Advertisement

ನಗರಾಭಿವೃದ್ಧಿ ಪ್ರಾಧಿಕಾರ ರಚನೆಗೆ ಹಲವು ವಿಘ್ನ!

02:39 PM Jul 19, 2022 | Team Udayavani |

ಗಂಗಾವತಿ: ಕಳೆದ 30 ವರ್ಷಗಳ ಹಿಂದೆ ರಚನೆಯಾಗಿರುವ ನಗರ ಯೋಜನಾ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿಸಿ ಗಂಗಾವತಿ ನಗರಾಭಿವೃದ್ಧಿ ಪ್ರಾಧಿಕಾರ ರಚಿಸುವ ಯತ್ನ ನಡೆದಿದ್ದು, ಹಲವು ವಿಘ್ನಗಳು ಎದುರಾಗಿವೆ.

Advertisement

ನಗರಾಭಿವೃದ್ಧಿ ಪ್ರಾಧಿಕಾರ ರಚಿಸಲು ಹಲವು ನಿಯಮಗಳಿವೆ. ನಗರದ ಜನಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚಿರಬೇಕು, ಕನಿಷ್ಟ ವಾರ್ಷಿಕ ಒಂದು ಕೋಟಿ ರೂ.ಗಳ ಲೇಔಟ್‌ ರಚನೆ ಮತ್ತು ಮನೆ ನಿರ್ಮಾಣದ ಶುಲ್ಕವನ್ನು ನಗರ ಯೋಜನಾ ಪ್ರಾಧಿಕಾರ ಸಂಗ್ರಹಿಸಬೇಕು. ಇಡೀ ನಗರ ಪ್ರದೇಶವನ್ನು ಪ್ರತಿವರ್ಷ ಸರ್ವೇ ಮಾಡಿ ಕಮರ್ಷಿಯಲ್‌, ಕೃಷಿ ವಲಯ ಹಾಗೂ ವಸತಿ ಪ್ರದೇಶ ಎಂದು ಗುರುತಿಸಿ ನಗರಾಭಿವೃದ್ಧಿಗೆ ಯೋಜನೆ ರೂಪಿಸಬೇಕಿನ್ನುವ ನಿಯಮವಿದೆ. ನಗರದ ಸರ್ವೇ ಮಾಡುತ್ತಿದ್ದ ಖಾಸಗಿ ಕಂಪನಿಯವರಿಗೆ ಹಣ ಪಾವತಿಸದ ಕಾರಣ ಸರ್ವೇ ಕಾರ್ಯ ಸ್ಥಗಿತವಾಗಿದೆ. ಪ್ರಸ್ತುತ ನಗರ ಯೋಜನಾ ಪ್ರಾಧಿಕಾರ ಸ್ಥಿತಿ ಶೋಚನೀಯವಾಗಿದೆ. ವಾರ್ಷಿಕ ಒಂದು ಅಥವಾ ಎರಡು ನೂತನ ಲೇಔಟ್‌ ರಚಿಸುತ್ತಿದ್ದು, ಇದರಲ್ಲಿ ಶೇ.60 ನಿವೇಶನ ಮಾರಾಟವಾದ ನಂತರ ಉಳಿದ ನಿವೇಶನ ಮಾರಾಟ ಮಾಡಲು ಹಲವು ವರ್ಷಗಳು ಬೇಕಿರುವುದರಿಂದ ಯೋಜನಾ ಪ್ರಾಧಿಕಾರಕ್ಕೆ ನಿಗದಿತ ಸಮಯಕ್ಕೆ ಶುಲ್ಕದ ರೂಪದ ಆದಾಯ ಬರುತ್ತಿಲ್ಲ. ಕಚೇರಿಯ ಸಿಬ್ಬಂದಿ ವೇತನ, ಕಚೇರಿ ಕಟ್ಟಡ ಬಾಡಿಗೆ ಪಾವತಿ ಸೇರಿ ಸ್ಥಳೀಯ ಖರ್ಚು ವೆಚ್ಚ ಮಾಡಲೂ ಸಹ ಹಣವಿಲ್ಲದ ಸ್ಥಿತಿ ಇದೆ. ನಗರದ ಜನಸಂಖ್ಯೆಗೆ ತಕ್ಕಂತೆ ನೂತನ ಲೇಔಟ್‌ ಗಳ ರಚನೆಯಾಗುತ್ತಿಲ್ಲ. ರಿಯಲ್‌ ಎಸ್ಟೇಟ್‌ ದಂಧೆ ಮಾಡುವ ವ್ಯಾಪಾರಿಗಳು ಲೇಔಟ್‌ಗಳ ಮೇಲೆ ಹಾಕಿದ ಬಂಡವಾಳ ಸೇರಿ ಲಾಭ ಪಡೆಯಲು ಆಗದ ಸ್ಥಿತಿ ಇದೆ.

ಹೊಸಪೇಟೆ, ಕೊಪ್ಪಳ ಮತ್ತು ಬಳ್ಳಾರಿ ನಗರಗಳಿಗೆ ಹೋಲಿಸಿದರೆ ಗಂಗಾವತಿಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಷ್ಟದಲ್ಲಿದೆ. ಪ್ರಸ್ತುತ ಅಕ್ಕಿ ಉದ್ಯಮ ಮಾತ್ರ ಇದ್ದು, ವಹಿವಾಟು ವೈಪರೀತ್ಯದಿಂದಾಗಿ ಆ ಉದ್ಯಮವೂ ನೆಲಕ್ಕಚ್ಚಿದೆ.

ಹಲವು ಸೌಲಭ್ಯಗಳು ಇರದೇ ಇರುವ ಕಾರಣದಿಂದ ಗಂಗಾವತಿಯ ಮಾರ್ಕೆಟ್‌ ವ್ಯವಹಾರ ನಷ್ಟದಲ್ಲಿದೆ. ವಿವಿಧ ಭಾಗದ ಜನರು ಉದ್ಯೋಗ ಸೇರಿ ವಿವಿಧ ವ್ಯವಹಾರ ಮಾಡಲು ಗಂಗಾವತಿಗೆ ಆಗಮಿಸಿದರೆ ಮಾತ್ರ ನಿವೇಶನ ಖರೀದಿಸುವ ಅಥವಾ ಮನೆ ನಿರ್ಮಿಸುವವರ ಸಂಖ್ಯೆ ಹೆಚ್ಚಾಗಬಹುದು. ಇದಕ್ಕೆ ಪೂರಕವಾಗಿ ನಗರ ಯೋಜನಾ ಪ್ರಾಧಿಕಾರದ ಆದಾಯವೂ ಹೆಚ್ಚಾಗುವ ಸಾಧ್ಯತೆ ಇದೆ.

ಅಕ್ರಮ ಲೇಔಟ್‌ಗಳಿಗೆ ಬ್ರೆಕ್‌: ನಗರದ ಜನಸಂಖ್ಯೆ ಸುಮಾರು 1.30 ಲಕ್ಷವಿದ್ದು ನಿತ್ಯವೂ ನಿವೇಶನ ಖರೀದಿ, ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ನಗರದ ಸುತ್ತ ನಗರ ಯೋಜನಾ ಪ್ರಾ ಧಿಕಾರದ ಪರವಾನಗಿ ಇಲ್ಲದ ಅನ ಧಿಕೃತ ಲೇಔಟ್‌ಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿದ್ದು, ಸಬ್‌ ರಜಿಸ್ಟರ್‌ ಕಚೇರಿಯಲ್ಲಿ ನೋಂದಣಿಯಾದರೂ ನಗರಸಭೆಯಲ್ಲಿ ಖಾತಾ ದಾಖಲೆಯಾಗುತ್ತಿಲ್ಲ. ಇದರಿಂದ ಅನಧಿಕೃತ ಲೇಔಟ್‌ಗಳಲ್ಲಿ ನಗರಸಭೆಯಿಂದ ಮೂಲಸೌಕರ್ಯ ಕಲ್ಪಿಸಲಾಗುತ್ತಿಲ್ಲ.

Advertisement

ಮೂರು ದಶಕಗಳಿಂದ ನಗರ ಯೋಜನಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ನಗರಾಭಿವೃದ್ಧಿ ಪ್ರಾಧಿಕಾರ ಎಂದು ಮೇಲ್ದರ್ಜೆಗೇರಿಸಲು ಆದಾಯ ಸೇರಿ ಹಲವು ನಿಯಮಗಳು ಅಡ್ಡಿಯಾಗುತ್ತಿವೆ. ಜತೆಗೆ ಅನ ಧಿಕೃತ ಲೇಔಟ್‌ಗಳ ರಚನೆ ಬಗ್ಗೆ ನಗರಸಭೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ಕಿ ಉದ್ಯಮ ಕುಸಿದಿದ್ದು, ವರ್ತಕರು ಅನ್ಯ ಉದ್ಯಮ ಸ್ಥಾಪನೆಗೆ ಹಿಂದೇಟು ಹಾಕುತ್ತಿದ್ದಾರೆ. ಸರಕಾರ ಗಂಗಾವತಿ-ಆನೆಗೊಂದಿ ಭಾಗವನ್ನು ಪ್ರವಾಸೋದ್ಯಮದ ಹಬ್‌ ಎಂದು ಘೋಷಣೆ ಮಾಡಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಉದ್ಯಮ ಹಾಗೂ ವ್ಯವಹಾರದಲ್ಲಿ ಚೇತರಿಕೆ ಕಂಡು ರಿಯಲ್‌ ಎಸ್ಟೇಟ್‌ ಉದ್ಯಮವು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. –ಮಹಾಲಿಂಗಪ್ಪ ಬನ್ನಿಕೊಪ್ಪ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next