ಮಾನ್ವಿತಾ ಹರೀಶ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಎರಡು. ಮೊದಲನೇಯದಾಗಿ ಮಾನ್ವಿತಾ ನಟಿಸಿರುವ “ತಾರಕಾಸುರ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ತಿಂಗಳಾಂತ್ಯಕ್ಕೆ ತೆರೆಕಾಣುತ್ತಿದೆ. ಈ ನಡುವೆಯೇ ಮಾನ್ವಿತಾ ಮರಾಠಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಎರಡೂ ಸಂಭ್ರಮದಲ್ಲಿದ್ದಾರೆ ಮಾನ್ವಿತಾ. ಇನ್ನು, “ತಾರಕಾಸುರ’ ಚಿತ್ರದಲ್ಲೂ ಮಾನ್ವಿತಾ ನಟನೆಗೆ ಅವಕಾಶವಿರುವಂತಹ ಪಾತ್ರವೇ ಸಿಕ್ಕಿದೆಯಂತೆ. ಈ ಚಿತ್ರದ ಮೇಲೆ ಮಾನ್ವಿತಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.
ಮರಾಠಿ ಚಿತ್ರ ಒಪ್ಪಿಕೊಂಡಿರುವ ಬಗ್ಗೆ ಮಾತನಾಡುವ ಮಾನ್ವಿತಾ, “ನಾನು ಇದೇ ಮೊದಲ ಸಲ ಮರಾಠಿ ಚಿತ್ರವನ್ನು ಒಪ್ಪಿದ್ದೇನೆ. ಸದ್ಯಕ್ಕೆ ನಾನು ಆ ಚಿತ್ರಕ್ಕೆ ತಯಾರಿ ಪಡೆದುಕೊಳ್ಳಲೆಂದೇ ಮುಂಬೈನಲ್ಲಿದ್ದೇನೆ. ವೈಯಕ್ತಿಕವಾಗಿ ನಾನು ಆ ಚಿತ್ರದ ಪಾತ್ರಕ್ಕೆ ಹೇಗೆಲ್ಲಾ ತಯಾರಿ ನಡೆಸಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದೇನೆ. ನನ್ನ ಪಾತ್ರಕ್ಕೆ ಯಾವುದೂ ಕೊರತೆ ಕಾಣಬಾರದು. ಹಾಗಾಗಿ, ಎಲ್ಲಾ ತಯಾರಿ ನಡೆಸುತ್ತಿದ್ದೇನೆ. ಯಾವುದೇ ಚಿತ್ರದ ನಿರ್ಮಾಪಕ, ನಿರ್ದೇಶಕರಿರಲಿ, ನಂಬಿಕೆ ಇಟ್ಟು ಅವಕಾಶ ಕೊಟ್ಟಾಗ, ನಾವು ಅದನ್ನು ಉಳಿಸಿಕೊಳ್ಳಬೇಕು.
ಇನ್ನು, “ಮರಾಠಿ’ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಹಾಗೆ ಹೇಳುವುದಾದರೆ, ಅದು ಇನ್ನೊಂದು “ಸೈರಾತ್’ ಆಗಬಹುದು. ಅಷ್ಟರ ಮಟ್ಟಿಗೆ ಕಥೆ, ಪಾತ್ರ ಚೆನ್ನಾಗಿದೆ. ಮರಾಠಿಯ “ಲೇ ಭಾರಿ’ ಚಿತ್ರ ನಿರ್ಮಿಸಿದ್ದ ಭಾಳ ಠಾಕ್ರೆ ಅವರ ಮಗ ಮತ್ತು ಸೊಸೆ ಶಾಲಿನಿ ಠಾಕ್ರೆ ಅವರ ಪ್ರೊಡಕ್ಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರವದು. ಅದು ಮರಾಠಿ ಮತ್ತು ಕನ್ನಡ ಎರಡು ಭಾಷೆಯಲ್ಲೂ ತಯಾರಾಗುತ್ತಿದೆ. ಇನ್ನು, ನಂದಿತಾ ಯಾದವ್ ಆ ಚಿತ್ರದ ನಿರ್ದೇಶಕಿಯಾಗಿದ್ದಾರೆ.
ಅವರು ನನಗೆ ಕಥೆ ಹೇಳಿದಾಗ, ಬಿಡಬಾರದು ಅಂತೆನಿಸಿ, ಚಿತ್ರ ಮಾಡುತ್ತಿದ್ದೇನೆ. ಬಹುಶಃ ಡಿಸೆಂಬರ್ ಎರಡನೇ ವಾರದಲ್ಲಿ ಮರಾಠಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಕನ್ನಡದ ಅನೇಕ ನಟರು ಆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ನಾಗತಿಹಳ್ಳಿ ಮೇಷ್ಟ್ರು ಅವರ ಚಿತ್ರವೂ ನಡೆಯುತ್ತಿದೆ. ಆ ಚಿತ್ರದ ಡೇಟ್ ಹೊಂದಿಸಿಕೊಂಡು, ಮರಾಠಿ ಚಿತ್ರಕ್ಕೂ ಡೇಟ್ ಕೊಡಬೇಕಿದೆ’ ಎಂಬುದು ಮಾನ್ವಿತಾ ಮಾತು.