ಬೆಂಗಳೂರು: ಗಿಡ ನೆಟ್ಟು ಪೋಷಿಸುವುದು ಸರ್ಕಾರದ ಕೆಲಸ ಮಾತ್ರವಲ್ಲ, ಅದರಲ್ಲಿ ಸಾರ್ವಜನಿಕರ ಪಾತ್ರವೂ ಹೆಚ್ಚಿದೆ ಎಂದು ತಿಳಿಸಲು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ಅಸೋಸಿಯೇಷನ್ ವೆಲ್‌ಫೇರ್ ಫೆಡರೇಶನ್ ಮುಂದಾಗಿದೆ.
ಹೊರಮಾವು ಕೆರೆ 30 ಎಕರೆ ಪ್ರದೇಶದಲ್ಲಿದ್ದು, ಫೆಡರೇಶನ್‌ನ ಸದಸ್ಯರು ಕಳೆದ 2 ವರ್ಷದಿಂದ ಕೆರೆ ಆವರಣದಲ್ಲಿ 2500ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಅಲ್ಲದೇ ಸ್ಥಳೀಯ ಜನರನ್ನು ಒಂದೆಡೆ ಸೇರಿಸಿ ಜಾಗೃತಿ ಮೂಡಿಸುವ ಮೂಲಕ ನೆಟ್ಟ ಒಂದೊಂದು ಗಿಡದ ನಿರ್ವಹಣೆ ಜವಾಬ್ದಾರಿ ನೀಡುತ್ತಿದ್ದು, ಪ್ರಸ್ತುತ ಕೆರೆ ಸುತ್ತಲಿನ ಪರಿಸರ ಹಸಿರುಮಯವಾಗುತ್ತಿದೆ.
ವಾಟ್ಸ್‌ಆ್ಯಪ್ ಗ್ರೂಪ್: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ಅಸೋಸಿಯೇಷನ್ ವೆಲ್‌ಫೇರ್ ಫೆಡರೇಶನ್ ಸದಸ್ಯರೆಲ್ಲರೂ ಹೊರಮಾವು ಕೆರೆ ಉಳಿಸಿ ಎಂಬ ಶೀರ್ಷಿಕೆಯಡಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೊಂಗೆ, ಮಹಾಗನಿ, ಕಾಡುಬಾದಾಮಿ, ನೆಲ್ಲಿ, ನೇರಳೆ, ಚೆರ್ರಿ, ಬೇವು ಸೇರಿ ವಿವಿಧ ತಳಿಗಳ ಗಿಡಗಳನ್ನು ನೆಟ್ಟಿದ್ದಾರೆ.
ಗಿಡ ನೆಡುವ ಕಾರ್ಯಕ್ರಮ: ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಅಧಿಕ ಮಳೆ ಬರುವುದರಿಂದ ವರ್ಷದ 4 ತಿಂಗಳು ಮಾತ್ರ ಗಿಡಗಳನ್ನು ನೆಡಲಾಗುತ್ತಿದೆ. ವರ್ಷಪೂರ್ತಿ ನೆಟ್ಟ ಗಿಡಗಳನ್ನು ಪೋಷಿಸಲಾಗುವುದು. ಮುಖ್ಯವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ, ಪೋಷಕರಿಗೂ ಜಾಗೃತಿ ಮೂಡುತ್ತದೆ ಎಂಬ ಸದುದ್ದೇಶದಿಂದ ಹೊರಮಾವು ಸುತ್ತಲಿನ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಫೆಡರೇಶನ್‌ನ ಅರುಣ್ ಮೆನನ್.
ಅಂತರ್ಜಲ ಮಟ್ಟ ಹೆಚ್ಚಲಿದೆ: ತಿಂಗಳಿಗೆ ಎರಡು ಬಾರಿ ಹೊರಮಾವು ಕೆರೆ ಬಳಿ ಗಿಡಗಳನ್ನು ನೆಡಲಾಗುತ್ತಿದೆ. ಈ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಕೈ ಜೋಡಿಸಿದ್ದು, ಅರಣ್ಯ ಇಲಾಖೆ ಉಚಿತವಾಗಿ ಗಿಡಗಳನ್ನು ನೀಡಿದೆ. ಸ್ಥಳೀಯರಲ್ಲಿ ಗಿಡ ನೆಡುವ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಜನರು ಗಿಡಗಳನ್ನು ದತ್ತು ಪಡೆಯುತ್ತಿದ್ದಾರೆ. ಕೆರೆ ಸುತ್ತಲೂ ಓಡಾಡುವವರು ಗಿಡಗಳಿಗೆ ನೀರು ಹಾಕುತ್ತಿದ್ದು, ಇನ್ನು ಎರಡೂ¾ರು ವರ್ಷಗಳಲ್ಲಿ ಗಿಡಗಳು ಎತ್ತರಕ್ಕೆ ಬೆಳೆಯುತ್ತವೆ. ಕೆರೆ ಸುತ್ತಲಿನ ಪ್ರದೇಶ ಹಸಿರುಮಯವಾಗಲಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಸ್ವಯಂಸೇವಕ ನಾಗೇಶ್ವರ ರಾವ್ ತಿಳಿಸಿದರು.
ಕೆರೆ ಸೇರುತ್ತಿದೆ ಒಳಚರಂಡಿ ನೀರು!: ಸುತ್ತಲಿನ ಬಡಾವಣೆಗಳ ಒಳಚರಂಡಿ ನೀರು ಹೊರಮಾವು ಕೆರೆಗೆ ಸೇರುತ್ತಿದ್ದು, ಕೆರೆ ಸೌಂದರ್ಯ ಹಾಳಾಗುತ್ತಿದೆ. ಹಾಗೇ ಕೆರೆಯಲ್ಲಿ ಹೂಳು ತುಂಬಿದ್ದು, ಬೇಲಿಗಳು ಬೆಳೆದಿವೆ. ಪಾಲಿಕೆ ಅಧಿಕಾರಿಗಳು ಆದ್ಯತೆ ಮೇರೆಗೆ ಕೆರೆಯನ್ನು ಪುನಶ್ಚೇತನಗೊಳಿಸಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.