Advertisement

ಉಪ ಚುನಾವಣೆಯಲ್ಲಿದೆ ಹಲವು ವೈಶಿಷ್ಟ್ಯ

10:59 PM Nov 24, 2019 | Lakshmi GovindaRaj |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ “ಜಿದ್ದಾಜಿದ್ದಿ’ ಹುಟ್ಟು ಹಾಕಿರುವ ಹಾಗೂ ಉಪ ಚುನಾವಣೆಗಳ ಸಂಖ್ಯೆಯನ್ನು ಶತಕದ ಗಡಿ ದಾಟಿಸಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಲವು ವೈಶಿಷ್ಟ್ಯತೆಗಳನ್ನೂ ಹೊಂದಿದೆ.

Advertisement

ಈಗ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿನ ಒಟ್ಟು ಮತದಾರರ ಸಂಖ್ಯೆಗಿಂತಲೂ ದೇಶದ 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇದೆ. ಅಲ್ಲದೇ ಈ ವರ್ಷ ಏಕಕಾಲಕ್ಕೆ ನಡೆಯುತ್ತಿರುವ ದೇಶದ ಎರಡನೇ ಅತಿದೊಡ್ಡ ಉಪ ಚುನಾವಣೆ ಇದಾಗಿದೆ.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಒಟ್ಟು 37.77 ಲಕ್ಷ ಇದೆ. ಆದರೆ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ತ್ರಿಪುರಾ, ಅಂಡಮಾನ್‌ ನಿಕೋಬಾರ್‌, ಲಕ್ಷದ್ವೀಪ ಸೇರಿ ದೇಶದ 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಲ್ಲಿನ ಮತದಾರರ ಸಂಖ್ಯೆ ಇದಕ್ಕಿಂತಲೂ ಕಡಿಮೆ ಇದೆ. ಆ ಅರ್ಥದಲ್ಲಿ ಇದು ದೇಶದ ಅತಿದೊಡ್ಡ ಉಪ ಚುನಾವಣೆಗಳ ಪೈಕಿ ಒಂದು ಎಂದು ಹೇಳಲಾಗುತ್ತಿದೆ.

ಅದೇ ರೀತಿ, ಈ ವರ್ಷ ಏಪ್ರಿಲ್‌ನಿಂದ ಇಲ್ಲಿವರೆಗೆ ಏಕಕಾಲಕ್ಕೆ ನಡೆದಿರುವ ದೇಶದ ಎರಡನೇ ಅತಿದೊಡ್ಡ ಉಪ ಚುನಾವಣೆ ಇದಾಗಿದೆ. 2019ರ ಏಪ್ರಿಲ್‌ನಲ್ಲಿ ತಮಿಳುನಾಡಿನ 18 ವಿಧಾನಸಭಾ ಕ್ಷೇತ್ರಗಳಿಗೆ ಏಕ ಕಾಲಕ್ಕೆ ಉಪ ಚುನಾವಣೆ ನಡೆದಿತ್ತು. ಈಗ ಕರ್ನಾಟಕದಲ್ಲಿ 15 ಕ್ಷೇತ್ರಗಳಿಗೆ ಏಕಕಾಲಕ್ಕೆ ಉಪ ಚುನಾವಣೆ ನಡೆಯುತ್ತಿದೆ.

ಚುನಾವಣಾ ಆಯೋಗದ ಮಾಹಿತಿಯಂತೆ ದೇಶದಲ್ಲಿ 2014 ಮತ್ತು 2019ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಹಾಗೂ ಇದೇ ಅವಧಿಯಲ್ಲಿ ನಡೆದ ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿ ಇದ್ದ ಒಟ್ಟು ಮತದಾರರ ಸಂಖ್ಯೆಗಿಂತಲೂ ನಮ್ಮ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಹೆಚ್ಚು ಮತದಾರರು ಇದ್ದಾರೆ.

Advertisement

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ 30 ಲಕ್ಷ ಮೇಲ್ಪಟ್ಟು ಮತದಾರರು ಇದ್ದರೆ, ಮೇಘಾಲಯ, ನಾಗಲ್ಯಾಂಡ್‌, ಮಣಿಪುರ ಮತ್ತು ತ್ರಿಪುರಾಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ. ಉಳಿದಂತೆ, ಗೋವಾ, ಪಾಂಡಿಚೇರಿ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಂ, ಚಂಡಿಗಢ, ಅಂಡಮಾನ್‌ ನಿಕೋಬಾರ್‌, ದಾದರ್‌ ಹವೇಲಿಯಲ್ಲಿ 1 ರಿಂದ 8 ಲಕ್ಷ ಮತದಾರರು ಇದ್ದರೆ, ದಮನ್‌ ಆ್ಯಂಡ್‌ ದಿವ್‌, ಲಕ್ಷದ್ವೀಪಗಳಲ್ಲಿ ಮತದಾರರು ಸಂಖ್ಯೆ ಸಾವಿರಗಳಲ್ಲಿದೆ.

80 ಉಪ ಚುನಾವಣೆಗಳು: ರಾಜ್ಯಗಳ ವಿಧಾನಸಭೆಗಳಿಗೆ ಉಪ ಚುನಾವಣೆಗಳು ಹೊಸದಲ್ಲ. ಆಯಾ ರಾಜ್ಯಗಳಲ್ಲಿ ಪ್ರತಿ ವಿಧಾನಸಭೆಯ ಅವಧಿಯಲ್ಲಿ ವಿವಿಧ ಕಾರಣಗಳಿಗೆ ಉಪ ಚುನಾವಣೆಗಳು ನಡೆಯುತ್ತಲೇ ಬಂದಿದೆ. ಅದರಂತೆ, 2019ರಲ್ಲಿ ಇಲ್ಲಿವರೆಗೆ ದೇಶದಲ್ಲಿ ಒಟ್ಟು 80 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. 2019ರ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ತಮಿಳುನಾಡಿನಲ್ಲಿ 24, ಉತ್ತರ ಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದಲ್ಲಿ 11, ಗುಜರಾತಿನಲ್ಲಿ 16 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತದಾರರು
ಕರ್ನಾಟಕ 37.77 ಲಕ್ಷ (15 ಕ್ಷೇತ್ರಗಳು)
ಜಮ್ಮು-ಕಾಶ್ಮೀರ 35.66 ಲಕ್ಷ
ಹಿಮಾಚಲಪ್ರದೇಶ 30.98 ಲಕ್ಷ
ತ್ರಿಪುರಾ 20.23 ಲಕ್ಷ
ಮಣಿಪುರ 14.12 ಲಕ್ಷ
ಮೇಘಾಲಯ 10.78 ಲಕ್ಷ
ನಾಗಾಲ್ಯಾಂಡ್‌ 10.38 ಲಕ್ಷ
ಗೋವಾ 8.17 ಲಕ್ಷ
ಪಾಂಡಿಚೇರಿ 7.40 ಲಕ್ಷ
ಅರುಣಾಚಲ ಪ್ರದೇಶ 5.96 ಲಕ್ಷ
ಚಂಡಿಗಢ 4.53 ಲಕ್ಷ
ಮಿಜೋರಾಂ 4.33 ಲಕ್ಷ
ಸಿಕ್ಕಿಂ 3.08 ಲಕ್ಷ
ಅಂಡಮಾನ್‌ ನಿಕೋಬಾರ್‌ 1.90 ಲಕ್ಷ
ದಾದರ್‌ ಹವೇಲಿ 1.65 ಲಕ್ಷ
ದಮನ್‌ ಆ್ಯಂಡ್‌ ದಿವ್‌ 87 ಸಾವಿರ
ಲಕ್ಷ ದ್ವೀಪ 43 ಸಾವಿರ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next