ಹಾಸನ: ನಗರದ ಪಾರ್ಕುಗಳಲ್ಲಿ ಇಸ್ಪೀಟ್ ಜೂಜು, ಅರಸೀಕೆರೆಯಲ್ಲಿ ಮದ್ಯ ಹಾಗೂ ಗಾಂಜಾ ವ್ಯಸನಿಗಳ ಕಾಟ ತಪ್ಪಿಸಿ ಎಂದು ಸಾರ್ವಜನಿಕರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಅವರು ತಮ್ಮ ಕಚೇರಿ ಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫೋನ್ -ಇನ್ ಲೈವ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಗಮನ ಸೆಳೆದು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಅರಸೀಕೆರೆ, ಹಳೇಬೀಡು, ಬೇಲೂರು, ಹಾಸನ, ಅರಕಲಗೂಡು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಎಸ್ಪಿಯವರಿಗೆ ದೂರವಾಣಿ ಕರೆಗಳು ಬಂದವು. ಆ ಪೈಕಿ ಅರಸೀಕೆರೆಯಲ್ಲಿ ಮದ್ಯ ಮತ್ತು ಗಾಂಜಾ ವ್ಯಸನಿಗಳು ಹೆಚ್ಚಿದ್ದಾರೆ. ಗಾಂಜಾ ಪೂರೈಕೆಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಹಾಸನದ ವಿವಿಧ ಉದ್ಯಾನವನಗಳಲ್ಲಿ ಪುಂಡರ ಕಾಟ ಹೆಚ್ಚಿದೆ. ಗುಂಪು ಕಟ್ಟಿಕೊಂಡು ಇಸ್ಪೀಟಾಡುತ್ತಾರೆ. ವಾಯು ವಿಹಾರಕ್ಕೆ ಹೋಗಲಾಗುತ್ತಿಲ್ಲ. ಪಾರ್ಕುಗಳ ನೆರೆಹೊರೆ ನಿವಾಸಿಗಳು ಮುಜಗರ ದಿಂದ ಬದುಕಬೇಕಾಗಿದೆ ಎಂದು ಎಸ್ಪಿಯವರ ಗಮನ ಸೆಳೆದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟಾಗಿ ಕೈಗೊಳ್ಳಬೇಕು. ಚಿಕಿತ್ಸೆ ಸಮರ್ಪಕವಾಗಿ ಸಿಗುವಂತೆಯೂ ನೋಡಿಕೊಳ್ಳಬೇಕು ಎಂದೂ ಎಸ್ಪಿಯವರನ್ನು ಆಗ್ರಹಪಡಿಸಿದರು.
ಸಾರ್ವಜನಿಕರ ದೂರುಗಳಿಗೆಪ್ರತಿಕ್ರಿಯಿಸಿದ ಎಸ್ಪಿ ಶ್ರೀನಿ ವಾಸಗೌಡ ಅವರು, ಉದ್ಯಾನವನ ಗಳಲ್ಲಿ ಪುಂಡರ ಹಾವಳಿ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಗಸ್ತಿಗೆ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ನಿಯಂತ್ರಣ ಕ್ರಮಗಳ ವಿಚಾರದಲ್ಲಿ ನಮಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬುದರ ಬಗ್ಗೆ ಪರಿಶೀಲಿಸ ಲಾಗುವುದು. ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಸಿಗುತ್ತಿಲ್ಲ ಎಂಬುದರ ಬಗ್ಗೆ ಈಗಾಗಲೇ ನೋಡುತ್ತಿದ್ದೇವೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ಸೋಂಕು ನಿಯಂತ್ರಿಸಬೇಕು ಎಂದರು.