗಳು ಪೂರ್ತಿ ಬರಬೇಕಿದ್ದ ಮಳೆ ಒಂದೇ ವಾರದಲ್ಲಿ ಸುರಿದ ಕಾರಣ ಹಲವು ಕಡೆ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿತ್ತು.

ಗರಿಷ್ಠ-ಕನಿಷ್ಟ: ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ದಾಖಲೆಯಾದರೆ ದುಪ್ಪಟ್ಟು ಮಳೆಯಾಗಿರುವ ಹೋಬಳಿ ಕೂಡ ಇವೆ. ವಿಶೇಷವೆಂದರೆ ಬಯಲು ಸೀಮೆಯಲ್ಲೂ ದುಪ್ಪಟ್ಟು ಮಳೆಯಾಗಿದೆ. ಸೂಪಾ ಹೋಬಳಿ ಕ್ಯಾಸಲ್‌ರಾಕ್‌ನಲ್ಲಿ 5635 ಮಿಮೀ (2309 ಮಿಮೀ ವಾಡಿಕೆ) ಮಳೆಯಾಗಿದ್ದು ವಾಡಿಕೆಗಿಂತ ಶೇ.144ರಷ್ಟು ಹೆಚ್ಚು ಮಳೆಯಾಗಿದೆ. ಶಿರಸಿ ತಾಲೂಕಿನ ಸಂಪಕಂಡದಲ್ಲಿ 5219

Advertisement

ಮಿಮೀ (2579 ವಾಡಿಕೆ) ಮಳೆಯಾಗಿದ್ದು, ಶೇ.101ರಷ್ಟು ಹೆಚ್ಚುವರಿ ಮಳೆಯಾಗಿದೆ. ಅದೇ ರೀತಿ ಕೊಡಗು ವಿರಾಜಪೇಟೆಯ ಹುಡಕೆರೆ 4780 ಮಿಮೀ (2340) ಶೇ.104, ಕಡೂರು ತಾಲೂಕಿನ ಪಂಚನಹಳ್ಳಿ 1160 ಮಿಮೀ (499) ಶೇ.132, ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ಹೋಬಳಿಯಲ್ಲಿ 1556 ಮಿಮೀ (712 ವಾಡಿಕೆ) ಶೇ.119, ಛಬ್ಬಿ ಹೋಬಳಿಯಲ್ಲಿ 1429 ಮಿಮೀ (709) ಶೇ.102ರಷ್ಟು, ಖಾನಾಪುರ ತಾಲೂಕಿನ ಜಂಬೋತಿ 3995 ಮಿಮೀ (1955) ಶೇ.104ರಷ್ಟು, ಹೊಸದುರ್ಗ ತಾಲೂಕಿನ ಶ್ರೀರಾಂಪುರ 1033 (505 ವಾಡಿಕೆ) ಮಿಮೀ ಮಳೆಯಾಗಿದ್ದು, ಶೇ.104ರಷ್ಟು ಹೆಚ್ಚುವರಿ ಮಳೆಯಾಗಿದೆ.

ಅತಿ ಹೆಚ್ಚು ಮಳೆಯಾದರೆ ಅತಿ ಕಡಿಮೆ ಮಳೆ ದಾಖಲಾದ ಹೋಬಳಿಗಳೂ ರಾಜ್ಯದಲ್ಲಿವೆ. ರಾಯಚೂರು ಜಿಲ್ಲೆಯ ಚಂದ್ರಬಂಡದಲ್ಲಿ ವಾಡಿಕೆಗಿಂತ ಶೇ.41ರಷ್ಟು ಮಳೆ ಕೊರತೆಯಾಗಿದ್ದು, 740 ಮಿಮೀ ವಾಡಿಕೆಗೆ 437 ಮಿಮೀ ಮಳೆ ದಾಖಲಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಐಜೇರಿಯಲ್ಲಿ ಶೇ.44ರಷ್ಟು ಮಳೆ ಕೊರತೆಯಾಗಿದೆ. 828 ಮಿಮೀ ವಾಡಿಕೆಗೆ 467 ಮಿಮೀ ಮಳೆಯಾಗಿದೆ. ಶಹಾಪುರ ತಾಲೂಕಿನ ಗೋಗಿ ಹೋಬಳಿಯಲ್ಲೂ ಶೇ.44ರಷ್ಟು ಮಳೆ ಕೊರತೆಯಾಗಿದೆ. 845 ಮಿಮೀ ವಾಡಿಕೆಗೆ 477 ಮಿಮೀ ಮಳೆಯಾಗಿದೆ.

 

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next