ಮಾನ್ವಿ: ಪಟ್ಟಣದಲ್ಲಿ ಎಲ್ಲಿ ನೋಡಿದರೂ ಬೈಕ್‌ಗಳೇ ಕಾಣುತ್ತಿದ್ದು, ಪ್ರಮುಖ ವೃತ್ತ, ರಸ್ತೆಗಳಲ್ಲಿ ಅಡ್ಡಾದಿಡ್ಡಿ ಬೈಕ್ ನಿಲ್ಲಿಸುವುದರಿಂದ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ.
ಪಟ್ಟಣದ ಬಸ್ ನಿಲ್ದಾಣ, ಬಸವ ವೃತ್ತ, ವಾಲ್ಮೀಕಿ ವೃತ್ತ, ಆಕ್ಸಿಸ್ ಬ್ಯಾಂಕ್ ಎದುರಿಗೆ, ಪ್ರವಾಸಿ ಮಂದಿರ ಹತ್ತಿರ, ತಹಶೀಲ್ದಾರ್ ಕಚೇರಿ, ಕೋರ್ಟ್ ಹತ್ತಿರ, ಎಸ್‌ಬಿಎಚ್ ಬ್ಯಾಂಕ್ ಮತ್ತು ಪುರಸಭೆ ಎದುರಿಗೆ ಹೀಗೆ ಅತಿ ಹೆಚ್ಚು ಜನದಟ್ಟಣೆ ಪ್ರದೇಶಗಳಲ್ಲಿ ಬೈಕ್‌ಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಈ ರಸ್ತೆಗಳಲ್ಲ ಪಾದಚಾರಿಗಳು, ಬಸ್, ಕಾರು, ಲಾರಿಗಳ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ. ಪೊಲೀಸರು ಸಂಚಾರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಸುಗಮ ಸಂಚಾರಕ್ಕೆ ಅಡ್ಡಿ: ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಬಸವ ವೃತ್ತದವರೆಗಿನ ರಸ್ತೆ ಎರಡೂ ಬದಿ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದೆ. ಈ ರಸ್ತೆಯಲ್ಲೇ ತಳ್ಳು ಗಾಡಿಗಳಲ್ಲಿ ವ್ಯಾಪಾರಸ್ಥರು ತರಕಾರಿ, ಹಣ್ಣು ಮಾರುತ್ತಾರೆ. ಇದರಿಂದಾಗಿ ಎರಡು ಬದಿಯ ಅರ್ಧದಷ್ಟು ರಸ್ತೆ, ಬೈಕ್, ತಳ್ಳುಗಾಡಿಗಳಿಂದ ಮುಚ್ಚಿಹೋಗಿರುತ್ತದೆ. ಬಸ್, ಲಾರಿಗಳು ಬಂದರೆ ಟ್ರಾಫಿಕ್ ಜಾಮ್ ಆಗುತ್ತದೆ. ಬಸ್ ನಿಲ್ದಾಣದಿಂದ ಬಸವ ವೃತ್ತ ದಾಟಲು ಚಾಲಕರು ಹರಸಾಹಸ ಪಡಬೇಕಾಗುತ್ತದೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲ: ಬಸವ ವೃತ್ತದಿಂದ ಪುರಸಭೆವರೆಗಿನ ರಸ್ತೆ ಜನ, ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಬಸ್ ನಿಲ್ದಾಣ, ಕೋರ್ಟ್, ತಹಶೀಲ್ದಾರ್ ಕಚೇರಿ, ಮಾರ್ಕೆಟ್, ಬ್ಯಾಂಕ್‌ಗಳು ಈ ರಸ್ತೆಯಲ್ಲೇ ಇವೆ. ಎಲ್ಲೂ ಬೈಕ್ ನಿಲುಗಡೆಗೆ ಪ್ರತ್ಯೇಕ ಸ್ಥಳಾವಕಾಶವಿಲ್ಲ. ಹೀಗಾಗಿ ಸಾರ್ವಜನಿಕರು ತಮಗೆ ಕೆಲಸವಿರುವ ಅಂಗಡಿಗಳ ಮುಂದೆ ಬೈಕ್ ನಿಲ್ಲಿಸಿ ಹೋಗುತ್ತಾರೆ. ಆದರೆ ತರಕಾರಿ ವ್ಯಾಪಾರಕ್ಕೆ ಪ್ರತ್ಯೇಕ ಮಾರುಕಟ್ಟೆ ಇದ್ದರೂ ವ್ಯಾಪಾರಸ್ಥರು ಮಾತ್ರ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಈ ರಸ್ತೆಯ ಫುಟ್ಪಾತ್ ಮೇಲೂ ಹಣ್ಣಿನ ಅಂಗಡಿ ಹಚ್ಚಲಾಗಿದ್ದು, ಪಾದಚಾರಿಗಳ ಓಡಾಟಕ್ಕೂ ಜಾಗೆ ಇಲ್ಲದಾಗಿದೆ.
ಬಸ್ ನಿಲ್ದಾಣದಲ್ಲೂ ಅಡ್ಡಾದಿಡ್ಡಿ ನಿಲುಗಡೆ: ಇನ್ನು ಬಸ್ ನಿಲ್ದಾಣದಲ್ಲಂತೂ ಬೈಕ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದ್ದು, ಬಸ್ ನಿಲುಗಡೆಗೆ ತೊಂದರೆ ಆಗುತ್ತಿದೆ. ಜಿಲ್ಲೆಯಲ್ಲೇ ಮಾನ್ವಿ ಬಸ್ ನಿಲ್ದಾಣ ಅತ್ಯಂತ ಚಿಕ್ಕದಾಗಿದೆ. ನಿಲ್ದಾಣದ ಎರಡೂ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಬಸ್‌ಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ. ನಿಲ್ದಾಣದ ಸಿಬ್ಬಂದಿ ಬೈಕ್ ಸವಾರರಿಗೆ ಹೇಳಿ ಹೇಳಿ ಬೇಸತ್ತಿದ್ದಾರೆ. ಜನ ಕೂಡ ಎಲ್ಲಿ ಬೈಕ್ ನಿಲ್ಲಿಸಬೇಕು, ಪಾರ್ಕಿಂಗ್ ವ್ಯವಸ್ಥೆ ಮಾಡಿ ಎಂದು ಸಿಬ್ಬಂದಿಯೊಂದಿಗೆ ವಾದಕ್ಕಿಳಿಯುವುದು ಸಾಮಾನ್ಯವಾಗಿದೆ. ಪುರಸಭೆ ಮತ್ತು ಪೊಲೀಸ್ ಇಲಾಖೆ ಪಟ್ಟಣದಲ್ಲ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಜತೆಗೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.