Advertisement
ಈ ದಿನಗಳಲ್ಲಿ ಜನರು ಮಾಲ್ ಥಿಯೇಟರ್, ದೇವಸ್ಥಾನ, ಪಾರ್ಕ್ ಇಲ್ಲವೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಆದರೀಗ ಇಲ್ಲೆಲ್ಲ ವಾರದಿಂದ ಬಿಕೋ ಎನ್ನುತ್ತಿದೆ. ಹೆಚ್ಚಿನವರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ಕಡಿಮೆಯಾಗಿದ್ದು, ವ್ಯಾಪಾರ ವಹಿವಾಟು ನೆಲಕಚ್ಚಿದೆ.
ವಾರಾಂತ್ಯ ನಡೆಯುತ್ತಿದ್ದ ಸಭೆ- ಸಮಾರಂಭಗಳು, ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳು ಕೂಡ ರದ್ದಾಗಿವೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಇರುವುದರಿಂದ ಮಣಿಪಾಲ ನಗರ ಸಹಿತ ಶಿಕ್ಷಣ ಸಂಸ್ಥೆಗಳ ಅನ್ಯ ರಾಜ್ಯ, ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ನಗರದ ವಿವಿಧೆಡೆ ಇದ್ದ ಹೊರ ಜಿಲ್ಲೆಗಳ ಉದ್ಯೋಗಸ್ಥರು, ಕಾರ್ಮಿಕರು ನಗರವನ್ನು ತೊರೆದು ತಮ್ಮ ಊರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ನಗರದ ರಸ್ತೆಗಳಲ್ಲಿ ಟ್ರಾಫಿಕ್, ವಾಹನಗಳ ಸಂಚಾರ, ಜನ ಓಡಾಟ ಎಲ್ಲವೂ ಇಳಿಕೆಯಾಗಿದೆ. ಕೆಎಸ್‌ಆರ್‌ಟಿಸಿ, ಸರ್ವಿಸ್ ಬಸ್‌ಗಳು ಖಾಲಿಯಾಗಿ ಓಡಾಡುತ್ತಿವೆ. ಕೆಲ ರೂಟ್‌ಗಳಲ್ಲಿ ಬಸ್ ಓಡಾಟವನ್ನೇ ಸ್ಥಗಿತಗೊಳಿಸಲಾಗಿದೆ. ಆಟೋರಿಕ್ಷಾ, ಖಾಸಗಿ ವಾಹನಗಳಿಗೆ ಬಾಡಿಗೆಯಿಲ್ಲ. ಹೊಟೇಲ್ ಉದ್ಯಮ, ಮಧ್ಯಮ ಹಾಗೂ ಚಿಲ್ಲರೆ ವ್ಯಾಪಾರಸ್ಥರು ನಷ್ಟದ ಮೇಲೆ ನಷ್ಟಕ್ಕೆ ಒಳಗಾಗಿ ಚಿಂತೆಯಲ್ಲಿದ್ದಾರೆ. ದೇವಸ್ಥಾನಗಳಲ್ಲಿ ಜನರಿಲ್ಲ
ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಪುಣ್ಯ ಕ್ಷೇತ್ರಗಳಲ್ಲಿ ದೇವರ ದರ್ಶನ ಹೊರತು ಪಡಿಸಿ ಬೇರೆ ಯಾವುದೇ ಸೇವೆಗಳು ನಡೆಯುತ್ತಿಲ್ಲ. ಪ್ರವಾಸಿಗರು ಪ್ರವಾಸಕ್ಕೆ ತೆರಳಲು ಹಿಂದೇಟು ಹಾಕುತ್ತಿರುವುದರಿಂದ ಸಾರಿಗೆ ಸಂಸ್ಥೆಯ ಐಷಾರಾಮಿ ಬಸ್‌ಗಳ ಸಂಚಾರವನ್ನು ಬಹುತೇಕ ನಿಲ್ಲಿಸಲಾಗಿದೆ. ರೈಲುಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ. ಹಲವು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಯನ್ನೂ ನಿಲ್ಲಿಸಲಾಗಿದೆ.
Related Articles
ಕಡಿತಕ್ಕೆ ಚಿಂತನೆ
ಉಡುಪಿ ನಗರದಲ್ಲಿ 80 ಸರ್ವಿಸ್ ಬಸ್‌ಗಳು ನಿತ್ಯ ಓಡಾಟ ನಡೆಸುತ್ತಿವೆ. ಪ್ರಯಾಣಿಕರ ಕೊರತೆಯಿಂದ ಬಸ್‌ಗಳ ಸಂಚಾರವನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಪ್ರಯಾಣಿಕರಿಲ್ಲದೆ ಆದಾಯ ಕೂಡ ಸಂಗ್ರಹವಾಗುತ್ತಿಲ್ಲ. ಬಸ್‌ಗಳ ನಿರ್ವಹಣೆ, ಡೀಸೆಲ್ ಖರ್ಚು, ಸಿಬಂದಿ ವೇತನ ಇತ್ಯಾದಿಗಳಿಗೆ ಸಮಸ್ಯೆಯಾಗಿದೆ. ಹೀಗಾಗಿ ಕೆಲ ರೂಟ್‌ಗಳಲ್ಲಿ ಸರ್ವಿಸ್ ಬಸ್‌ಗಳ ಸಂಚಾರವನ್ನು ನಿಲ್ಲಿಸುವ ಚಿಂತನೆಯನ್ನು ಉಡುಪಿ ಸಿಟಿ ಬಸ್ ಮಾಲಕರ ಸಂಘ ಮಾಡುತ್ತಿದೆ.
Advertisement
ನಷ್ಟದಲ್ಲಿ ಬಸ್‌ಗಳ ಓಡಾಟನಷ್ಟ ಎದುರಿಸುತ್ತಿದ್ದರೂ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ ಓಡಾಟ ನಡೆಸುತ್ತಿದ್ದೇವೆ. ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದೇವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಸ್ ಓಡಾಟ ನಿಲ್ಲಿಸುವುದು ಅನಿವಾರ್ಯವಾಗಬಹುದು.
-ಸುರೇಶ್ ನಾಯಕ್ ಕುಯಿಲಾಡಿ,
ಅಧ್ಯಕ್ಷರು, ಸಿಟಿ ಬಸ್ ಮಾಲಕರ ಸಂಘ ಉಡುಪಿ. ತಂಪು ಪದಾರ್ಥ ಸೇವಿಸಲು ಆತಂಕ
ಬಿಸಿಲ ತಾಪ ಕೂಡ ಹೆಚ್ಚಾಗುತ್ತಿದೆ. ಬಾಯಾರಿಕೆ ಆದಾಗ ತಂಪು ಪಾನೀಯ ಸೇವಿಸಲೂ ಭಯಪಡುತ್ತಿದ್ದಾರೆ. ಹೊಟೇಲು, ಜ್ಯೂಸ್ ಸೆಂಟರ್‌ಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಯೊಬ್ಬರ ಬಾಯಲ್ಲೂ ಕೋವಿಡ್ 19 ಸದ್ದು ಮಾಡುತ್ತಿರುವುದರಿಂದ ಜನರು ಭೀತಿಗೆ ಒಳಗಾಗಿದ್ದಾರೆ. 144(3) ಸೆಕ್ಷನ್: ನಗರಾದ್ಯಂತ ಜನವಿರಳ
ಉಡುಪಿ: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 144(3) ಸೆಕ್ಷನ್ ವಿಧಿಸಿದ್ದು, ಗುರುವಾರ ನಗರದಲ್ಲಿ ಜನಸಂಖ್ಯೆ ವಿರಳವಾಗಿತ್ತು. ನಗರಸಭೆ ಕಚೇರಿಯಲ್ಲಿ ತುರ್ತು ಕೆಲಸವಿಲ್ಲದೆ ಬಂದ ಜನರನ್ನು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಾಗಿ ವಾಪಸು ಕಳುಹಿಸಿದ್ದಾರೆ. ಒಂದೇ ಬಾರಿ ಅಧಿಕ ಮಂದಿ ಭೇಟಿ ಮಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮನೆಯಲ್ಲಿಯೇ ನಮಾಝ್
ಜಿಲ್ಲಾ ಮುಸ್ಲಿಂ ಒಕ್ಕೂಟ, ಸಂಯುಕ್ತ ಜಮಾತ್ ಪದಾಧಿಕಾರಿಗಳ ತುರ್ತು ಜಂಟಿ ಸಭೆ ಗುರುವಾರ ಮಣಿಪಾಲ ಮಸೀದಿಯಲ್ಲಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಪಾಧ್ಯಕ್ಷ ಪರ್ಕಳ ಹಾಜಿ ಅಬ್ದುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜುಮಾ ನಮಾಝ್ ಶೀಘ್ರದಲ್ಲಿ ಮುಗಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಮಕ್ಕಳು, ಹಿರಿಯರು ಮತ್ತು ಮಹಿಳೆಯರು ಮನೆಯಲ್ಲಿ ನಮಾಝ್ ನಡೆಸುವಂತೆ ಕೋರಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು ಮುಂದಿನ ಆದೇಶದ ತನಕ ಜಾರಿಯಲ್ಲಿರುತ್ತದೆ. ಸರ್ವ ಮಸೀದಿಗಳ ಆಡಳಿತ ಸಮಿತಿಯ ಗಮನಕ್ಕೆ ತರುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ, ಕೋಶಾಧಿಕಾರಿ ಕೆ.ಒ. ಇಕ್ಬಾಲ್ ಮತ್ತು ಜಿಲ್ಲಾ ಸಂಯುಕ್ತ ಜಮಾತ್ ಅಧ್ಯಕ್ಷ ಪಿ.ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆ ರದ್ದು
ಕೋವಿಡ್ 19ದಿಂದ ಸುರಕ್ಷಿತವಾಗಿರಲು ಉಡುಪಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲೂ ಸಾಮೂಹಿಕ ಪ್ರಾರ್ಥನೆಗಳನ್ನು, ಬಲಿಪೂಜೆಗಳನ್ನು ರದ್ದುಪಡಿಸಲಾಗಿದೆ. ಕಾರ್ಯಾಗಾರಗಳು, ಬೇಸಗೆ ಶಿಬಿರ, ಶಿಲುಬೆಯ ಹಾದಿ, ಮೆರವಣಿಗೆಗಳೂ ಇರುವುದಿಲ್ಲ. ಸಾಮೂಹಿಕ ಧಾರ್ಮಿಕ ಚಟುವಟಿಕೆಗಳಿಗೆ ನಿಷೇಧವಿದ್ದರೂ ವೈಯಕ್ತಿಕ ಪ್ರಾರ್ಥನೆ ಹಾಗೂ ಖಾಸಗಿ ಧ್ಯಾನಕ್ಕಾಗಿ ತೆರೆದಿರುತ್ತವೆ. ಈ ಕ್ರಮಗಳು ಮಾ.31ರ ವರೆಗೆ ಚಾಲ್ತಿಯಲ್ಲಿರುತ್ತವೆ ಎಂದು ಉಡುಪಿ ಧರ್ಮಾಧ್ಯಕ್ಷ ಫಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.