ಮಾನ್ವಿ: ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಗೆ ಗೈರಾದ ಹಾಗೂ ಅಪೂರ್ಣ ಮಾಹಿತಿಯೊಂದಿಗೆ ಆಗಮಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ತಾಲೂಕು ಪಂಚಾಯತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಶಾಂತಪ್ಪ ಕಪಗಲ್, ಮೊದಲು ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಸಾಮಾನ್ಯ ಸಭೆ ನಡೆಯುವ ಪ್ರತಿ ಬಾರಿಯೂ ಈ ಬಗ್ಗೆ ಒತ್ತಾಯಿಸುತ್ತಿದ್ದರೂ ಯಾವುದೆ ಕ್ರಮ ಆಗುತ್ತಿಲ್ಲ. ಹೀಗಾಗಿ ಕೆಲ ಅಧಿಕಾರಿಗಳು ಭಯವಿಲ್ಲದೆ ಸಭೆಗೆ ಗೈರಾಗುತ್ತಾರೆ. ಆದ್ದರಿಂದ ಕೂಡಲೇ ನೋಟಿಸ್ ಜಾರಿ ಮಾಡಿ, ಕ್ರಮಕ್ಕೆ ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದು ಪಟ್ಟು ಹಿಡಿದರು.
ನಂತರ ಮಾತನಾಡಿದ ಸಂತೋಷ ರಾಜ್‌ಗುರು, ಸಭೆಯ ಬಗ್ಗೆ ನಮಗೆ ಮುಂಚಿತವಾಗಿಯೇ ಮಾಹಿತಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶುಕ್ರವಾರ ಸಭೆ ಇದ್ದರೆ ತಮಗೆ ಗುರುವಾರ ರಾತ್ರಿ 8 ಗಂಟೆಗೆ ಮಾಹಿತಿ ತಿಳಿದಿದೆ. ಅಲ್ಲದೆ ಸಭೆಯಲ್ಲಿ ಚರ್ಚಿಸುವ ವಿಷಯಗಳೆ ತಿಳಿಸಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂಚಿತವಾಗಿ ನೀಡುವುದಿಲ್ಲ. ಸಭೆ ಪ್ರಾರಂಭವಾದಾಗ ತಾಪಂ ಅಧಿಕಾರಿಗಳು ದಾಖಲೆಗಳನ್ನು ನೀಡುತ್ತಾರೆ. ಕೇವಲ ಕಾಟಾಚಾರಕ್ಕೆ ಸಭೆ ನಡೆಸಲಾಗುತ್ತದೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು, ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಅನುದಾನದ 2 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನಾದ್ಯಂತ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೇಳಿದರು. ಅಧಿಕಾರಿಗಳ ಹತ್ತಿರ ದಾಖಲೆಗಳೆ ಇರಲಿಲ್ಲ.
ತಾಪಂ ಅಧ್ಯಕ್ಷ, ಕಾರ್ಯನಿರ್ವಾಹಕ ಅಧಿಕಾರಿಗಳು ನಂತರ ನೀಡುವುದಾಗಿ ಹೇಳಿ ಜಾರಿಕೊಂಡರು. ಅಲ್ಲದೆ ವಿವಿಧ ಇಲಾಖೆ ಅಧಿಕಾರಿಗಳಿಗೆ ದಾಖಲೆ ಕೇಳಿದರೆ ನೀಡುವುದೆ ಇಲ್ಲ. ಆರೋಗ್ಯ ಇಲಾಖೆ ಮಾಹಿತಿ ಕೇಳಿ 6 ತಿಂಗಳು ಗತಿಸಿದರೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಒ ಉಮೇಶ, ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಸದಸ್ಯರು ಕೇಳಿದ ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು. ಸದಸ್ಯರ ಒಪ್ಪಿಗೆ ಮೇರೆಗೆ ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಗಿತು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರಯ್ಯ ಸ್ವಾಮಿ, ಸಿಡಿಪಿಒ ಇಲಾಖೆ ಸುಭದ್ರಾದೇವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವರದಿ ಮಂಡಿಸಿದರು. ತಾಲೂಕು ಪಂಚಾಯತಿ ಅಧ್ಯಕ್ಷ ಚನ್ನಬಸವ ಬೆಟ್ಟದೂರು, ಸದಸ್ಯರಾದ ಬಸಪ್ಪ ಹಾಲಾಪುರ, ಮಲ್ಲಿಕಾರ್ಜುನ್ ಮಲ್ಲಟ, ಶಿವಕುಮಾರ, ಅಯ್ಯಮ್ಮ ಸಾದಾಪುರ, ಉರುಕುಂದಪ್ಪ ಮದ್ಲಾಪುರ, ಬಸಣ್ಣ ಅರೋಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.