ಮೈಸೂರು: ಲೋಕಸಭಾ ಚುನಾವಣೆಯ ಹೊಸ್ತಿ ಲಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಲಿದೆ. ಮುಂದಿನ ಮೂರು ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆಯವ್ಯಯದಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಯಾವ ಕೊಡುಗೆ ನೀಡಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿಸಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು, ಕಳೆದ ನಾಲ್ಕೂ ಮುಕ್ಕಾಲು ವರ್ಷಗಳಲ್ಲಿ ಎರಡೂ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ರಸ್ತೆ-ರೈಲು ಸಂಪರ್ಕ ಉತ್ತಮಪಡಿಸುವಿಕೆ, ವಿಮಾನಯಾನ ಸೌಲಭ್ಯ ಒದಗಿಸಲು ಕ್ರಮವಹಿಸಿದ್ದಾಗಿ ಹೇಳುತ್ತಾರೆ.
ರಾಜಧಾನಿ ಬೆಂಗಳೂರಿನ ನಂತರ ಪ್ರವಾಸೋ ದ್ಯಮ ದೃಷ್ಟಿಯಿಂದ ಎಲ್ಲರ ಚಿತ್ತ ಹರಿಯುವುದು ಮೈಸೂರಿನತ್ತ. ಆದರೆ, ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿ, ಬೃಹತ್ ಕೈಗಾರಿಕೆಗಳ ಸ್ಥಾಪನೆಗಳ ಮೂಲಕ ಉದ್ಯೋಗ ಸೃಷ್ಟಿ, ಆ ಮೂಲಕ ಯುವ ಜನತೆಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಗಟ್ಟಲುಕೆಲಸ ಮಾಡಲಿಲ್ಲ ಎಂಬ ದೂರುಗಳಿದೆ. ಈ ಬಾರಿಯಾದರೂ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಬೆಳೆಗಾರರ ಹಿತರಕ್ಷಣೆ, ಯುವಜನರಿಗೆ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮಕ್ಕೆ ಆದ್ಯತೆ ಸಿಗಬೇಕಿದೆ.
ಉದ್ಯೋಗ ಸೃಷ್ಟಿಸಿ: ಮೈಸೂರನ್ನು ಪಾರಂಪರಿಕ ನಗರಿ ಎಂದು ಘೋಷಿಸುವಂತೆ ಬಹಳ ವರ್ಷಗಳ ಬೇಡಿಕೆ ಇದೆ. ಆದರೆ, ಕಾರ್ಯಗತವಾಗುತ್ತಿಲ್ಲ. ಮೈಸೂರಿನಲ್ಲಿ 12 ಎಂಜಿನಿಯರಿಂಗ್ ಕಾಲೇಜು, 85 ಪದವಿ ಕಾಲೇಜು ಗಳಿದ್ದು ಪ್ರತಿ ವರ್ಷ ಸಾವಿರಾರು ಮಂದಿ ಎಂಜಿನಿಯರಿಂಗ್, ಪದವಿ ಪಡೆದು ಹೊರ ಬರುತ್ತಾರೆ. ಅವರಿಗೆ ಸ್ಥಳೀಯವಾಗಿ ಸೂಕ್ತ ಉದ್ಯೋಗ ದೊರೆಯದ ಕಾರಣ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ. ಇನ್ನು ಮೈಸೂರು ಪ್ರವಾಸಿಗರ ನೆಚ್ಚಿನ ತಾಣ. ಆದರೆ, ಪ್ರವಾಸಿಗರನ್ನು ಆಕರ್ಷಿಸಲು ಪೂರಕ ವಾತಾವರಣ ಸೃಷ್ಟಿಸುವ ಕೆಲಸ ಆಗಬೇಕಿದೆ. ರೈತರ ಹಿತದೃಷ್ಟಿಯಿಂದ ಸ್ಥಳೀಯವಾಗಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಕೇಂದ್ರಗಳು, ಮಾರುಕಟ್ಟೆ ಸ್ಥಾಪಿಸಬೇಕಾದ ಅಗತ್ಯತೆ ಇದೆ.
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು – ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗ ಕಾರ್ಯಾರಂಭದ ಜತೆಗೆ ವಿದ್ಯುದ್ದೀಕರಣ ಸೌಲಭ್ಯ ಕಲ್ಪಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ರೈಲುಗಳ ಸಂಚಾರ, ಮೈಸೂರು ರೈಲು ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಪ್ರಯಾಣಿಕ ಸ್ನೇಹಿ ವಾತಾವರಣ ನಿರ್ಮಿಸಿರು ವುದು ರೈಲು ಪ್ರಯಾಣಿಕರಿಗೆ ಸಂತಸ ತಂದಿದೆ. ಇದರ ಜತೆಗೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಗೆ ಇನ್ನಷ್ಟು ಹೊಸ ರೈಲುಗಳ ಘೋಷಣೆ ಯಾಗಲಿದೆಯೇ ಎಂಬುದನ್ನು ಕಾದು ನೋಡ ಬೇಕಿದೆ. ತಂಬಾಕು ಸೇರಿದಂತೆ ರೈತ ಬೆಳೆದ ಬೆಳೆಗಳ ಮೇಲೆ ಜಿಎಸ್‌ಟಿ ಹಾಕುವುದನ್ನು ತಪ್ಪಿಸಬೇಕು.
ಆಹಾರ ಭದ್ರತೆ: ಆಹಾರ ಭದ್ರತೆ, ಉದ್ಯೋಗ ಭದ್ರತೆ ಬಗ್ಗೆ ಮಾತನಾಡುವ ಸರ್ಕಾರಗಳು ಬೆಳೆ ಭದ್ರತೆ, ಕೃಷಿ ಉತ್ಪನ್ನಗಳಿಗೆ ದರ ಭದ್ರತೆ ಬಗ್ಗೆ ಮಾತನಾಡುವುದೇ ಇಲ್ಲ. ಬೆಳೆ ಭದ್ರತೆಯೇ ಇಲ್ಲದೆ ಆಹಾರ ಭದ್ರತೆ ಹೇಗೆ ಸಾಧ್ಯ?, ಡಾ. ಸ್ವಾಮಿನಾಥನ್ ವರದಿ ಜಾರಿಯಿಂದ ರೈತರಿಗೆ ಅನುಕೂಲವಾಗುತ್ತದೆ. ಬೆಳೆವಿಮೆ, ಬ್ಯಾರನ್ ವಿಮೆ, ಬೆಲೆ ಬಗ್ಗೆಯೂ ಸರ್ಕಾರ ಕಾಳಜಿವಹಿಸಬೇಕು ಎನ್ನುತ್ತಾರೆ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ.ಜವರೇಗೌಡ.
* ಗಿರೀಶ್ ಹುಣಸೂರು