ಬೆಂಗಳೂರು: ಈಶ್ವರಪ್ಪ ರಾಜೀನಾಮೆ ಘೋಷಣೆ ಬೆನ್ನಲ್ಲೇ ಬಿಜೆಪಿ ಸರಕಾರದ ಹಲವು ಸಚಿವರಿಗೆ ನಡುಕ ಶುರುವಾಗಿದ್ದು ಸಂಪುಟ ಪುನಾರಚನೆ ಸಂದರ್ಭದಲ್ಲಿ ಹಲವರ ತಲೆ ಉರುಳುವ ಸಾಧ್ಯತೆ ದಟ್ಟವಾಗಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಹಿಂದೆ ಪ್ರಧಾನಿಗೆ ಬರೆದಿರುವ ಪತ್ರ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಕೆಲ ಆಯಕಟ್ಟಿನ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಕಮಿಷನ್ ದಂಧೆಯ ಬಗ್ಗೆ ಆರೋಪಿಸಿದ್ದಾರೆ. ಕೆಲ ಸಚಿವರು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಒದಗಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ಬಿಜೆಪಿಯಲ್ಲೀಗ ‘ಹೊಸ ನೀರು, ಹೊಸ ನೀತಿ’ ಸೂತ್ರ; ಪಕ್ಷದ ಇಮೇಜ್ ಬದಲಾಯಿಸಲು ವರಿಷ್ಠರ ನಿರ್ಧಾರ
ಈಶ್ವರಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನವೂ ಸೇರಿದಂತೆ ಐದು ಖಾತೆಗಳು ಸದ್ಯಕ್ಕೆ ಲಭ್ಯವಿದೆ. ಅದರ ಜತೆಗೆ ಭ್ರಷ್ಟಾಚಾರ ಆರೋಪದಲ್ಲಿ ಖಾತೆ ಕಳೆದುಕೊಳ್ಳುವವರೂ ಸೇರಿದಂತೆ ಹತ್ತು ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಅವಕಾಶ ಲಭಿಸಲಿದ್ದು, ಭಾರಿ ಪ್ರಮಾಣದಲ್ಲಿ ಪುನಾರಚನೆ ಸಾಧ್ಯತೆ ಇದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೆ ಈ ಪುನಾರಚನೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ