ವಾಷಿಂಗ್ಟನ್: ಫಲಿತಾಂಶ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೊಮ್ಮುತ್ತಿದ್ದಾಗಲೇ, ಅಮೆರಿಕದ ಹಲವೆಡೆ ಪ್ರತಿಭಟನೆ ಕಿಚ್ಚು ಹೊತ್ತಿಕೊಂಡಿದೆ. ಶ್ವೇತಭವನ ಮುಂಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಟ್ರಂಪ್- ಬೈಡೆನ್ ಬೆಂಬಲಿಗರು ಮುಖಾಮುಖೀಯಾಗಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. 16 ರಾಜ್ಯಗಳಲ್ಲಿ ಸಂಘರ್ಷ ನಡೆಯುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ “ನ್ಯಾಷನಲ್ ಗಾರ್ಡ್’ ಭಾರೀ ಬಂದೋಬಸ್ತ್ ನೀಡಿದ್ದಾರೆ. ಬೀದಿಗಳಲ್ಲಿ ಕಾನೂನುಬಾಹಿರವಾಗಿ ಗುಂಪುಗೂಡುವುದು, ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ನಿರ್ಬಂಧಿಸಲಾಗಿದ್ದರೂ, ಹಲವೆಡೆ ಪರಿಸ್ಥಿತಿ ಉದ್ವಿಗತ್ನೆಗೆ ತಿರುಗಿದೆ.
ವೈಟ್‌ಹೌಸ್ ಮುಂದೆ ಸಂಘರ್ಷ: ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಸವಿರುವ ಶ್ವೇತಭವನದ ಸುತ್ತ ತಾತ್ಕಾಲಿಕ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ವೈಟ್‌ಹೌಸ್ ಹೊರ ಭಾಗದಲ್ಲಿ ಫಲಿತಾಂಶ ವೀಕ್ಷಣೆಗೆ ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ವೀಕ್ಷಣಾನಿರತ ಟ್ರಂಪ್ ಬೆಂಬಲಿಗರು ಮತ್ತು ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್‌ಎಂ) ಸಂಘಟನೆ ಸದಸ್ಯರ ನಡುವೆ ಮುಖಾಮುಖೀ ಸಂಘರ್ಷ ಏರ್ಪಟ್ಟಿದ್ದು, ಮೂವರನ್ನು ಬಂಧಿಸಲಾಗಿದೆ.
ಎಲ್ಲ ಜೀವಗಳೂ ಮುಖ್ಯ: ಬಿಎಲ್‌ಎಂ ಸದಸ್ಯರ ಮುಂದೆ ಟ್ರಂಪ್ ಸದಸ್ಯನೊಬ್ಬ, “ಎಲ್ಲ ಜೀವಗಳೂ ಮುಖ್ಯ. ಬಿಳಿ ಜೀವಿಗಳೂ ಮುಖ್ಯ’ ಎಂದು ಜೋರಾಗಿ ಕೂಗಿದ್ದರಿಂದ ಅಲ್ಲಿದ್ದ ಕಪ್ಪು ಜನಾಂಗೀಯರು ಕೆರಳಿದ್ದರು. ಪ್ರತಿಭಟನಾನಿರತನೊಬ್ಬ ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಯತ್ನಿಸಿದ್ದಾಗ, ಗುಂಪೊಂದು ಆತನಿಗೆ ಥಳಿಸಿ, ನೆಲಕ್ಕುರುಳಿಸಿದೆ. “ಮೇಕ್ ಅಮೆರಿಕ ಗ್ರೇಟ್ ಎಗೇನ್’ ಎಂಬ ಸ್ಲೋಗನ್‌ನ ಟಿಷರ್ಟ್ ಧರಿಸಿದ ವ್ಯಕ್ತಿ, ಎದುರಾಳಿ ಬಣದ ಬೆಂಬಲಿಗರನ್ನು ಕುಸ್ತಿಗೆ ಆಹ್ವಾನಿಸುತ್ತಿದ್ದ ವಿಡಿಯೊ ವೈರಲ್ ಆಗಿದೆ. ಪ್ರತಿಭಟನಾಸ್ತೋಮ ಮತ್ತು ಪೊಲೀಸರ ನಡುವಿನ ಸಂಘರ್ಷ ಮಧ್ಯರಾತ್ರಿವರೆಗೂ ಮುಂದುವರಿದಿದೆ. ಫಲಿತಾಂಶ ಸ್ಪಷ್ಟವಾಗಿ ಹೊರಬೀಳುವ ತನಕ ವೈಟ್‌ಹೌಸ್‌ಗೆ ಭದ್ರತೆ aಮುಂದುವರಿಯಲಿದೆ.
ಎಲ್ಲೆಲ್ಲಿ? ಹೇಗಿದೆ ಪರಿಸ್ಥಿತಿ?: ಮಿನ್ನೀಪೊಲೀಸ್, ಪೋರ್ಟ್‌ಲ್ಯಾಂಡ್‌ಗಳಲ್ಲಿ ಪಟಾಕಿ ಸಿಡಿಸಿದ, ಪ್ರತಿಭಟನೆ ನಡೆಸಿದ ಕೆಲವರನ್ನು ಬಂಧಿಸಲಾಗಿದೆ. ಸಿಯಾಟೆಲ್‌ನಲ್ಲಿ ರಸ್ತೆಗೆ ಮಾರಕಾಸ್ತ್ರ ಎಸೆದ ದುಷ್ಕರ್ಮಿ ಸೇರಿದಂತೆ 8 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಲಾಸ್‌ಏಂಜಲೀಸ್‌ನಲ್ಲಿ ರಸ್ತೆತಡೆಗೆ ಯತ್ನಿಸಿದ ಗುಂಪನ್ನು ಪೊಲೀಸರು ಚದುರಿಸಿದ್ದಾರೆ.