ಹಾವೇರಿ: ರಾಜ್ಯ ಬಿಜೆಪಿ ಸರ್ಕಾರ ಮೊದಲ ಮಂತ್ರಿಮಂಡಲದಲ್ಲಿ ಜಿಲ್ಲೆಯ ಶಾಸಕರೋರ್ವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಜಿಲ್ಲೆಯ ಬಹುದಿನಗಳ ಬೇಡಿಕೆಗಳು ಇವರ ಅವಧಿಯಲ್ಲಾದರೂ ಈಡೇರಬಹುದು ಎಂಬ ಆಸೆ ಚಿಗುರೊಡೆದಿದೆ.
ಬಸವರಾಜ ಬೊಮ್ಮಾಯಿಯವರು ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಕನಸುಗಳಿಗೆ ಮರುಜೀವ ಬಂದಿದೆ. ಜಿಲ್ಲೆಯಲ್ಲಿ ಬಹುಮುಖ್ಯವಾಗಿ ಬಹುವರ್ಷಗಳಿಂದ ಮೆಡಿಕಲ್ ಕಾಲೇಜು ಸ್ಥಾಪನೆ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಇದರ ಜತೆಗೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ, ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ಹತ್ತು ಹಲವು ಬೇಡಿಕೆಗಳು ನೂತನ ಸಚಿವ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಾದರೂ ಈಡೇರಬಹುದು ಎಂದು ನಿರೀಕ್ಷಿಸಲಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜ್ 2013ರಲ್ಲಿ ಜಿಲ್ಲೆಗೆ ಮಂಜೂರಿ ಆಗಿಯೇ ಹೋಯಿತು ಎಂಬಷ್ಟರ ಮಟ್ಟಿಗೆ ಕಾಗದ ಪತ್ರಗಳ ವಹಿವಾಟು ನಡೆಯಿತು. ಆದರೆ, ಕೊನೆಯ ಘಳಿಗೆಯಲ್ಲಿ ಅದು ಕೈತಪ್ಪಿ ಬೇರೆ ಜಿಲ್ಲೆಗಳ ಪಾಲಾಯಿತು. 2017ರಲ್ಲಿ ಮತ್ತೆ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾಯಿತು. ಆದರೆ, ಆರ್ಥಿಕ ಇಲಾಖೆ ಅನುಮೋದನೆ ಮಾತ್ರ ಸಿಕ್ಕಿಯೇ ಇಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವುದರಿಂದ ಜಿಲ್ಲೆಯ ಬಹುಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆ ಕನಸು ನನಸಾದೀತು ಎಂಬ ಆಶಾಭಾವ ಜನತೆ ಹೊಂದಿದೆ.
2016ರ ಬಜೆಟ್‌ನಲ್ಲಿ ಘೋಷಣೆಯಾದ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಅನುಷ್ಠಾನ ಬೊಮ್ಮಾಯಿಯವರಿಂದ ಸಾಕಾರಗೊಳ್ಳಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಚಾಲನೆ ನೀಡಬಹುದು. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಗಳು ಅಕೃತವಾಗಿ ಕಾರ್ಯಾರಂಭಿಸುವಲ್ಲಿ ಸಚಿವ ಬೊಮ್ಮಾಯಿ ನಿಗಾ ವಹಿಸಬಹುದು ಎಂದು ಆಶಿಸಲಾಗಿದೆ.
ನೀರು, ನೀರಾವರಿ: ಜಿಲ್ಲೆಯಲ್ಲಿ ತುಂಗಭದ್ರಾ, ಧರ್ಮಾ, ಕುಮದ್ವತಿ, ವರದಾ ಹೀಗೆ ನಾಲ್ಕು ನದಿಗಳು ಹರಿದಿವೆ. ಇವುಗಳನ್ನು ಬಳಸಿಕೊಂಡು ಹಾವೇರಿ ನೀರಾವರಿ ಜಿಲ್ಲೆಯಾಗಬೇಕೆಂಬ ಕನಸು ಇನ್ನೂ ಕನಸಾಗಿಯೇ ಇದೆ. ನಿರಂತರ ನೀರು ಯೋಜನೆ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಅನುಷ್ಠಾನಗೊಳ್ಳಬೇಕು. ಜಿಲ್ಲಾ ಕೇಂದ್ರ ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಸ್ವಚ್ಛತೆ, ರಸ್ತೆ ಸೇರಿದಂತೆ ಮೂಲಸೌಲಭ್ಯ ಕೊರತೆ ಸಮಸ್ಯೆ ಕಾಡುತ್ತಿದ್ದು ಇವುಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಬೊಮ್ಮಾಯಿ ಕ್ರಮ ಜರುಗಿಸಬಹುದು. ಈ ಹಿಂದೆ ಜಲಸಂಪನ್ಮೂಲ ಖಾತೆ ಸಚಿವರಾಗಿ ನೀರಾವರಿಗೆ ಹಲವು ಯೋಜನೆಗಳನ್ನು ರೂಪಿಸಿದ ಬೊಮ್ಮಾಯಿಯವರು ಈ ಬಾರಿ ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಹೊಸ ನೀರಾವರಿ ಯೋಜನೆ ಜಾರಿಗೆ ತರುವ ಜತೆಗೆ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಜೀವ ತುಂಬುವ ಕಾರ್ಯ ಮಾಡಬಹುದು ಎಂದು ಜನತೆ ನಿರೀಕ್ಷಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೂಲಸೌಲಭ್ಯ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳು ಹೊಸ ಸಚಿವರ ಅವಧಿಯಲ್ಲಾದರೂ ಬೇಡಿಕೆ ಈಡೇರಬಹುದೇ ಎಂದು ಜನರು ಕಾತರದಿಂದ ಕಾಯುತ್ತಿದ್ದು ಸಚಿವರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
•ಎಚ್.ಕೆ. ನಟರಾಜ