Advertisement

ಮಾನ್ವಿತಾಗೆ ಮಾನ್ಯತೆ

06:00 AM Dec 16, 2018 | Team Udayavani |

ಟಗರು ಚಿತ್ರದ ನಂತರ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಹುಡುಗಿ ಮಾನ್ವಿತಾ ಕಾಮತ್‌, ಮುಂಬರುವ ಹಲವು ಸ್ಟಾರ್‌ ನಟರ ಚಿತ್ರಗಳಿಗೆ ನಾಯಕಿಯಾಗುತ್ತಾರೆ, ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗುತ್ತಾರೆ ಎಂದು ಸಿನಿ ಪ್ರಿಯರು ಭಾವಿಸಿದ್ದರು. ಇನ್ನು ಮಾನ್ವಿತಾ ಕನ್ನಡದಲ್ಲಿ ಹಲವು ಚಿತ್ರಗಳ ಆಫ‌ರ್ ಬರುತ್ತಿದ್ದು, ಇದರ ಜೊತೆಗೆ ಕೂಡ ತೆಲುಗಿನ ರಾಮ್‌ಗೊಪಾಲ್‌ ವರ್ಮ(ಆರ್‌ಜಿವಿ) ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂದಿರುವುದಾಗಿ ಘೋಷಿಸಿಕೊಂಡಿದ್ದರು. ಆದರೆ, ನಂತರ ಅದೇನಾಯಿತೋ ಏನೋ, ಮಾನ್ವಿತಾ ಅಭಿನಯದ ಯಾವ ಚಿತ್ರಗಳೂ ಸೆಟ್ಟೇರಲೇ ಇಲ್ಲ. ಸುಮಾರು ಒಂದೂವರೆ ವರ್ಷಗಳ ಹಿಂದೆ ಮಾನ್ವಿತಾ ಅಭಿನಯಿಸಿದ್ದ ತಾರಕಾಸುರ ಚಿತ್ರ ಕಳೆದ ತಿಂಗಳು ತೆರೆಕಂಡಿದ್ದರೂ ಆ ಚಿತ್ರದಿಂದ ಮಾನ್ವಿತಾಗೆ ಹೆಚ್ಚೇನು ಲಾಭವಾಗಲಿಲ್ಲ. ಇನ್ನು ಆರ್‌ಜಿವಿ ಚಿತ್ರ ಯಾವಾಗ ಶುರುವಾಗುತ್ತದೆ ಎನ್ನುವುದಕ್ಕೂ ಮಾನ್ವಿತಾ ಬಳಿಯೂ ಉತ್ತರವಿಲ್ಲ.  ಇವೆಲ್ಲದರ ನಡುವೆ ಮಾನ್ವಿತಾ ನಾಯಕಿಯಾಗಿರುವ ಮತ್ತೂಂದು ಚಿತ್ರದ ಬಗ್ಗೆ ಸುದ್ದಿ ಹೊರ ಬಿದ್ದಿದೆ. ನಟ ರಾಮ್‌ಕುಮಾರ್‌ ಪುತ್ರ ಧೀರನ್‌ ರಾಮ್‌ಕುಮಾರ್‌ ಅಭಿನಯದ ದಾರಿ ತಪ್ಪಿದ ಮಗ  ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬುದು ಸದ್ಯದ ಸುದ್ದಿ. ಇನ್ನು ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಎಲ್ಲ ಅಂದು ಕೊಂಡಂತೆ ನಡೆದರೆ ಮುಂದಿನ ಜನವರಿ ಎರಡನೇ ವಾರ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. 

Advertisement

ಈಗಾಗಲೇ ಮಾನ್ವಿತಾ ಮರಾಠಿ ಸಿನಿಮಾವೊಂದರಲ್ಲೂ ನಟಿಸುತ್ತಿದ್ದಾರೆ. ಆ ಚಿತ್ರಕ್ಕಾಗಿ ಮಾನ್ವಿತಾ ಮರಾಠಿ ಕೂಡ ಕಲಿಯುತ್ತಿದ್ದಾರಂತೆ. ಇನ್ನು ತಮ್ಮ ಕೆರಿಯರ್‌ ಬಗ್ಗೆ ಮಾತನಾಡುವ ಮಾನ್ವಿತಾ, “ನಾನು ಯಾವ ಚಿತ್ರಕ್ಕೂ ಕಾಯುವುದಿಲ್ಲ. ಯಾರೋ ಬಂದು ಅವಕಾಶ ಕೊಡ್ತಾರೆ ಅಂತಾನೂ ನಂಬುವುದಿಲ್ಲ. ಯಾರೋ ಬಂದುಬಿಟ್ಟು, ಸಿನಿಮಾ ಮಾಡಿ, ಭವಿಷ್ಯ ರೂಪಿಸುತ್ತಾರೆ, ನನ್ನ ಉದ್ಧಾರ ಮಾಡಿಬಿಡುತ್ತಾರೆ ಅಂತ ನಂಬಿಲ್ಲ. ನನ್ನನ್ನು ನಾನು ನಂಬಿದ್ದೇನೆ. ನನ್ನ ಕೆಲಸ, ಶ್ರದ್ಧೆ ನಂಬಿದ್ದೇನೆ. ಸಿನಿಮಾ ಜರ್ನಿ ಸಖತ್‌ ಖುಷಿ ಕೊಟ್ಟಿದೆ. ನನ್ನ ಕೆಲಸದಲ್ಲಿ ಹಾನೆಸ್ಟ್‌ ಇಲ್ಲ ಅಂತ ನನಗೇ ಅನ್ನಿಸಿಬಿಟ್ಟರೆ, ನಾನು ಕೆಲಸ ನಿಲ್ಲಿಸಿಬಿಡ್ತೀನಿ. ಆದರೆ, ನಾನು ಯಾವುದೇ ಕೆಲಸ ಮಾಡಿದರೂ, ಅಲ್ಲಿ ಶ್ರದ್ಧೆ ಮತ್ತು ಶ್ರಮ ಇದ್ದೇ ಇರುತ್ತದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next