Advertisement
ಪಡೀಲ್‌ನ ಹೆದ್ದಾರಿಯಲ್ಲಿರುವ ರೈಲ್ವೇ ಅಂಡರ್‌ಪಾಸ್‌ನ ಬದಿಗೆ (ಪಡೀಲ್‌ನಿಂದ ಹೋಗುವಾಗ ಎಡಬದಿ) ಮೇಲಿನಿಂದ ಮಣ್ಣು ಜರಿದು ಬಿದ್ದು ರಸ್ತೆ ಸಂಚಾರ ಗುರುವಾರ ಬೆಳಗ್ಗಿನಿಂದ ಮಧ್ಯಾ ಹ್ನದ ವರೆಗೆ ಅಸ್ತವ್ಯಸ್ತವಾಗಿತ್ತು. ಕಳೆದ ವರ್ಷ ಈ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿತ್ತು. ಇದೀಗ ಪ್ರಾರಂಭಿಕ ಮಳೆಯ ಸಂದರ್ಭದಲ್ಲಿಯೇ ಅಂಡರ್‌ಪಾಸ್‌ನಲ್ಲಿ ಸಮಸ್ಯೆ ಕಾಡಿದ್ದು, ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಯಿತು.
ಪಡೀಲ್ ಅಂಡರ್‌ಪಾಸ್ ಮೇಲ್ಭಾಗದ ರೈಲ್ವೇ ಟ್ರ್ಯಾಕ್ ಭಾಗದಲ್ಲಿ ರೈಲ್ವೇ ಇಲಾಖೆ ವತಿಯಿಂದ ಇತ್ತೀಚೆಗೆ ಮಣ್ಣು ಹಾಕುವ ಕಾಮಗಾರಿ ನಡೆಯುತ್ತಿದೆ. ಒಂದೆರಡು ದಿನ ಗಳ ಹಿಂದೆ ಮಣ್ಣು ಹಾಕಿದ್ದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಅಂಡರ್‌ಪಾಸ್‌ನ ಎಡಭಾಗದಲ್ಲಿ ಮಳೆ ನೀರಿಗೆ ಮಣ್ಣು ರಸ್ತೆಗೆ ಹರಿದುಬಂದಿದೆ. ಹೀಗಾಗಿ ಪಡೀಲ್ ಭಾಗದಿಂದ ಬಿ.ಸಿ.ರೋಡ್ ಹೋಗುವ ಭಾಗದ ರಸ್ತೆ ಸಂಚಾರ ಸ್ವಲ್ಪ ಸಮಯ ಸ್ಥಗಿತವಾಗಿತ್ತು. ಗುರುವಾರ ಬೆಳಗ್ಗೆ ರೈಲ್ವೇ ಇಲಾಖೆಯ ಅಧಿಕಾರಿಗಳು ಆಗಮಿಸಿ ರಸ್ತೆಗೆ ಬಿದ್ದ ಮಣ್ಣನ್ನು ಬುಲ್ಡೋಜರ್ ನೆರವಿನಿಂದ ತೆರವು ಮಾಡುವ ಕಾರ್ಯಾಚರಣೆ ಕೈಗೊಂಡರು. ಪರಿಣಾಮವಾಗಿ ಬೆಳಗ್ಗಿನಿಂದ ಸುಮಾರು ಮಧ್ಯಾಹ್ನದವರೆಗೆ ಇಲ್ಲಿ ಸಂಚಾರ ವ್ಯತ್ಯಯವಾಯಿತು. ಸಂಚಾರಿ ಪೊಲೀ ಸರುವಾಹನಗಳ ಸುಗಮ ಸಂಚಾರಕ್ಕೆ ಹರಸಾಹಸಪಟ್ಟರು. ಆದರೂ, ಪಡೀಲ್ ವ್ಯಾಪ್ತಿ, ಅಡ್ಯಾರ್‌ವರೆಗೆ ವಾಹನಗಳು ತಾಸುಗಟ್ಟಲೆ ಸರತಿಸಾಲಿನಲ್ಲಿ ನಿಲ್ಲುವಂತಾಯಿತು.
Related Articles
ಪಂಪ್‌ವೆಲ್‌ನ ಒಮೇಗಾ ಆಸ್ಪತ್ರೆಯ ಮುಂಭಾಗದ ರಸ್ತೆಯ ಪಕ್ಕದಲ್ಲಿ ಮಳೆ ನೀರು ಹರಿಯುವ ತೋಡು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಮಳೆ ನೀರು ವಸತಿ ಸಮುಚ್ಚಯದ ಕೆಳಮಹಡಿಗೆ ನುಗ್ಗಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಪಂಪ್‌ವೆಲ್-ಕಂಕನಾಡಿ ರಸ್ತೆಯ ಎಡಭಾಗದಲ್ಲಿ (ಒಮೇಗಾ ಮುಂಭಾಗ)ಮಳೆ ನೀರು ಹರಿಯುವ ತೋಡು ಇದೆ. ಇತ್ತೀಚೆಗೆ ಇದೇ ರಸ್ತೆಯ ಭಾಗದಲ್ಲಿ ಒಳಚರಂಡಿಯ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಮಳೆ ನೀರು ಹರಿಯುವ ತೋಡು ಕಾಮಗಾರಿಯ ಕಾರಣದಿಂದ ಬಂದ್ ಆಗಿತ್ತು. ಇದು ಮಳೆಗಾಲದಲ್ಲಿ ಸಮಸ್ಯೆ ಆಗಲಿದೆ ಎಂದು ಸ್ಥಳೀಯರು ಪಾಲಿಕೆಯ ಗಮನಕ್ಕೂ ತಂದಿದ್ದರು. ಆದರೂ, ಬಂದ್ ಆಗಿದ್ದ ಚರಂಡಿಯನ್ನು ಸರಿಪಡಿಸುವಲ್ಲಿ ಪಾಲಿಕೆ ಮನಸ್ಸು ಮಾಡಿರಲಿಲ್ಲ. ಇದರ ಪರಿಣಾಮವಾಗಿ ಬುಧವಾರ ರಾತ್ರಿ ಸುರಿದ ಮಳೆಗೆ ಮಳೆ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೆ ವಸತಿ ಸಮುಚ್ಚಯದ ವ್ಯಾಪ್ತಿಯಲ್ಲಿ ತುಂಬಿ ಜನರು ಸಮಸ್ಯೆ ಅನುಭವಿಸಿದರು. ಗುರುವಾರ ಬೆಳಗ್ಗೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ದೊಡ್ಡ ಸಮಸ್ಯೆ ಎದುರಾಗಿಲ್ಲ. ಕೊನೆಗೂ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡಿದರು.
Advertisement
ಗೋರಿಗುಡ್ಡದಲ್ಲಿ ಸರ್ವಿಸ್ ರಸ್ತೆ ಡೇಂಜರ್ಪಂಪ್ವೆಲ್ ಪ್ಲೈಓವರ್ ಹಿನ್ನೆಲೆಯಲ್ಲಿ ಪಂಪ್‌ವೆಲ್‌ನಿಂದ ಗೋರಿಗುಡ್ಡದ ವರೆಗೆ ಸರ್ವಿಸ್ ರಸ್ತೆ ಮಾಡಲಾಗಿದೆ. ಸದ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸರ್ವಿಸ್ ರಸ್ತೆ ಅಪಾಯದ ಸ್ಥಿತಿಯಲ್ಲಿದೆ. ಅದರಲ್ಲಿಯೂ ಬುಧವಾರ ರಾತ್ರಿ-ಗುರುವಾರ ಬೆಳಗ್ಗಿನ ಮಳೆಗೆ ಗೋರಿಗುಡ್ಡದ ಒಂದು ಭಾಗದಲ್ಲಿ ಮಳೆ ನೀರು ಸರ್ವಿಸ್ ರಸ್ತೆಯ ಬದಿಯ ಮಣ್ಣನ್ನು ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಹತ್ತಿರದ ನಿವಾಸಿಗಳಿಗೆ ಇದು ಆತಂಕ ತರಿಸಿದೆ. ಒಂದೆರಡು ಮಳೆಗೆ ಈ ರೀತಿಯಾದರೆ, ಮುಂದಿನ ದಿನಗಳಲ್ಲಿ ಇಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲೇ ನೀರು; ಸಮಸ್ಯೆ-ಸವಾಲು
ಸೆಂಟ್ರಲ್ ರೈಲು ನಿಲ್ದಾಣದ ಮುಂಭಾಗದಲ್ಲಿ ಬುಧವಾರ ರಾತ್ರಿ ಯ ಮಳೆಗೆ ಕೃತಕ ನೆರೆ ಕಾಣಿಸಿಕೊಂಡಿತ್ತು. ನೀರು ಸರಾಗವಾಗಿ ಹರಿಯಲು ಸೂಕ್ತ ಅವಕಾಶವಿಲ್ಲದೆ ನಿಲ್ದಾಣದ ಮುಂಭಾಗದ ಟ್ಯಾಕ್ಸಿ ಪಾರ್ಕ್ ಗ್ರೌಂಡ್‌ನಲ್ಲಿ ನೀರು ವ್ಯಾಪಿಸಿತ್ತು. ಪಂಪ್‌ವೆಲ್‌ನ ಕರ್ಣಾಟಕ ಬ್ಯಾಂಕ್ ಮುಂಭಾಗದಲ್ಲಿಯೂ ಮಳೆ ನೀರು ರಸ್ತೆಯಲ್ಲಿ ನಿಂತು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ತೊಂದರೆಯಾಯಿತು. ಅಳಕೆಯ ಗುಜರಾತಿ ಶಾಲೆಯ ವ್ಯಾಪ್ತಿಯಲ್ಲಿಯೂ ಮಳೆ ನೀರು ಸಮಸ್ಯೆ ಉಂಟಾಯಿತು. ಬಿಕರ್ನಕಟ್ಟೆಯ ಕೈಕಂಬದಲ್ಲಿ ವಸತಿ ಸಮುಚ್ಚಯಕ್ಕೆ ನೀರು ನುಗ್ಗಿತ್ತು. ಬಲ್ಮಠದ ಸನ್ಯಾಸಿಗುಡ್ಡೆ ಎಂಬಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಸ್ವಲ್ಪ ಮಣ್ಣು ಕುಸಿದು ಹತ್ತಿರದ ಮನೆಗೆ ಬಿದ್ದು ಕೊಂಚ ಸಮಸ್ಯೆಯಾಯಿತು. ನಗರದ ಅಂಬೇಡ್ಕರ್ ವೃತ್ತ (ಜ್ಯೋತಿ), ಬಂಟ್ಸ್ ಹಾಸ್ಟೆಲ್, ಸಿಟಿ ಸೆಂಟರ್ ಮುಂಭಾಗ, ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ, ಜೈಲು ರಸ್ತೆಯ ಸಮೀಪ ಸಹಿತ ವಿವಿಧೆಡೆ ಸಮಸ್ಯೆ ಎದುರಾಯಿತು. ಕೆಸರುಮಯ ಹೊಸ ಅಂಡರ್‌ಪಾಸ್!
ಈ ಮಧ್ಯೆ ಬೆಳಗ್ಗೆ ಬಂದ ಮಳೆಯ ಪರಿಣಾಮ ಮಣ್ಣು ರಸ್ತೆಗೆ ಬಿದ್ದು ರಸ್ತೆಯೆಲ್ಲ ಕೆಸರುಮಯವಾಗಿತ್ತು. ಬಳಿಕ ಮಳೆಯೂ ಇಲ್ಲದ ಕಾರಣದಿಂದ ಇಲ್ಲಿ ಕೆಸರೇ ವ್ಯಾಪಿಸಿಕೊಂಡಿತು. ರಸ್ತೆ ಸಂಚಾರ ಸಮಸ್ಯೆಯಾಗುತ್ತಿರುವುದನ್ನು ಅರಿತ ಪೊಲೀಸರು ಹತ್ತಿರದಲ್ಲಿ ಇನ್ನಷ್ಟೇ ಉದ್ಘಾಟನೆಯಾಗಬೇಕಾದ ಹೊಸ ಅಂಡರ್‌ಪಾಸ್‌ನ ಮುಂಭಾಗ ಇದ್ದ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡುವ ವ್ಯವಸ್ಥೆ ಕೈಗೊಂಡರು. ಆ ಅಂಡರ್‌ಪಾಸ್ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಪೊಲೀಸರು ನಿರ್ಧರಿಸಿದ್ದರು. ಆದರೂ ಹೊಸ ಅಂಡರ್‌ಪಾಸ್‌ನಲ್ಲಿ ಬೃಹತ್ ಲಾರಿಗಳು ಕೆಸರಿನಲ್ಲಿ ಕೊಂಚ ಹೂತಿದ್ದ ಕಾರಣದಿಂದ ಅಲ್ಲಿನ ಸಮಸ್ಯೆಯೂ ಹೇಳತೀರದಾಗಿದೆ.